ಎನ್‌ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್‌.ಅಶೋಕ

2 months ago

ಕಸ್ತೂರಿ ರಂಗನ್‌ ವರದಿ ಜಾರಿಗೆ ಕಾಲಾವಕಾಶ ಕೇಳುವ ನಿರ್ಣಯ ಕುರಿತು ಸಲಹೆ

ಇದು ಕೇಂದ್ರ ಸರ್ಕಾರದ ಕೈಯಲ್ಲಿ ಇಲ್ಲ, ಎಲ್ಲವೂ ಎನ್‌ಜಿಟಿಯ ಕೈಯಲ್ಲಿದೆ, ಆದ್ದರಿಂದ ನ್ಯಾಯಪೀಠದಲ್ಲಿ ಹೋರಾಟ ಮಾಡುವ ಅಂಶವನ್ನು ನಿರ್ಣಯದಲ್ಲಿ ಸೇರಿಸಿ

ಬೆಂಗಳೂರು: ಕಸ್ತೂರಿ ರಂಗನ್‌ ವರದಿ ಜಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೈಯಲ್ಲಿ ಇಲ್ಲ. ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ಗೋವಾ ಫೌಂಡೇಶನ್‌ ಹೋರಾಟ ನಡೆಸುತ್ತಿದ್ದು, ಅಲ್ಲಿ ಉತ್ತಮ ವಕೀಲರನ್ನು ಇರಿಸಿ ವಾದ ಮಾಡಬೇಕಿದೆ. ಆದ್ದರಿಂದ ಈ ಅಂಶವನ್ನು ನಿರ್ಣಯದಲ್ಲಿ ಸೇರಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಭಾಷಣದ ಬಳಿಕ ಮಾತನಾಡಿದ ಅವರು, ಕಸ್ತೂರಿ ರಂಗನ್‌ ವರದಿ ವಿರುದ್ಧ ನಿರ್ಣಯಗಳನ್ನು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ವಿಧಾನಸಭೆಯ ಎಲ್ಲ ಸದಸ್ಯರು ಒಪ್ಪಿಗೆ ನೀಡಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಎಲ್ಲರೂ ಬೆಂಬಲ ನೀಡಿದ್ದಾರೆ. ರಾಜ್ಯ ಸರ್ಕಾರ ಪ್ರತಿಕ್ರಿಯಿಸದಿದ್ದರೂ ವರದಿ ಜಾರಿ ಮಾಡಿ ಎಂದು ಎನ್‌ಜಿಟಿ ಹೇಳಿರುವುದರಿಂದ ಕೇಂದ್ರ ಸರ್ಕಾರ ಆದೇಶ ಮಾಡಿದೆ. ವಾಸ್ತವದಲ್ಲಿ ಗೋವಾ ಫೌಂಡೇಶನ್‌ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ಪ್ರಕರಣ ದಾಖಲಿಸಿದ್ದು, ಅದರ ತೀರ್ಪು ಬಂದ ನಂತರ ಕೇಂದ್ರ ಸರ್ಕಾರ ವಿಧಿ ಇಲ್ಲದೆ 7 ನೇ ಅಧಿಸೂಚನೆ ಹೊರಡಿಸಿದೆ. ಈ ನಿರ್ಣಯವನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ. ಆದರೆ ಎನ್‌ಜಿಟಿಯಲ್ಲಿ ಕೂಡ ರಾಜ್ಯ ಸರ್ಕಾರದಿಂದ ವಾದ ಮಂಡಿಸಲು ಏನು ಮಾಡಬೇಕೆಂಬ ಬಗ್ಗೆ ನಿರ್ಣಯ ಕೈಗೊಳ್ಳಬೇಕಿತ್ತು ಎಂದರು.

ರಾಜ್ಯ ಸರ್ಕಾರದಿಂದ ಎನ್‌ಜಿಟಿಯಲ್ಲಿ ಕೂಡ ಅಪೀಲು ಮಾಡಿ ಹೋರಾಟ ಮಾಡುತ್ತೇವೆ, ಇದಕ್ಕೆ ಸಮಯ ನೀಡಿ ಎಂದು ನಿರ್ಣಯದಲ್ಲಿ ಸೇರಿಸಬೇಕಿದೆ. ಇದು ನಮ್ಮ ಕೈ ಮೀರಿ ಹೋಗಿದೆ. ಒಂದು ಎಕರೆ ಕೂಡ ಬದಲಾಯಿಸಬೇಕೆಂದರೆ ನಮ್ಮ ಅನುಮತಿ ಪಡೆಯಬೇಕೆಂದು ಕೋರ್ಟ್‌ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಬೇಕು. ಉಳಿದಂತೆ ಸರ್ಕಾರ ಮಾಡಿರುವ ನಿರ್ಣಯ ಜನರ ಬದುಕಿನ ಪ್ರಶ್ನೆಯಾಗಿದೆ. ಕಾರವಾರದಲ್ಲಿ ಒಂದು ಕಡೆ ಸಮುದ್ರ ತೀರ ಇದೆ, ಮತ್ತೊಂದು ಕಡೆ ನದಿ ಇದೆ. ಅಂತಹ ಸ್ಥಳದಲ್ಲಿ ಬಫರ್‌ ವಲಯದ ನಿಯಮ ಬಂದರೆ ಯಾರೂ ಪಾಲಿಸಲು ಸಾಧ್ಯವಾಗುವುದಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಕೈಯಲ್ಲಿ ಈ ವರದಿಯ ಭವಿಷ್ಯ ಇಲ್ಲ. ಇದು ಹಸಿರು ನ್ಯಾಯಪೀಠದ ಕೈಯಲ್ಲಿದೆ. ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಸರ್ವಸಮ್ಮತದಿಂದ ಈ ನಿರ್ಣಯವನ್ನು ಒಪ್ಪಿದೆ. ಯಾವುದೇ ರಾಜಕಾರಣವನ್ನು ಬೆರೆಸದೆ ನಮ್ಮ ಒಪ್ಪಿಗೆ ನೀಡುತ್ತಿದ್ದೇವೆ ಎಂದರು.

Leave a Reply