ಪ್ರಿಯ ಪ್ರಕಾಶ್ ರಾಜ್,
ನೀವು ಆಗಾಗ ಸುದ್ಧಿಯಲ್ಲಿರುತ್ತೀರಿ. ಸಾಮಾನ್ಯವಾಗಿ ಸರಿಯಾದ ಕಾರಣಗಳಿಗೆ ಸುದ್ಧಿಯಾಗುತ್ತೀರಿ. ಆದರೀಗ ತಮ್ಮ ನೆಚ್ಚಿನ ರಂಗ ಚಟುವಟಿಕೆಗಳಿಗಾಗಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಧನಸಹಾಯ (ಸಿಂಹಪಾಲು) ಪಡೆದಿದ್ದೀರೆಂಬ ಆರೋಪ ನಿಮ್ಮನ್ನು ಪೇಚಿಗೆ ಸಿಲುಕಿಸಿರಬಹುದು. ಆ ಹಣ ನಿಮಗೆ ಅಗತ್ಯವಿತ್ತೋ ಇಲ್ಲವೋ ಬೇರೆ ಮಾತು!
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಜಾಲತಾಣಗಳಲ್ಲಿ ಅಸ್ಪಷ್ಟವಾದ ಅಂಕಿ ಅಂಶಗಳು ಓಡಾಡುತ್ತಿವೆ. ನನಗೆ ಅರ್ಥವಾದಂತೆ ಒಂದು ಶಾಲೆಯಿಂದ ಸುಮಾರು 40-50 ಸಾವಿರದಷ್ಟು ರಂಗಚಟುವಟಿಕೆ ನೀಡುತ್ತಿದ್ದಾರೆ ಎಂಬುದಾಗಿದೆ. ಆ ಮೊತ್ತ ಯಾವ ಹೆಡ್ ನಿಂದ ಭರಿಸುತ್ತಾರೆ? ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನವಾ? ಈಗಾಗಲೇ ಶಾಲೆಗಾಗಿ ನಿಗದಿಯಾಗಿರುವ ಖರ್ಚು ವೆಚ್ಚಗಳ ಫಂಡ್ ನಿಂದಲಾ!? ನಿಮ್ಮ ಸಂಸ್ಥೆ ಅನುದಾನ ಪಡೆಯಲು ಅರ್ಹವೇ (ಸರ್ಕಾರಿ ಕಾನೂನುಗಳನ್ವಯ)?
ಅರ್ಹತೆ ವಿಷಯ ಕಾನೂನಿಗೆ ಸಂಬಂಧಿಸಿದ್ದು. ಯೋಗ್ಯತೆಗಿಲ್ಲ ಅಲ್ಲಿ ಕವಡೆಕಾಸಿನ ಕಿಮ್ಮತ್ತು. ಯಾವುದೇ ಸಂಘ ಸಂಸ್ಥೆಗಳಿಗೆ ಸರ್ಕಾರದ ದೇಣಿಗೆ ಸಿಗಬೇಕಾದರೆ ಕನಿಷ್ಠ ಮೂರು ವರ್ಷಗಳು ಕೆಲಸ ಮಾಡಿರಬೇಕು. ಆಡಿಟ್ ರಿಪೋರ್ಟ್ – ಪ್ರೋಗ್ರೆಸ್ ರಿಪೋರ್ಟ್ ಎಲ್ಲವೂ ಪರಿಶೀಲಿಸಿ ಯೋಜನೆಯ ಮಹತ್ವ ಹಾಗೂ ಗಾತ್ರದ ಮೇಲೆ ಸರ್ಕಾರಿ ಫಂಡ್ ನೀಡಲಾಗುತ್ತದೆ. ಆದರೆ ಇದಾವ ಲೆಕ್ಕವೂ ಇಲ್ಲದೆ ಸರ್ಕಾರ ನಿಮ್ಮ ಸಂಸ್ಥೆ ಸಿದ್ಧಪಡಿಸಿದ ಯೋಜನೆಗೆ ಹಸಿರು ನಿಶಾನೆ ತೋರಿದೆ. ಅದಕ್ಕೆ ತಮ್ಮ ವರ್ಚಸ್ಸು ಕಾರಣವಾಗಿದೆಯೇ ಹೊರತು ಕಾನೂನಿನ ಹಂಗು ಈ ಸರ್ಕಾರಕ್ಕೆ ಇದ್ದಂತಿಲ್ಲ. ನಿಮ್ಮ ಸಂಸ್ಥೆಯ ಪರವಾಗಿ ಯೋಜನೆ ಸಿದ್ಧಪಡಿಸಿದವರು ಮತ್ತು ನಿಮ್ಮ ಯೋಜನೆಗೆ ಅನುಮೋದನೆ ನೀಡಿದವರು – ಈ ಇಬ್ಬರೂ ತಪ್ಪು ಮಾಡಿದ್ದಾರೆ.
(ತಾವೇ ಖುದ್ದು ಯೋಜನೆ ಸಿದ್ಧಪಡಿಸಿರುವುದಿಲ್ಲ- ಇದನ್ನು ನಿಮ್ಮ ಮ್ಯಾನೇಜರ್ ಗಳೋ ನಿರ್ದೇಶಕರುಗಳೋ ಮಾಡಿರಬಹುದೆಂದು ಊಹಿಸಿದ್ದೇನೆ. ಅಂತೆಯೇ ನಿಮ್ಮ ಯೋಜನೆಗೆ ಹಸಿರು ನಿಶಾನೆ ತೋರಿಸಿರುವ ಸಮಾಜ ಕಲ್ಯಾಣ ಸಚಿವರೂ ಕೂಡಾ ಇದರ ಪೂರ್ವಾಪರ, ಕಾನೂನು ನೋಡಿರಲಾರರು: ಅವರು ಸೂಚನೆ ನೀಡಿದಾಗ ಇದು ಸಾಧ್ಯವಾಗುವುದಿಲ್ಲವೆಂದು ಅಧಿಕಾರಿಗಳು ಹೇಳಿ ಹೊಸ ಮಾರ್ಗವೊಂದನ್ನು ಸೂಚಿಸಬಹುದಿತ್ತು. ಅದೂ ಮಾಡಿಲ್ಲ. ಎತ್ತು ಈತು ಅಂದ್ರೆ ಕೊಟ್ಟಿಗೆಗೆ ಕಟ್ಟು ಅಂದಂಗಾಯ್ತು ಇವರ ಕಥೆ)
ಅದೇನೇ ಇರಲಿ ವಸತಿ ಶಾಲೆಗಳಲ್ಲಿ ಈಗಾಗಲೇ ನೀವು ಕೈಗೊಂಡಿರುವ ರಂಗಚಟುವಟಿಕೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ತಾವೇ ಭರಿಸಬಹುದು ಅಥವಾ ನಿಮ್ಮ ಸಂಪರ್ಕದಲ್ಲಿ ಸಿ.ಎಸ್.ಆರ್. ಫಂಡ್ ತಂದು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮಾಡಲೂ ಸಾಧ್ಯವಿತ್ತು. ಇದೇ ವಸತಿ ಶಾಲೆಗಳಲ್ಲಿ STEM ಎಂಬ ಯೋಜನೆ ಜಾರಿಯಲ್ಲಿದೆ. ಅದಕ್ಕೆ ದಿಲ್ಲಿ ಮೂಲದ ಕ್ವೆಸ್ಟ್ ಅಲಾಯನ್ಸ್ ಹೆಸರಿನ ಸ್ವಯಂಸೇವಾ ಸಂಸ್ಥೆ ಫಂಡ್ಸ್ ಒದಗಿಸುತ್ತಿದೆ. ಆ ಸಂಸ್ಥೆಗೆ ದೇಣಿಗೆ ನೀಡುತ್ತಿರುವ ದಾನಿಗಳಲ್ಲಿ ಮೆಕೆಂಜೆ ಸ್ಕಾಟ್ ಫೌಂಡೇಷನ್ ಕೂಡಾ ಒಂದು. ಇದೊಂದು ಸಣ್ಣ ಉದಾಹರಣೆ ನಿಮ್ಮ ಮಾಹಿತಿಗಾಗಿ.
ಪ್ರಾಯಶಃ ನಿಮ್ಮ ಸುತ್ತಲಿನ ಜನರು ನಿಮ್ಮ ಸ್ವಂತ ಶಕ್ತಿ ಮತ್ತು ನಿಮಗಿರಬಹುದಾದ ನೆಟ್ವರ್ಕ್ ವ್ಯಾಪ್ತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. ಆಕಸ್ಮಾತ್ ನೀವು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾಪ ಮೊದಲೇ ಚರ್ಚೆಯ ವಿಷಯವಾಗಿದ್ದರೆ, ಇದೇ ವಾಲ್ ನಲ್ಲಿ ನಿಮಗದು ಬೇಕಿಲ್ಲ ಎಂದು ಅನೇಕರು ಬರೆಯತ್ತಿದ್ದರು ಎಂದು ನನ್ನ ನಂಬಿಕೆ. ಇರಲಿ. ಈಗ ಕಾಲ ಉರುಳಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕೆಂದು ಯೋಚಿಸಿ.
ನನ್ನದೊಂದು ಸಲಹೆ: ಸರ್ಕಾರದ ಫಂಡ್ಸ್ ಸಣ್ಣ ಪುಟ್ಟ ಸಂಸ್ಥೆಗಳು ಬಳಸಿಕೊಳ್ಳಲಿ. ನೀವು ಫಂಡಿಂಗ್ ಏಜೆನ್ ಗಳಿಂದ ಮತ್ತು ಸಿ.ಎಸ್.ಆರ್ ಫಂಡ್ಸ್ ತರಿಸಿ ಸರ್ಕಾರಕ್ಕಿಂತಲೂ ಹೆಚ್ಚಿನ ಕೆಲಸಗಳನ್ನು ಮಾಡಬಹುದು. ಆ ಬಗ್ಗೆ ಯೋಚಿಸಿ.
ಐಡಿಯಾ (ಸರ್ಕಾರಿ ಐಡಿಯಾ) ಕೊಡುವವರ ಬಗ್ಗೆ ಎಚ್ಚರದಿಂದಿರಿ…!!!!!
- ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು




