ಯಾರಿಗೂ ಬೇಡವಾದ ರಾಜೀವ್ ಗಾಂಧಿ ಅಧಿಕಾರ ವಿಕೇಂದ್ರೀಕರಣದ ಮಹತ್ವ

2 years ago

ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ರಾಜೀವ್ ಗಾಂಧಿ ಅವರು, ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನದ 73 ಮತ್ತು 74ನೇ ಕಲಂಗಳಿಗೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರೀಕರಣದ ಬದ್ಧತೆಯನ್ನು ಪ್ರದರ್ಶಿಸಿದರು.

ಈ ಕಾನೂನಿನ ಪ್ರಕಾರ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಆರು ತಿಂಗಳ ಅವಧಿಯ ನಂತರ ಆಡಳಿತ ಅಧಿಕಾರಿಗಳು, ಅಧಿಕಾರದಲ್ಲಿ ಇರುವಂತಿಲ್ಲ. ಆದರೆ ಕರ್ನಾಟಕ ರಾಜ್ಯ ಸೇರಿದಂತೆ ಭಾರತ ದೇಶದ ಶೇಕಡಾ 90ರಷ್ಟು ಸ್ಥಳೀಯ ಸಂಸ್ಥೆಗಳಲ್ಲಿ, ಚುನಾವಣೆಯನ್ನು ನಡೆಸಿ ಅನೇಕ ವರ್ಷಗಳಾಗಿವೆ. ಇದಕ್ಕೆ ಬಿಬಿಎಂಪಿಯು ಸಾಕ್ಷಿಯಾಗಿದೆ.

ಬಿಬಿಎಂಪಿಯ ಜನಪ್ರತಿನಿಧಿಗಳ ಅವಧಿ ಮುಗಿಯುವ ಹಂತದಲ್ಲಿದ್ದ ಸಂದರ್ಭದಲ್ಲಿ ಯಾವುದೋ ಒಂದು ತಿದ್ದುಪಡಿ ಇಲ್ಲವೇ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡನೆ, ಮುಂತಾದಂತಹ ನೆಪಗಳನ್ನು ಮಾಡಿಕೊಂಡು ಚುನಾವಣೆಗಳನ್ನು ಮುಂದೂಡುತ್ತಲೇ ಬರುತ್ತಾರೆ. ಕಳೆದ 20 ವರ್ಷದ ಅವಧಿಯಲ್ಲಿ ಬೆಂಗಳೂರಿನ ಆಡಳಿತ ವ್ಯವಸ್ಥೆಗೆ ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಸಿಯೇ ಇರುವುದಿಲ್ಲ. ಈಗ ನಾಲ್ಕು ವರ್ಷಗಳಾದರೂ ಬಿಬಿಎಂಪಿಯ ಚುನಾವಣೆ ಯಾರಿಗೂ ಬೇಕಿಲ್ಲ. ಜನಸಾಮಾನ್ಯರು ತಮ್ಮ ರಸ್ತೆಯಲ್ಲಿನ ಕಸ ತಮ್ಮ ರಸ್ತೆಯಲ್ಲಿನ ಗುಂಡಿ ತಮ್ಮ ಮನೆಯ ನಲ್ಲಿಯ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪದ ಸಮಸ್ಯೆ, ಇವುಗಳನ್ನ ಹೇಳಿಕೊಳ್ಳಲು ಶಾಸಕರ ಬಳಿಗೆ ಇಲ್ಲವೇ ಲೋಕಸಭಾ ಕ್ಷೇತ್ರದ ಸದಸ್ಯರ ಬಳಿಗೆ ಹೋಗಬೇಕು. ಅವರಿಗೆ ಇವುಗಳನ್ನ ಕೇಳುವ ಪುರುಸೊತ್ತು ಇರುವುದಿಲ್ಲ. ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದೆ ಬೆಂಗಳೂರು ನಗರದ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ರಸ್ತೆಗಳ ಗುಂಡಿಯನ್ನ ಮುಚ್ಚಲು ಉಪಮುಖ್ಯಮಂತ್ರಿಗಳು ಎಚ್ಚರಿಕೆಯನ್ನು ಕೊಡಬೇಕಾದ ಅಂತಹ ಪರಿಸ್ಥಿತಿ ಬಂದು ನಿಂತಿದೆ. ಇದರ ಬದಲಿಗೆ ಸ್ಥಳೀಯ ಆಡಳಿತ ವ್ಯವಸ್ಥೆ ಇದ್ದಿದ್ದರೆ ನಾಗರೀಕರಿಗೆ ಸಾಕಷ್ಟು ಅನುಕೂಲಗಳು ಆಗುತ್ತಿತ್ತು. ಸಮಸ್ಯೆಗಳು ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ಕಾಣುತ್ತಿತ್ತು. ಸರ್ಕಾರವೇ ಬಂದು ಎಲ್ಲವನ್ನು ಮಾಡುವುದಾದರೆ ಅದು ಸಾಧ್ಯವಾಗದ ಮಾತು.

ರಾಜೀವ್ ಗಾಂಧಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೂಡಲೇ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನ ನೆಪಗಳನ್ನ ಹೇಳದೆ ಮಾಡುವಂತೆ ನಿರ್ದೇಶನಗಳನ್ನ ನೀಡಿ. ಸರಿಯಾದ ಸಮಯಕ್ಕೆ ಲೋಕಸಭೆ, ವಿಧಾನಸಭೆ, ರಾಜ್ಯಸಭೆ, ವಿಧಾನಪರಿಷತ್ತಿನ, ಚುನಾವಣೆಗಳನ್ನ ತಡ ಮಾಡದೆ ನಡೆಸಿ ಅಧಿಕಾರಗಳನ್ನ ಪಡೆದುಕೊಳ್ಳುವ ಚುನಾಯಿತ ಪ್ರತಿನಿಧಿಗಳಿಗೆ, ತಮ್ಮಂತೆ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿನಿಧಿಗಳಾಗಲು ಆಸಕ್ತರು ಸಹಸ್ರಾರು ಸಾರ್ವಜನಿಕ ಜೀವನದಲ್ಲಿ ತುಂಬಿದ್ದಾರೆ ಎನ್ನುವ ಅರಿವು ಇರಬೇಕು. ವಿಕೇಂದ್ರೀಕರಣದ ಬಗ್ಗೆ ಕೇವಲ ಮಾತನಾಡಿದರೆ ಸಾಲದು, ಅಧಿಕಾರ ವಿಕೇಂದ್ರೀಕರಣ ಮಹಾತ್ಮ ಗಾಂಧೀಜಿ ಅವರ ಪ್ರಬಲವಾದಂತಹ ವಿಚಾರವೂ ಆಗಿತ್ತು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply