ಒಂದು ಅಸಾಧಾರಣ ಪ್ರಕರಣ!?

2 years ago

ಆತುದರದಲ್ಲಿ ಬೆಳಗಿನ‌ ಬಸ್ ಹತ್ತಿ ಕಿಟಕಿ ಪಕ್ಕ ಸೀಟ್ ಹಿಡಿದೆ. ಅದೇನೋ ಎಡಗಡೆಯೇ ಆಗಬೇಕು. ಮೊಬೈಲ್ ಆನ್ ಮಾಡಿ ಕಿವಿಗೆ ಏರ್ ಫೋನ್ ಸಿಗಿಸಿ ತದೇಕಚಿತ್ತದಿಂದ ಮೊಬೈಲ್ ನೋಡುವಾಗ ತಡವಾಗಿ ಬಂದ ಸಹೋದ್ಯೋಗಿ ಮಿತ್ರ ಬಷೀರ್ ಬಸ್ಸಿನಲ್ಲೆಲ್ಲೂ ಸೀಟಿಲ್ಲದೆ, ಕೊನೆಗೆ ವಿಧಿಯಿಲ್ಲದೇ ನನ್ನ ಪಕ್ಕದಲ್ಲಿ ಕೂತ…. ನನ್ನ ಕಿವಿಯ ಏರ್ ಪೋನ್ ತೆಗೆದು  ಮಾತಿಗಿಳಿದೆ…

ಬಸ್ ಒಂದೈದಾರೂ ಕಿಲೋಮೀಟರ್ ದೂರ ಹೋಗಿರಬಹುದು.. ಬಸ್ಸಿನಲ್ಲಿ ಹಾಕಿದ್ದ ಚಿತ್ರಗೀತೆಯಲ್ಲಿ ಒಳ್ಳೆಯ ಹಾಡಿಲ್ಲವೆಂದು, ಅಂಥಹ ಹಾಡಿನಿಂದ  ನಮ್ಮ ಮೂಡ್ ಹಾಳಾಗುತ್ತಿದೆಯೆಂದು, ತನ್ನ ಬ್ಲೂಟುತ್ ಮೂಲಕ‌ ಹಾಡನ್ನು ನಿಯಂತ್ರಿಸುತ್ತಿದ್ದ ಹುಡುಗಿಯ ವಿರುದ್ಧ ನಾನು ಬಸ್ ಕಂಡಕ್ಟರ್ ಗೆ ಹೈಕೋರ್ಟ್ ಅಪೀಲ್ ಹೋದೆ. ಕೂಡಲೇ ನನ್ನ ಅಂತರಾತ್ಮವನ್ನು ಗ್ರಹಿಸಿ ರವಿಚಂದ್ರನ್ ಹಾಡುಗಳನ್ನು ಹಾಕಿ ನನ್ನನ್ನು ಹತೋಟಿಗೆ ತಂದ. ಈ ಪ್ರಕರಣದ ನಡುವೆಯೇ ಬಸ್ಸಿನೊಳಗೆ ಮತ್ತೊಂದು ಉಪಪ್ರಕರಣ ನಡೆದೇ ಹೋಯಿತು.

ಇಷ್ಟೊತ್ತಿಗೆ ಬಸ್ ಬಿಳುವಾಲಕ್ಕೆ ಬಂದು ನಿಂತಿತು. ಕೂಡಲೇ ವಯಸ್ಸಾದ ಮುದುಕಿ ಮೊಮ್ಮಗಳು ಬಸ್ ಹತ್ತಿದರು. ಬಷೀರ್ ಕೂಡಲೇ ನನಗಿಂತಲೂ ಮೊದಲೇ ವಯಸ್ಸಾದ ಮುದುಕಿಗೆ ಸೀಟ್ ಬಿಟ್ಟುಕೊಟ್ಟು ಮಾನವೀಯತೆ ಮೆರೆದ. ನನಗೂ ಆಸೆಯಿದ್ದರೂ ಮೊಮ್ಮಗಳು ಇನ್ನೂ ನಿಲ್ಲುವ ಶಕ್ತಿಯಿದೆಯೆಂಬ ಕಾರಣಕ್ಕೆ ಸುಮ್ಮನಾದೆ. ನನ್ನ ಪಕ್ಕ ಕೂತಿದ್ದ ಅಜ್ಜಿ ಮೊಮ್ಮಗಳ ಮೇಲಿನ ಪ್ರೀತಿಗೆ ತನ್ನ ತೊಡೆಯ ಮೇಲೆ ಕೂರಿಸಿಕೊಂಡಿತು. ಬಸ್ ಮತ್ತೆ ಮೂರ್ನಾಲ್ಕು ಕಿಲೋಮೀಟರ್ ಹೋಗಿರಬಹುದು, ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆ ಹುಡುಗಿ ತನ್ನೆರಡು ಕೈಗಳನ್ನು ತನ್ನ ಬಾಯಿಗಿಟ್ಟುಕೊಂಡಳು. ನಾನೂ ಪ್ರಾಯಶಃ ಹಾಡನ್ನು ಕೇಳುವ ಸಂತೋಷ ಉತ್ಸಾಹಗಳೆರೆಡು ಇಮ್ಮಡಿಸಿರಬೇಕಂದುಕೊಂಡೆ. ಆದರೆ ಅಷ್ಟರಲ್ಲಿ ಫಲಿತಾಂಶ ಬೇರೆಯದೇ ಅಪಾಯ ಸೂಚನೆ ನೀಡುತಿತ್ತು… ಕಿಟಕಿಯ ಪಕ್ಕ ಕೂತಿದ್ದ ನನಗೆ ಅಜ್ಜಿ ಅಡ್ಡಲಾಗಿ ಕೂತು ಕ್ಷೀಣಸ್ವರದಲ್ಲಿ “ಮೊಮ್ಮಗಳು ವಾಮಿಟ್ ಮಾಡುತ್ತಾಳೆಂದು” ಆಜ್ಞೆ ಕೊಟ್ಟಿದ್ದೇ ತಡ ನನಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಅವರಿಬ್ಬರೂ ಅಡ್ಡವಿದ್ದರು. ಅಷ್ಟರಲ್ಲಿ ನಾನೂ ಕೂಡ ಇದು ಹೇಗಿದ್ದರೂ  ಘಾಟ್ ಸೆಕ್ಷನ್ ಗಳಲ್ಲಿ ಬರುವಂತಹ ಅಸಾಧಾರಣ ವಾಂತಿಯಲ್ಲವೆಂದು ಭ್ರಮಿಸಿ, ಏಳುವುದು ತಡಮಾಡಿದೆ.

ಕೂಡಲೇ ಹುಡುಗಿಯ ಬಾಯಿಂದ ಗಂಗಾಪ್ರವಾಹದಂತೆ ಹಾಲ್ನೋರೆಯಾಗಿ ಮುಂದಿನ ಸೀಟಿನಲ್ಲಿದ್ದವರ ತಲೆಯಮೇಲೆ ಕ್ಷೀರಾಭಿಷೇಕದಂತೆ ಹರಡಿಬಿಟ್ಟಿತು. ಅಕ್ಕಪಕ್ಕದವರು ಚದುರಿಹೋದರು. ನಾನು ಅಜ್ಜಿ ಮೊಮ್ಮಗಳ ನಡುವೆ ಸಿಕ್ಕಿಹಾಕಿಕೊಂಡೆ. 

ಮಾಡಿದ ವಾಮಿಟ್ಟಿನೊಳಗೆ  ಬೆಳಿಗ್ಗೆ ತಿಂದು ಬಂದ ಬಿಸಿಬೇಳೆಬಾತು ಬಸ್ಸಿನಲ್ಲಿದ್ದವರನ್ನು ಅಣಕಿಸಿ ನಗುತ್ತಿತ್ತು. ಇದುವರೆಗೂ ಆರು ವರ್ಷಗಳಲ್ಲಿ ಮೊದಲ‌ ಅನುಭವ. ಕೆಲವರು ಸೆರಗಿನಿಂದ ಬಾಯಿಮುಚ್ಚಿಕೊಂಡರೆ, ಮತ್ತೆ ಕೆಲವರು ಛೇ..ಛೇ… ಥೂ…ಥೂ ಎಂದೂ ಇನ್ನೂ ಕೆಲವರು ‘ಅಯ್ಯೋಪಾಪ’ವೆಂದೋ ಕನ್ನಡ ವ್ಯಾಕರಣದ ಅನುಕರಣಾವ್ಯಗಳನ್ನೆಲ್ಲಾ ಹೇಳಿ  ಆಕೆಯ ಬಗ್ಗೆ ಕನಿಕರ ವ್ಯಕ್ತಪಡಿಸಿದರು.

ನಾನೂ ಒಳ್ಳೆಯ ರವಿಚಂದ್ರನ್ ಹಾಡು ಹಾಕಿದ್ದರೆ ಆ ಹುಡುಗಿಗೆ ಹೀಗೆ ಆಗುತ್ತಿರಲಿಲ್ಲವೆಂದು ಆಕ್ಷೇಪಿಸಿದೆ… ನನ್ನ ಬಟ್ಟೆ ಕೈಮೇಲೂ ಆಯಿತು… ವಯೋ ಸಹಜ ಕಾರಣದಿಂದಲೋ ಅಥವಾ ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಇದಕ್ಕಿಂತ ಘೋರವಾದ  ಕಂಡ ದೃಶ್ಯಗಳಿಂದಲೋ   ನನಗೇನೂ ಇದು ಅಂಥಹ ಅಸಾಧಾರಣ ಪ್ರಕರಣ ಎನಿಸಲಿಲ್ಲ.

ಮಂಜುನಾಥ.ಬಿ, (ಕೋಟೆ)ಹೊಳೆಹೊನ್ನೂರು, ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದ.ಕಾ.ಯಗಟಿ

Leave a Reply