ನನ್ನ ಜಮಾನದ ಬಸ್

3 years ago

#sixtyyears #oldbus #memory #jagadishkoppa

61 ವರ್ಷಗಳ ಹಿಂದೆ ಆರು ವರ್ಷ ಬಾಲಕನಾಗಿದ್ದಾಗ ನಾನು ಪ್ರಯಾಣ ಮಾಡಿದ ಬಸ್ ಈ ರೀತಿಯಲ್ಲಿ ಇತ್ತು. ರಾಯಲ್ ಮೋಟಾರ್ಸ್ ಹೆಸರಿನ ಆ ಬಸ್ ಮದ್ದೂರಿನಿಂದ 19 ಕಿ.ಮೀ. ದೂರದ ಕೊಪ್ಪಕ್ಕೆ ಬಂದು ನಂತರ ಅಲ್ಲಿಂದ ಎಂಟು ಕಿ.ಮೀ. ದೂರದ ಹಾಗೂ ಮಂಡ್ಯ ಜಿಲ್ಲೆಯ ಕೊನೆಯ ಗ್ರಾಮ ಬೆಕ್ಕಳಲೆ ಎಂಬ ಊರಿಗೆ ಹೋಗಿ ನಂತರ ವಾಪಸ್ ಕೊಪ್ಪಕ್ಕೆ ಬಂದು ಮದ್ದೂರಿಗೆ ಹೋಗುತ್ತಿತ್ತು.

ಬೆಕ್ಕಳಲೆ ಗ್ರಾಮದಲ್ಲಿ ಇಳಿದು ಅಜ್ಜಿಯ ಕೈ ಹಿಡಿದುಕೊಂಡು ಶಿಂಷಾ ನದಿ ದಾಟಿ ಉಂಗ್ರ ಎಂಬ ತುಮಕೂರು ಜಿಲ್ಲೆಯ ಕಡೆಯ ಗ್ರಾಮದ ನನ್ನ ಸೋದರತ್ತೆಯ ಮನೆಗೆ ಹೋಗುತ್ತಿದ್ದೆ.

ಗಂಟೆಗೆ ಹತ್ತು ಕಿಲೊಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಈ ಬಸ್ ಅನ್ನು ಸ್ಟಾರ್ಟ್ ಮಾಡಲು ಇಂಗ್ಲೀಷ್‌ ನ Z ಆಕಾರದ ಕಬ್ಬಿಣದ ಸರಳನ್ನು ಅದರ ಮೂತಿಯೊಳಕ್ಕೆ ತುರುಕಿ ಗರ ಗರ ತಿರುಗಿಸಬೇಕಿತ್ತು.

ನಂತರ ನನ್ನೂರಿಗೆ ಮದ್ದೂರಿನಿಂದ ಎಸ್.ಎಲ್.ಎನ್. ಬಸ್, ಮಂಡ್ಯದಿಂದ ಎಸ್.ಎಲ್.ವಿ. ಹಾಗೂ ಪಂಚಲಿಂಗೇಶ್ವರ ಮತ್ತು ಕುಣಿಗಲ್ ನಿಂದ ಮಹಾಲಕ್ಷ್ಮಿ ಬಸ್ ಆರಂಭವಾದವು.

ಮದ್ದೂರಿನಿಂದ ಕೊಪ್ಪಕ್ಕೆ 19 ಕಿ.ಮೀ. ಪ್ರಯಾಣದ ಸಮಯ ಒಂದೂವರೆ ಗಂಟೆ. 28 ಕಿ.ಮೀ. ದೂರದ ಮಂಡ್ಯದಿಂದ ಎರಡೂವರೆ ಗಂಟೆ ಹಾಗೂ 30 ಕಿ.ಮೀ. ದೂರದ ಕುಣಿಗಲ್ ನಿಂದ ಕೇವಲ ಮೂರು ಗಂಟೆ ಅವಧಿಯಾಗಿತ್ತು.

ನಮ್ಮ ಜಮಾನದಲ್ಲಿ ಅಪ್ಪಂದಿರು, ಅವ್ವಂದಿರು ಹಾಗೂ ಅಜ್ಜ, ಅಜ್ಜಿಯರಿಗೆ ವೇಳೆಯಿತ್ತು. ಹಾಗಾಗಿ ಅವರ ಪಾಲಿಗೆ ಅದು ವಿಮಾನಗಳ ವೇಗವಾಗಿತ್ತು.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply