ಬೆಂಗಳೂರು: ಮಹಾತ್ಮ ಗಾಂಧಿ ಅವರ ಕನಸಿನ ಅಧಿಕಾರ ವಿಕೇಂದ್ರೀಕರಣ ಮತ್ತು ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದವರು ದಿ. ರಾಜೀವ್ ಗಾಂಧಿ ಎಂದು ಬಣ್ಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದವರಿಗೂ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ 2023 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣ ಮಹಾತ್ಮ ಗಾಂಧಿಯವರ ಕನಸಾಗಿತ್ತು. ಇದರಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಂಬಿದ್ದರು. ಹೀಗಾಗಿ ಗ್ರಾಮ ಸ್ವರಾಜ್ಯವನ್ನು ಪ್ರತಿಪಾದಿಸಿದರು. ಗ್ರಾಮಗಳ ಅಭಿವೃದ್ಧಿ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಗಾಂಧೀಜಿಯವರ ನೀತಿಯಾಗಿತ್ತು ಎಂದು ವಿವರಿಸಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ಆಶಯದಂತೆ ಅಧಿಕಾರ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದರು. ಜನತಂತ್ರದ ವಿಕೇಂದ್ರೀಕರಣಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದವರು ರಾಜೀವ್ ಗಾಂಧಿ ಮತ್ತು ಇದನ್ನು ಜಾರಿ ಮಾಡಿದವರು ಮಾಜಿ ಪ್ರಧಾನಿ ನರಸಿಂಹರಾವ್ ಎಂದು ವಿವರಿಸಿದರು.
ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಗಳಲ್ಲಿ ಶೇ.50 ಮೀಸಲಾತಿ ಜಾರಿಗೆ ಆಗಲು ಕಾರಣ ಆದವರು ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್. ಈಗ ಕೇಂದ್ರ ಸರ್ಕಾರ ಜಾರಿ ಮಾಡಿದ್ದೀವಿ ಎಂದು ಹೇಳಿಕೊಳ್ಳುತ್ತಿರುವ ಮಹಿಳೆಯರ ರಾಜಕೀಯ ಮೀಸಲಾತಿಗೆ ಮುನ್ನುಡಿ ಬರೆದದ್ದು ಕಾಂಗ್ರೆಸ್. ಈಗ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.
ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ: ಇದಾದ ಬಳಿಕ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ. ಯಾವುದೇ ಪ್ರಚಾರದ ಸಾಮಾಗ್ರಿ ಮತ್ತು ತಂತ್ರಜ್ಞಾನ ಇಲ್ಲದೆ ಕೇವಲ ಅಹಿಂಸೆ ಮತ್ತು ತಮ್ಮ ಬದುಕಿನ ಸರಳತೆಯಿಂದಲೇ ಮಹಾತ್ಮಗಾಂಧಿ ವಿಶ್ವದ ಮೂಲೆ ಮೂಲೆಗೆ ತಲುಪಿದರು ಎಂದು ನುಡಿದರು.
ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು, “ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, “ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ” ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಉದಾಹರಿಸಿದರು.
ನಮ್ಮ ಸರ್ಕಾರ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಮಹಾತ್ಮಗಾಂಧಿ ಅವರ ಆಶಯಗಳು ಸೇರಿವೆ. ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿ ಎಂದರು.
ಅಪರೂಪದ ಸಂತ: ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿ ಅವರ 154ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಗಳ ಉದ್ದಾರ ಮತ್ತು ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ ಎನ್ನುವ ಸರಳ ಮತ್ತು ವೈಜ್ಞಾನಿಕ ಆರ್ಥಿಕ ನೀತಿಯನ್ನು ನಮಗೆ ಕೊಟ್ಟವರು ಮಹಾತ್ಮಗಾಂಧಿ ಎಂದು ಹೇಳಿದರು.
ಗಾಂಧಿ ಅವರ ಅಭಿವೃದ್ಧಿ ಮಾದರಿ ಇವತ್ತಿಗೂ ಶ್ರೇಷ್ಠವಾದದ್ದು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಘನತೆ ಮತ್ತು ಗೌರವದಿಂದ ಬಾಳಬೇಕು ಎನ್ನುವುದು ಅವರ ಗುರಿಯಾಗಿತ್ತು. ಹೀಗಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯಂತೆ ಅರೆ ಬೆತ್ತಲೆಯಾಗಿ ಉಡುಪು ಧರಿಸುತ್ತಿದ್ದರು. ನುಡಿದಂತೆ ನಡೆಯುವುದು ಗಾಂಧಿ ಅವರ ಬದುಕಾಗಿತ್ತು ಎಂದು ವಿವರಿಸಿದರು.
ಮಹಾತ್ಮಗಾಂಧಿ ಅಪರೂಪದ ಸಂತರಾಗಿದ್ದರು. ಇವರ ಅಹಿಂಸಾ ಮಾರ್ಗದ ಸ್ವಾತಂತ್ರ್ಯ ಚಳವಳಿ ಭಿನ್ನವಾದದ್ದು. ನೆಹರೂ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನ ಗಾಂಧಿಯವರು ದೆಹಲಿಯಲ್ಲಿ ಇರಲಿಲ್ಲ. ಕೋಲ್ಕತ್ತಾದಲ್ಲಿ ದೇಶ ವಿಭಜನೆಯಿಂದಾದ ಅನಾಹುತಗಳಲ್ಲಿ ನೊಂದವರ ಜನರ ಕಣ್ಣೀರು ಒರೆಸುತ್ತಿದ್ದರು ಎಂದು ಅವರ ಸರಳತೆ ಮತ್ತು ಸೌಹಾರ್ದದ ಬದುಕನ್ನು ವಿವರಿಸಿದರು.
ರವೀಂದ್ರನಾಥ ಠಾಗೂರರು ಗಾಂಧಿ ಅವರಿಗೆ ಮಹಾತ್ಮ ಎಂದು ಕರೆದರು. ಗಾಂಧಿ ಅವರ ಸತ್ಯ ಮಾರ್ಗದ ಬದುಕಿನ ಪ್ರತಿ ಹೆಜ್ಜೆಗಳು, ಅವರ ಸತ್ಯಾನ್ವೇಷಣೆ ಠಾಗೂರರು ಮಹಾತ್ಮ ಎಂದು ಕರೆಯಲು ಕಾರಣವಾಯಿತು ಎಂದು ಸ್ಮರಿಸಿದರು.
ಮಾಜಿ ಪ್ರಧಾನಿ ದಿ.ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಮಹಾತ್ಮಗಾಂಧಿಯವರ ಸರಳತೆ ಮತ್ತು ಆದರ್ಶಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡ ಅಪ್ಪಟ ಪ್ರಾಮಾಣಿಕ ನಾಯಕರಾಗಿದ್ದರು. ರೈಲು ಅಪಘಾತದ ಹೊಣೆ ಹೊತ್ತು ರಾಜೀನಾಮೆ ನೀಡಿದ ಆದರ್ಶ ನಾಯಕರಾಗಿದ್ದರು. ಹೀಗಾಗಿ ಗಾಂಧಿ ಮತ್ತು ಶಾಸ್ತ್ರಿ ಇಬ್ಬರೂ ನಮಗೆ ಆದರ್ಶಪ್ರಾಯರು ಎಂದು ಮೆಚ್ಚುಗೆ ಸೂಚಿಸಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.




