ಸ್ಪಷ್ಟ ಪ್ರಮೇಯಗಳ ಖಚಿತ ಫಲಿತಗಳ ಪ್ರಬುದ್ಧ ಲೇಖನಗಳು

2 years ago

ಡಾ. ಪುರುಷೋತ್ತಮ ಬಿಳಿಮಲೆಯವರ ” ವರ್ತಮಾನ ಭಾರತ” ಹಲವು ದೃಷ್ಟಿಗಳಿಂದ ಮಹತ್ವದ ಕೃತಿಯಾಗಿದೆ. ಇದರಲ್ಲಿ ಇಪ್ಪತ್ತೊಂದು ಲೇಖನಗಳಿವೆ. ಈ ಸಂಪುಟಕ್ಕೆ “ವರ್ತಮಾನ ಭಾರತ” ಎಂಬ  ಶೀರ್ಷಿಕೆಯನ್ನು ಬಿಳಿಮಲೆಯವರು ನೀಡಿದ್ದಾರೆ.  ದೇಶದ ಮುಂದಿರುವ ಸದ್ಯದ ಆತಂಕಗಳನ್ನು, ಪ್ರಸ್ತುತ ಬಿಕ್ಕಟ್ಟುಗಳನ್ನು ಮತ್ತು  ವರ್ತಮಾನ ಕಾಲಘಟ್ಟದ ಅಪಾಯಕಾರೀ ಹಿಮ್ಮುಖ ಚಲನೆಯನ್ನು ಪ್ರಜ್ಞಾಪೂರ್ವಕವಾಗಿ ವಿವರಿಸುವ ಮತ್ತು ವಿಶ್ಲೇಷಿಸುವ ಪ್ರಧಾನ ಉದ್ದೇಶಗಳನ್ನು ಹೊಂದಿರುವುದರಿಂದ ಈ ಕೃತಿಗೆ ಈ ಹೆಸರು ಅನ್ವರ್ಥವಾಗಿದೆ. 

ಸರ್ವಾಧಿಕಾರಿ ಪ್ರಭುತ್ವ, ಏಕಾಕೃತಿ ಸಂಸ್ಕತಿ ಚಿಂತನ, ಬಹುತ್ವಗಳ ನಿರಾಕರಣೆ ಮತ್ತು ನಾಶ, ಕೋಮು ವೈಷಮ್ಯ, ಮತ ಧರ್ಮದ ಅಮಲು, ಅಧಿಕಾರ ಮತ್ತು ಮಾಧ್ಯಮಗಳ ದುರ್ಬಳಕೆ ಮುಂತಾದುವು ಸದ್ಯ ಕಾಲಘಟ್ಟದ ಆತಂಕಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದ್ಯದ ಪ್ರಭುತ್ವ ಹೊಂದಿರಬೇಕಾದ ವಿವೇಕ ಮತ್ತು ಪ್ರಜೆಗಳು ಹೊಂದಿರಬೇಕಾದ ಎಚ್ಚರ ಇವುಗಳ ಬಗೆಗೂ ಹೇಳಿರುವುದರಿಂದ ಲೇಖನಗಳು ಪ್ರಸ್ತುತವೇ ಆಗಿವೆ. ಹಾಗಂತ ಇಲ್ಲಿನ ಲೇಖನಗಳಿಗೆ ಗತಕಾಲದ ಮತ್ತು ಭವಿಷ್ಯತ್ತಿನ ಗೋಚರವೇ ಇಲ್ಲ ಎಂದು ಹೇಳುವಂತಿಲ್ಲ. 

ವರ್ತಮಾನ ಭಾರತದ ಹೋರಾಟಗಳು, ಚಳುವಳಿಗಳು, ಪ್ರತಿಭಟನೆಗಳು, ನೀತಿ ನಿರೂಪಣೆಗಳನ್ನು ಕಟ್ಟಿಕೊಟ್ಟು ಅವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು  ನಿರೂಪಿಸುವ  ಅನೇಕ ಲೇಖನಗಳಲ್ಲಿ ನಿರ್ದಿಷ್ಟ ವಿಷಯದ ವಿಸ್ತ್ರತವಾದ  ಚಾರಿತ್ರಿಕ ವಿವರಗಳಿವೆ. ನಾಳೆಯ ದಿನಗಳಲ್ಲಿ ಭಾರತದಲ್ಲಿ ನಡೆಯಬೇಕಾದ ಸುಧಾರಣೆಗಳ ಬಗೆಗೂ ಸೂಚನೆಗಳಿವೆ. ಕೇಂದ್ರ ಚರ್ಚೆಯಿರುವುದು  ವರ್ತಮಾನ ಭಾರತದ ಮೇಲೆಯೆ  ಎಂಬುದು ನಿಜವೆ. ಲೇಖನಗಳ ಶಕ್ತಿಯನ್ನು ಈ ಅಂಶ ಹೆಚ್ಚಿಸಿದೆ. ಲೇಖಕರ ಕಣ್ಣ ಮುಂದೆ ಇರುವುದು ಸದ್ಯದ ಭಾರತವೇ ಆಗಿದೆ.

“ವರ್ತಮಾನ ಭಾರತ” ಕೃತಿಯ ಲೇಖನಗಳು ಗಂಭೀರ ಸ್ವರೂಪದವು.  ಸಾಕಷ್ಟು ಅಧ್ಯಯನ ನಡೆಸಿ ಬರೆದವುಗಳು. ತಾನು ಪ್ರಸ್ತಾವಿಸಿದ ವಿಷಯದ ಗಂಭೀರತೆ ಮತ್ತು ತಳೆದ ನಿಲುವುಗಳ ಬಗೆಗೆ ಲೇಖಕರ ಬದ್ಧತೆ ಪ್ರಶ್ನಾತೀತವಾದುದು. ಹೆಚ್ಚಿನ ಓದಿಗೆ ಎಂದು ಬಿಳಿಮಲೆಯವರು ಸೂಚಿಸಿದ ಕೃತಿಗಳ ಯಾದಿ ಇದಕ್ಕೆ ಸಾಕ್ಷಿ.  

ವಿಷಯವನ್ನು ಸಮಸ್ಯಾತ್ಮಕಗೊಳಿಸಿ ಪ್ರಮೇಯವನ್ನು ಪರಿಕಲ್ಪಿಸಿಕೊಳ್ಳುವ, ಮಾಹಿತಿಗಳನ್ನು ಕ್ರೋಢೀಕರಿಸಿ ವಿಶ್ಲೇಷಣೆಗೆ ಅಗತ್ಯವಿರುವ ಬೃಹತ್ ಶರೀರವನ್ನು ಮಂಡಿಸುವ ಮತ್ತು ಅಧ್ಯಯನದ ಫಲಿತವನ್ನು ಓದುಗರ ಗಮನಕ್ಕೆ ತರುವ ವಿನ್ಯಾಸ ಇವು ಇಲ್ಲಿನ ಬಹುತೇಕ ಲೇಖನಗಳ ವೈಶಿಷ್ಟ್ಯಗಳಾಗಿವೆ.

ಐತಿಹಾಸಿಕ ರೈತ ಹೋರಾಟ: ಒಂದು ಹಿನ್ನೋಟ, ಚರಿತ್ರೆಯ ಪುಟ ಸೇರುತ್ತಿರುವ ಜೆ ಎನ್ ಯು, ಅಂಕಿ ಅಂಶಗಳು, ಸರಕಾರ ಮತ್ತು ಪ್ರಜಾಪ್ರಭುತ್ವ, ಹೆಚ್ಚುತ್ತಿರುವ ಯುದ್ಧೋನ್ಮಾದ, ಕೇಂದ್ರ ಜಾನಪದ ಅಕಾಡೆಮಿ ಬೇಕು, ಭಾರತೀಯ ಭಕ್ತಿ ಪರಂಪರೆ ಮತ್ತು ಜಾನಪದ, ಹಿಂದುತ್ವದ ತೆಕ್ಕೆಗೊಗ್ಗದ ಭಾರತದ ಆದಿವಾಸೀ ಸಾಹಿತ್ಯ, ಭಾರತಕ್ಕೊಂದು ಭಾಷಾನೀತಿ ಏಕಿಲ್ಲ ಮೊದಲಾದ ಲೇಖನಗಳನ್ನು ಹೆಸರಿಸಬಹುದು.

ಕೆಲವು ಲೇಖನಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಅವುಗಳ ಮಹತ್ವದ ಕಡೆಗೆ ಗಮನ ಸೆಳೆಯಬಯಸುತ್ತೇನೆ. ಐತಿಹಾಸಿಕ ರೈತ ಚಳುವಳಿ: ಒಂದು ಹಿನ್ನೋಟ ಎಂಬ ಲೇಖನ. ಇದರಲ್ಲಿ ದೇಶವ್ಯಾಪೀ ನಡೆದ ರೈತ ಹೋರಾಟಗಳ ಸ್ವರೂಪ, ಕಾರಣ ಮತ್ತು ಪರಿಣಾಮಗಳನ್ನು ಆರಂಭದಲ್ಲಿ ಪ್ರಸ್ತಾಪಿಸಿ, ಹೀಗೆ ನಡೆದ ಪ್ರಾಂತೀಯ ಹೋರಾಟಗಳು ನೂರಕ್ಕೂ ಹೆಚ್ಚು ಎಂದು ಹೇಳಿ, ಪ್ರಮುಖವಾದವುಗಳನ್ನು ಉಲ್ಲೇಖಿಸಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ  ಕೃಷಿ ಸುಧಾರಣ ನಿಮಿತ್ತ ತಂದ ಕಾಯಿದೆಗಳ ಮಾಹಿತಿಗಳಿವೆ. ಕೇಂದ್ರ ಸರಕಾರ ತಂದ ಮೂರು ಹೊಸ ಕಾಯಿದೆಗಳ ಅಪಾಯ ಮತ್ತು ಅದನ್ನು ವಿರೋಧಿಸಿ ಪಂಜಾಬಿನಲ್ಲಿ ನಡೆದ ಪ್ರತಿಭಟನೆಗಳ ವಿವರಗಳಿವೆ. ದೇಶದ ಫೆಡರಲ್ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುವ ಉದ್ದೇಶವನ್ನು ರೈತರು ವಿರೋಧಿಸಿದ ನೆಲೆಗಳನ್ನು ತಾತ್ವಿಕವಾಗಿ ಬೆಂಬಲಿಸಿದ ಲೇಖಕರ ರೈತಪರ ಧೋರಣೆಗೆ ಈ ಲೇಖನ ಸಮರ್ಥ ಸಾಕ್ಷಿಯಾಗಿದೆ. “ರೈತ ಚಳುವಳಿ ಕೊನೆಗೊಂಡರೂ ರೈತರ ಸಮಸ್ಯೆಗಳೇನೂ ಕೊನೆಗೊಂಡಿಲ್ಲ. ಮನಸ್ಸು ಮಾಡಿದರೆ ಭಾರತೀಯರು ನವ ಉದಾರವಾದೀ ಶಕ್ತಿಗಳನ್ನು ಹಿಮ್ಮೆಟ್ಟಿಸಬಲ್ಲರು” ಎಂಬ ಮಾತುಗಳು ನಮ್ಮನ್ನು ಬಹುಕಾಲ ಕಾಡಲಿದೆ.

ಬೌದ್ಧಿಕ ಜಗತ್ತಿನ ವಾಗ್ವಾದಗಳಿಗೆ ತೆರೆದುಕೊಂಡಿದ್ದ ಭಾರತ ಇಂದು ವೈಚಾರಿಕ ಅಸ್ಪೃಶ್ಯತೆ ಮತ್ತು ಹೊಸ ಚಿಂತನೆಗಳ ಕುರಿತ ಅಸಹನೆಗೆ ತುತ್ತಾಗುತ್ತಿದೆ ಎಂಬುದನ್ನು ‘ಚರಿತ್ರೆಯ ಪುಟ ಸೇರುತ್ತಿರುವ ಜೆ ಎನ್ ಯು’ ಎಂಬ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಈ ವಿವಿಯ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಾಧನೆಗಳನ್ನು  ವಿವರಿಸಿ, ಜೆ ಎನ್ ಯು ವಿವಿಯ ಒಳಗಿದ್ದುಕೊಂಡು ಕನ್ನಡದ ಕೆಲಸ ಮಾಡಿದ ಬಿಳಿಮಲೆಯವರ ಶೈಕ್ಷಣಿಕ ಪ್ರೀತಿ ಮಹತ್ತರವಾದುದು. ವಿವಿಗಳು ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ಪಕ್ಷ ಸಿದ್ಧಾಂತಗಳ ಪ್ರಚಾರ ಮೇಲಾಟಗಳ ಆಡುಂಬೊಲವಾಗುತ್ತಿರುವುದು ಒಟ್ಟಾರೆ ಬೇಸರದ ವಿಷಯ. “ಅಂಕಿ ಅಂಶಗಳ ಬಗ್ಗೆ ಯಾವುದೇ ಸರಕಾರ ತೋರುವ ನಿರ್ಲಕ್ಷ್ಯ ಮತ್ತು ಅಪಾರದರ್ಶಕತೆ ತಕ್ಕುದಲ್ಲ. ಅಂಕಿ ಅಂಶಗಳ ವಿಷಯದಲ್ಲಿ ಸರಕಾರ ಮಾಡುವ ಹಸ್ತಕ್ಷೇಪ ಜನರನ್ನು ಕತ್ತಲಲ್ಲಿ ಇರಿಸುತ್ತದೆ. ಸರಕಾರ ನೀಡುವ ಅಂಕಿಅಂಶಗಳನ್ನು ಹೆಚ್ಚಿನವರು ನಂಬುವುದೇ ಸಮಸ್ಯೆಯ ಮೂಲವೂ ಆಗಿದೆ” ಎಂದು ಬಿಳಿಮಲೆಯವರು ಇನ್ನೊಂದು ಲೇಖನದಲ್ಲಿ ಹೇಳುವುದು ಎಲ್ಲ ಸರಕಾರಗಳಿಗೂ ಅನ್ವಯವಾಗುತ್ತದೆ.

ಹೆಚ್ಚುತ್ತಿರುವ ಯುದ್ಧೋನ್ಮಾದ, ಭಾರತಕ್ಕೊಂದು ಭಾಷಾನೀತಿ ಯಾಕಿಲ್ಲ, ಕೇಂದ್ರ ಜಾನಪದ ಅಕಾಡೆಮಿ ಬೇಕು ಈ ಲೇಖನಗಳು ನಮಗೆ ( ಮುಖ್ಯವಾಗಿ ಪ್ರಭುತ್ವಕ್ಕೆ) ಇರಬೇಕಾದ  ಸಾಮಾಜಿಕ ಹೊಣೆಗಾರಿಕೆ, ಭಾಷಾ ನೀತಿ ಮತ್ತು ಸಾಂಸ್ಕೃತಿಕ ಕಾಳಜಿಯನ್ನು ತಿಳಿಸುವ ಶೈಕ್ಷಣಿಕ ಮೌಲ್ಯವುಳ್ಳ ಲೇಖನಗಳಾಗಿವೆ. ಮಾನವೀಯತೆ, ಬಹುಭಾಷಿಕತೆ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಗೌರವಿಸುವ ಮನಸ್ಸುಳ್ಳವರು ಈ ಲೇಖನಗಳನ್ನು ಓದಬೇಕು.

ಸಾಹಿತ್ಯ, ರಾಜಕೀಯ, ಭಕ್ತಿ ಪರಂಪರೆ, ಉಗ್ರ ರಾಷ್ಟ್ರೀಯತೆಯ ಅಪಾಯ, ಹಿಂದುತ್ವದ  ಮಿತಿ, ಮೌಖಿಕ ಇತಿಹಾಸ, ಜೋಗ ಮಾಯದ ಲೋಕ, ಓದಿನ ಸಂಭ್ರಮ, ಮಾಧ್ಯಮಗಳು,ಕರ್ನಾಟಕ ಸಂಸ್ಕೃತಿ ಹೀಗೆ ಪರಿಕಲ್ಪನಾತ್ಮಕ ಅಧ್ಯಯನ ಮಾದರಿಯ ಹಲವು ಬರಹಗಳಿವೆ. ಸೂಕ್ಷ್ಮ ಒಳನೋಟಗಳಿಂದ, ಓದುಗರ ಅರಿವನ್ನು ವಿಸ್ತರಿಸುವುದರಿಂದ  ಎಲ್ಲ ಲೇಖನಗಳು ಓದು ಹಾಗೂ ಅಭ್ಯಾಸಯೋಗ್ಯವಾಗಿವೆ.

“ವರ್ತಮಾನ ಭಾರತ” ನನಗೆ ಮುಖ್ಯವಾಗುವ ಕಾರಣಗಳು:
೧. ಬರವಣಿಗೆಯ ಶಿಸ್ತು ೨. ವ್ಯವಸ್ಥಿತ ಕ್ರೋಢೀಕೃತ ಮಾಹಿತಿ ಶರೀರ ೩. ಸ್ಪಷ್ಟ ಪ್ರಮೇಯ ೪. ಮನವರಿಕೆಯಾಗುವ ಫಲಿತಗಳು (ಇವು ಲೇಖನಗಳ ರಚನೆಗೆ ಸಂಬಂಧಿಸಿದಂತೆ). ೫. ವರ್ತಮಾನ ಕಾಲಘಟ್ಟದಲ್ಲಿ ನಮ್ಮನ್ನು ಕಷ್ಟಕ್ಕೆ, ದುಃಖಕ್ಕೆ, ಸಂಘರ್ಷಕ್ಕೆ  ತಳ್ಳುವ ಪ್ರಭುತ್ವದ ದುರಾಡಳಿತದ ವಿರುದ್ಧ ಜನಜಾಗೃತಿ ಮೂಡಿಸುವ ಬರಹಗಳಿವು ೬. ಭಾರತದ ಶಕ್ತಿ ಬಹುತ್ವದಲ್ಲಿದೆ ಎಂಬ ಪ್ರತಿಪಾದನೆ. ೭. ಸದ್ಯದ ಭಾರತದ ಸಂದರ್ಭದಲ್ಲಿ ನಡೆಯುವ ಅನ್ಯಾಯ, ಶೋಷಣೆ, ದಬ್ಬಾಳಿಕೆಯ ವಿರುದ್ಧ ಸಂಘಟನಾತ್ಮಕ ಹೋರಾಟ ಅನಿವಾರ್ಯ ಎಂದು ಸಾರುತ್ತವೆ. ೮. ಸಾಹಿತ್ಯ ಮತ್ತು ಲೇಖಕರ ಜವಾಬ್ದಾರಿ ಬರಹಗಳಲ್ಲಿ ಮಾತ್ರ ಅಲ್ಲ, ಜನಪರ ಹೋರಾಟ ಚಳುವಳಿಗಳಲ್ಲಿ ಪ್ರಕಟವಾಗಬೇಕು. ೯. ಮಾನವೀಯ ಮೌಲ್ಯಗಳ ಅವಲಂಬನೆ ಮತ್ತು ಆಧಾರದ ಮೇಲೆಯೇ ಪ್ರಗತಿ, ಅಭಿವೃದ್ಧಿ ಸಾಕಾರಗೊಳ್ಳಬೇಕೆಂಬ ಚಿಂತನ ವಿನ್ಯಾಸ. ೧೦. ತಂತ್ರಜ್ಞಾನದ ಅನುಕೂಲಗಳನ್ನು ಬಳಸಿಕೊಂಡು ಜಾನಪದ/ ಜನಸಂಸ್ಕೃತಿಯ ಅಧ್ಯಯನ ನಡೆಸುವ ಅಗತ್ಯವಿದೆ. ೧೧. ಕನ್ನಡದಲ್ಲಿ ಅನುವಾದ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ. ೧೨. ಭಾಷೆ, ಜಾತಿ, ಧಾರ್ಮಿಕ ಪರಂಪರೆ, ಅರಸುಮನೆತನ, ಸಾಹಿತ್ಯ ಪರಂಪರೆ ಹೀಗೆ ಅನೇಕ ನೆಲೆಗಳಲ್ಲಿ ರೂಪುಗೊಂಡ ಸೌಹಾರ್ದತೆಯನ್ನು ಕೆಡಿಸುವುದು ಅಕ್ಷಮ್ಯ ಅಪರಾಧ. ೧೩. ವ್ಯಕ್ತಿ ಘನತೆ, ಸಾಮಾಜಿಕ ಸಮಾನತೆ ಮತ್ತು ಧಾರ್ಮಿಕ ಸಹನೆಯನ್ನು ಎತ್ತಿಹಿಡಿಯುವ ಮನೋಧರ್ಮದ ಬೆಳಕಲ್ಲಿ ವರ್ತಮಾನದ ಭಾರತವನ್ನು ಮರುರೂಪಿಸಿ ಕಾಯ್ದುಕೊಳ್ಳಬೇಕಾಗಿದೆ.

ಇವಿಷ್ಟು ಮಾತುಗಳು ಡಾ. ಬಿಳಿಮಲೆಯವರ ಈ ಕೃತಿಗೆ ನನ್ನ ಪರಿಮಿತ ವಿಮರ್ಶೆಯೂ ಹೌದು, ಈ ಕೃತಿ ನನ್ನಲ್ಲಿ ಹುಟ್ಟಿಸಿದ ವಿಚಾರ/ ಭಾವನೆಗಳ ಪ್ರತಿಕ್ರಿಯೆಯೂ ಹೌದು.

– ಡಾ. ಚಿನ್ನಪ್ಪ ಗೌಡ, ಹಿರಿಯ ಜಾನಪದ ವಿದ್ವಾಂಸರು

Leave a Reply