ಅಳಿಸಿ ಹೋಗಿರುವ ಕೋಟ್ಯಾಂತರ ದು:ಖಗೀತಗಳು

2 years ago

ಗೆಳೆಯ ಜಯಕುಮಾರ್ ರವರ ‘ಕಾಡು ಹಾದಿಯ ಬೆಳಕಿನ ಜಾಡು’ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಸೇರಿದ್ದ ಜನ ನೋಡಿದಾಗ ಡಾ. ಲೀಲಾ ಸಂಪಿಗೆ-ಜಯಕುಮಾರ್ ದಂಪತಿಯ ಜಗತ್ತು ಅದೆಷ್ಟು ದೊಡ್ಡದೆಂದು ಅರಿವಾಗುತ್ತಿತ್ತು. 

ಕರ್ನಾಟಕ ಕಮ್ಯೂನಿಸ್ಟ್ ಪಕ್ಷದೊಂದಿಗೆ ಬಹು ದೀರ್ಘಕಾಲದ ಸಾಂಗತ್ಯ,  ಪ್ರಗತಿಪರ ಹೋರಾಟಗಳು, ಜನಪರ ಸಾಮಾಜಿಕ ಚಟುವಟಿಕೆಗಳಲ್ಲಿ ಮೇಣದ ದೀಪದಂತೆ ಬದುಕನ್ನು ಉರಿಸಿದ  ಜಯಕುಮಾರ್      ಇದೀಗ ತಮ್ಮ ಮೇಲೆಯೇ ಸ್ವಲ್ಪ ಬೆಳಕು ಹಾಯಿಸಿಕೊಂಡು ನಮಗೆ ಅವರ ಬದುಕಿನ ಪರಿಚಯ ಮಾಡಿಸಿರುವರು.

ಈ ಬರಹವು ಕನ್ನಡದ ಮಟ್ಟಿಗೆ ಅಪರೂಪದ ವಿನ್ಯಾಸ ಹೊಂದಿರುವಂತದ್ದು. ಸದಾ ಲೋಕಸಂಚಾರಿಯಂತಿದ್ದ ಈ ಕುಟುಂಬವು ಇತ್ತೀಚೆಗಷ್ಟೆ ಮೈಸೂರಿನಲ್ಲಿ ತಮಗೊಂದು ನೆಲೆ ರೂಪಿಸಿಕೊಂಡು ನಿರಾಳತೆಯ ಭಾವವು ಬರುವಷ್ಟರಲ್ಲಿ ಜಯಕುಮಾರಗೆ ಆರೋಗ್ಯ ಚಿಕಿತ್ಸೆ ಪಡೆದು, ವಿಶ್ರಾಂತಿ ಪಡೆಯಬೇಕಾಗಿ ಬಂದಿತು.  ಈ ಬರಹವು ಅಲ್ಲಿಂದ ಶುರುವಾಗಿ ಲೇಖಕರ ಬಾಲ್ಯದ  ಬದುಕೆಂಬ ಕಾಡು ಹಾದಿಗೆ ನಮ್ಮನ್ನು ಕರೆದೊಯ್ಯುತ್ತದೆ. 

ಕೊಡಗಿನ ಎಸ್ಟೇಟ್ ಒಂದರಲ್ಲಿ ಬಡವಿ ಕೂಲಿಯ ಆಳಾಗಿದ್ದ ತಾಯಿ ಕುಂಞ್ಞಮ್ಮ  ಮತ್ತವರಿಗೆ  ಒಲಿದ ಎಸ್ಟೇಟ್ ಮ್ಯಾನೇಜರ್ ಕೇರಳದ  ಶ್ರೀಮಂತ ಕೃಷ್ಣನ್ ನಾಯರ್ ರ ನಂಬಿಕೆಯ ಪ್ರೇಮವು ಸಿಂಡ್ರೆಲಾ  ಜಾನಪದ ಕತೆಯಂತೆ ಸಾಗಿ ಕೊನೆಗೆ ದುರಂತದಲ್ಲಿ ಕೊನೆಯಾಗುತ್ತದೆ.  

ಎಲ್ಲಿ ಬದುಕು ಕೊನೆಯಾಯಿತು ಅನಿಸಿತೊ ಅಲ್ಲಿಂದಲೇ ಕುಂಞ್ಞಮ್ಮರ ಸಾಹಸಮಯ ಏಕಾಂಗಿ ಹೋರಾಟದ ಹೊಸ ಬದುಕು ಮತ್ತೆ ಕೊಡಗಿನಲ್ಲೇ ಶುರುವಾಗುತ್ತದೆ. ಲೇಖಕರ ಸೋದರ, ಆಗಿನ್ನೂ ಬಾಲಕನಾಗಿದ್ದ ಚಂದ್ರಶೇಖರ, ಮೃತಪಡುವ ಇನ್ನೊಬ್ಬ ಕಿರಿಯ ಸೋದರ, ಕೊನೆಗೆ ಕುಂಞ್ಞಮ್ಮರ ಬದುಕಲ್ಲಿ ಅಲ್ಪಕಾಲ ಹಾಜರಿರುವ ರಾಘವನ್ ( ಲೇಖಕರ ತಂದೆ) ರ  ಕಷ್ಟದ ಬದುಕಿನ ದಟ್ಟ ವಿವರಗಳು ಈ ಬರಹದಲ್ಲಿ ಓದುಗರ ಮನಸ್ಸು ಭಾರವಾಗುವಂತೆ ದಾಖಲಾಗಿವೆ. 

ಸಂದರ್ಭ, ಸನ್ನಿವೇಶ, ವಯಸ್ಸುಗಳ ಎದಿರು ಅಸಹಾಯಕನಾಗುವ ಮನುಷ್ಯ ತನ್ನ ಘನತೆ ಉಳಿಸಿಕೊಂಡೇ ಸಲ್ಲೇಖನ ವ್ರತದಂತೆ  ಸಾವನ್ನು ಬರಮಾಡಿಕೊಳ್ಳುವ  ಪ್ರಸಂಗವನ್ನು ತಮ್ಮ ಸೋದರ ಚಂದ್ರಶೇಖರ್ ರವರ  ಬದುಕಿನ ವಿವರದೊಂದಿಗೆ ನೀಡುತ್ತಾರೆ. 

ಕನ್ನಡ ಸಾಹಿತ್ಯದಲ್ಲಿ ಕೊಡಗಿನ ಎಸ್ಟೇಟ್ ಕಾರ್ಮಿಕರ ಮತ್ತವರ ಲೈನ್ ಮನೆಗಳ  ಬದುಕಿನ ಚಿತ್ರಣವು ಅದೆಷ್ಟರ ಮಟ್ಟಿಗೆ ಬಂದಿದೆಯೊ ನನಗೆ ತಿಳಿಯದು, ಪ್ರಸಾದ್ ರಕ್ಷಿದಿಯವರ ‘ಕಳೆದು ಹೋದ ದಿನಗಳು’ ಬರಹವು ಒಂದಷ್ಟು ವಿವರ ನೀಡಿದೆ. ಕುಂಞ್ಞಮ್ಮರು ಸಾಮಾಜಿಕ ಗೌರವವಿಲ್ಲದ ತಿಯಾ ಜಾತಿಯ  ಕೂಲಿಯಾಗಿದ್ದು,  ಓರ್ವ ಮೇಲ್ಜಾತಿ ಶ್ರೀಮಂತನ ವಿಧವೆ ಪತ್ನಿಯಾಗಿ, ಮೃತ ಪತಿಯ ಕುಟುಂಬದವರಿಂದ ಕೊಲೆಯಾಗುವ ಆಪತ್ತಿನಿಂದ ಪಾರಾಗಿ  ಕೊನೆಗೆ ಮತ್ತೆ  ಕೊಡಗಿಗೆ ಬಂದು ಕೂಲಿಯಾಳಾಗುವ ಜೀವನ ಚಕ್ರವು ದಾರುಣವಾಗಿದೆ.   ಅವನ್ನೆಲ್ಲ ಓದಿ ನಾನು ಅತ್ತೆನು.

ನನಗಿಲ್ಲಿ ಗಮನಾರ್ಹವಾಗಿ, ಅಚ್ಚರಿಯಂತೆ ಕಂಡಿದ್ದು ಜಯಕುಮಾರ್ ರವರ ಗ್ರಹಿಕೆಗಳು, ಜೀವನ ದೃಷ್ಟಿ, ಅವರ ವ್ಯಕ್ತಿತ್ವದ ಅಂತರಂಗದ ಚೆಲುವು.

ಮಡಕೇರಿ-ಶುಂಠೀಕೊಪ್ಪ ರೋಡಿನ ಬೋಯಿಕೆರೆಯ ಸರ್ಕಾರಿ ಶಾಲೆಗೆ ದಿನವೂ ಖಾಲೀ ಕಾಲಿನಲ್ಲಿ ಏಳೆಂಟು ಕಿಲೋಮೀಟರು ನಡೆದು ಹೋಗುವಾಗ, ಖಾಲಿ ಹೊಟ್ಟೆಯಲ್ಲಿ ಏಳೆಂಟು ಕಿಲೋಮೀಟರು ಮರಳಿ ಬರುವಾಗ ಆ ಬಾಲಕನ ಮನದಲ್ಲಿ ಮೂಡುವ  ಪ್ರಶ್ನೆ ಏನೆಂದರೆ

‘ಎಸ್ಟೇಟ್ ಓನರ್ ಮಗನೂ ನನ್ನ ಶಾಲೆಗೆ ಬರುವನು, ಆದರೆ ಅವನಿಗೆ ಓಡಾಡಲು ಕಾರ್ ಇದೆ, ಆ ಕಾರ್ ನಲ್ಲೇ ನಾನೂ ಏಕೆ ಹೋಗಲಾಗುತ್ತಿಲ್ಲ’ ಎಂಬ ಮುಗ್ಧ ಆಕ್ಷೇಪವದು.

ಬಾಲ್ಯದಲ್ಲಿ ವರ್ಗ ಪ್ರಜ್ಞೆ ಬೆಳೆಯುವುದು ಬಹುಷಃ ಹೀಗೇ ಇರಬಹುದು.

– ಕಷ್ಟ ಬೆಂಬಿಡದೆ ಇರುವಾಗ  ‘ಸುಖ’ ಎಂಬುದು ಬರಿಯ ಕಲ್ಪನೆ ಇರಬಹುದು ಎನಿಸುವುದು,

– ಈ ಭೂಮಿ ಮತ್ತು ಸೂರ್ಯನ ನಂಟು ಹೇಗೆಂದರೆ

ದೂರದಿಂದ ಬೆಳಕು ಸುಂದರ
ಚುಂಬಿಸಿದರೆ  ಭಸ್ಮ
ಎಂಬ ಮಾತು

– ಮನುಷ್ಯರ  ಮನೋಭೂಮಿಕೆಯ ಬಗ್ಗೆ ,  ಕಲ್ಪನಾ ಶಕ್ತಿಯ ಬಗ್ಗೆ ಹೇಳುವಾಗ

‘ಮನಸಿನ ರಾಕೆಟಿನಲ್ಲಿ ಸದಾ ಇಂಧನ ತುಂಬಿರುತ್ತದೆ’ ಎನ್ನುವ ವಿವರಣೆಯು ತಾಜಾ ಆಗಿ ಓದುಗರ ಮನದಲ್ಲಿ ನಿಲ್ಲುತ್ತದೆ. 

ಎಸ್ಟೇಟ್ ಕಾರ್ಮಿಕರ ಲೈನ್ ಮನೆಯ ವಾಸದಲ್ಲಿ ಮಳೆಯ ನೀರು ಒಳನುಗ್ಗದಂತೆ ಮಾಡಲು ತುಂಡಂಚು ಸಿಕ್ಕಿಸಿ ನೀರಿನ ದಿಕ್ಕು ತಪ್ಪಿಸುವ ವಿವರ, ಬೆಳಿಗ್ಗೆ ಕೂಲಿಗೆ ಹೋಗಿದ್ದ ತಾಯಿ ಸಂಜೆ ಬರುವಷ್ಟರಲ್ಲಿ ಮೃತಪಟ್ಟಿರುವ ಮಗು ( ಲೇಖಕರ ಕಿರಿಯ ಸೋದರ ) ಹೊದಿಕೆ ರಗ್ ಕಳುವಾಗಿ ಇಡೀ ಬದುಕೇ ಚಳಿಚಳಿ ಅನಿಸುವುದು….

ಈ ಜಗತ್ತಿನಲ್ಲಿ ಗತಿಸಿ ಹೋಗಿರುವ, ಎಲ್ಲೂ ದಾಖಲಾಗದೆ ಅಳಿಸಿ ಹೋಗಿರುವ ಕೋಟ್ಯಾಂತರ ದು:ಖಗೀತಗಳಲ್ಲಿ ಜಯಕುಮಾರ್ ಒಂದನ್ನಾರಿಸಿ ನಮಗೆ ಕೊಟ್ಟಿರುವರು ಎನಿಸುತ್ತದೆ. ಇದು ಕೇವಲ ಶೋಕಗೀತವೂ ಅಲ್ಲದೆ ಬಡವರ ಬದುಕಿನಲ್ಲಿ ಹರಿಯುವ  ಪ್ರೀತಿ ಬಾಂಧವ್ಯಗಳೆಂಬ ಅಂತರ್ ಜಲದ, ಹೇಗಾದರೂ  ಮಾಡಿ ಬದುಕು ಕಟ್ಟಿಕೊಳ್ಳುವ  ಸಾಹಸಗಾಥೆಯ  ನಿರೂಪಣೆಯೂ ಆಗಿದೆ.

ಕುಂಞ್ಞಮ್ಮರ ಬದುಕಿನ ಈ  ಪುಟ್ಟ ವಿವರಗಳ ನಿರೂಪಣೆಯೇ ನನ್ನ ಮೆಚ್ಚಿನ ಬರಹಗಾರ ಥಾಮಸ್ ಹಾರ್ಡಿಯ ಟೆಸ್ ಡರ್ಬರ್ ವಿಲ್ಸ್, ಮೇಯರ್ ಆಫ್ ಕ್ಯಾಸ್ಪರ್ ಬ್ರಿಡ್ಜ್ ನ ಓದು ಬೀರಿದಷ್ಟೇ ಪರಿಣಾಮ ಬೀರಿದವು. 
 
ಬದುಕಿನ ಯಾವ ಸವಾಲಿಗೂ ಹೆದರದೆ, ನೊಂದರೂ ಅಳುತ್ತಾ ಕೂರದೆ  ‘ನಡಕ್ ಮೋನೆ’  (ನಡೀ ಮಗನೆ ) ಎಂದು  ಎದ್ದು ನಿಲ್ಲುವ ಆ ತಾಯಿ ಹುಡುಕಿದರೆ ನಮ್ಮ ಕುಟುಂಬಗಳಲ್ಲೂ ಸಿಗುವರು. 

ನೇರ  ಭಾವುಕತೆ ತೋರದ,  ಜಯಕುಮಾರ್ ರ ಸಂಯಮದ, ತಮಾಷೆಯ, ಹೃದಯ ತುಂಬಿ ಬರುವಂತಹ ಈ ಬರಹವನ್ನು ನಾನು ಓದಿ ಮೌನವಾದೆ. ಜಯಕುಮಾರ್ ರವರ ಜೀವಚೈತನ್ಯವು ಅವರೇ ಸೃಷ್ಟಿಸಿಕೊಂಡಿರುವ ದ್ವಿಪಾತ್ರದಲ್ಲಿ  ಹರಿದು ಸಾಗುತ್ತದೆ. 

ಕರ್ನಾಟಕದ ಸಾಮಾಜಿಕ ಜೀವನವನ್ನು ಮಾನವೀಯಗೊಳಿಸುವ ಪ್ರಯತ್ನದ ಹೋರಾಟಗಳಲ್ಲಿ ಕಮ್ಯೂನಿಸ್ಟ್ ರ ಕೊಡುಗೆಯೂ ಬಹಳ ದೊಡ್ಡದು.  ಜಯಕುಮಾರ್ ಮತ್ತು ಲೀಲಾ ಸಂಪಿಗೆಯವರು ಈ ಸಂಗ್ರಾಮದಲ್ಲೇ ಸಾಗಿ ಬಂದವರು. ದಶಕಗಳ ಸ್ನೇಹವಿದ್ದಾಗಲೂ ಒಬ್ಬರ ಬದುಕಿನ ವಿವರಗಳಾಗಲಿ, ಹಿನ್ನೆಲೆಯಾಗಲಿ ಬಹುತೇಕರಿಗೆ ತಿಳಿದಿರದು. ನಾಲ್ಕು ದಶಕಗಳ ಕಾಲ  ಸಾರ್ವಜನಿಕ ಬದುಕಿನಲ್ಲಿ ಇದ್ದರೂ ಸಹ ಜಯಕುಮಾರ್ ರ ಬದುಕಿನ ಇಷ್ಟು ವಿವರಗಳು ತಿಳಿದಿರಲಿಲ್ಲ. ಅದೀಗ ಹಲವು ಕಾದಂಬರಿಗಳಿಗಾಗುವಷ್ಟು, ಇಲ್ಲವೆ ನಮಗೆಲ್ಲಾ ಬದುಕಿನ ಮೌಲ್ಯವಾಗುವಷ್ಟಾದರೂ ಪ್ರಮಾಣದಲ್ಲಿ ಸಿಕ್ಕಿದೆ.

ಈ ಪುಸ್ತಕದಲ್ಲಿ  ಜನಶಕ್ತಿ ಪತ್ರಿಕೆಯ ಸಂಪಾದಕರಾದ ಎಸ್.ವೈ.ಗುರುಶಾಂತ್ ರವರ  ಬರಹವೊಂದು  ಹೃದಯಸ್ಪರ್ಶಿಯಾಗಿದೆ.

ಜಯಕುಮಾರ್  ಮತ್ತು ನಾನು ಹಲವೊಮ್ಮೆ ಭೇಟಿಯಾದದ್ದಿದೆ. ಕಳೆದ ವರ್ಷ ಮಾನವ ಬಂಧುತ್ವ ವೇದಿಕೆಯು ಬೆಂಗಳೂರಿನಲ್ಲಿ ‘ ಪೆರಿಯಾರ್ ಜನ್ಮದಿನ’ ಆಚರಿಸಿದಾಗ ನನ್ನ  ಭಾಷಣವಿತ್ತು.  ಇನ್ನೊಮ್ಮೆ ರಾಮನಗರದಲ್ಲಿ ವೇದಿಕೆಯ ಸಭೆ ನಡೆಸಿ ನಂತರ  ಬಿಯರ್ ಕುಡಿದು ಹರಟಿದ್ದೆವು. ಅವರೊಳಗೊಬ್ಬ ಇಷ್ಟು ಚೆಂದನೆಯ ಬರಹಗಾರನಿರುವನೆಂಬ ಸುಳಿವು ಆಗ ನನಗೆ ಸಿಕ್ಕಿರಲಿಲ್ಲ.  ಇನ್ನೂ ಮಿಗಿಲಾಗಿ ಬದುಕಿನ ಕುರಿತು ಅವರಿಷ್ಟು ಪ್ರೀತಿಯಾಗಿ, ಲವಲವಿಕೆಯಿಂದ, ಪ್ರಾಕ್ಟಿಕಲ್ಲಾಗಿ ಯೋಚಿಸುವರೆಂಬುದು ಮತ್ತು ಆಚರಿಸುವರೆಂಬುದು ನನಗೆ ಬಹಳ ದೊಡ್ಡದೆನಿಸಿದೆ. 

ಪ್ರಿಯ ಜಯಕುಮಾರ್, ನಿಮ್ಮ ಬರಹ-ಬದುಕು ಮನತುಂಬಿದೆ ನಿಮಗೊಂದು ಪ್ರೀತಿಯ ಷೇಕ್ ಹ್ಯಾಂಡ್.

– ಪಾರ್ವತೀಶ ಬಿಳಿದಾಳೆ, ಹಿರಿಯ ಪತ್ರಕರ್ತರು

Leave a Reply