ಧಾರವಾಡ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅನುಷ್ಠಾನಗೊಳಿಸಿ, ಜಗತ್ತಿಗೆ ಜಾತ್ಯಾತೀತ ಸಮಸಮಾಜ, ಶೋಷಣೆರಹಿತ ಹಾಗೂ ಕಾಯಕ ದಾಸೋಹದ ಕ್ರಾಂತಿಕಾರಿ ತತ್ವ ಆದರ್ಶವನ್ನು ಸಾರಿದ ಬಸವಣ್ಣನವರು ಭಾರತದ ಪ್ರಥಮ ಸ್ವತಂತ್ರ ವಿಚಾರವಾದಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕ್ರತಿಕ ನಾಯಕ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಶೋಷಣೆರಹಿತ ಸಮಸಮಾಜ, ಜಾತ್ಯತೀತ, ಮಹಿಳಾ ಸ್ವಾತಂತ್ರ್ಯದಂತಹ ಕ್ರಾಂತಿಕಾರಿ ಬದಲಾವಣೆಯನ್ನು ತಂದು ಇಡಿ ಜಗತ್ತಿಗೆ ಬಸವಣ್ಣ ಮಾದರಿಯಾದರು ಎಂದರು.
ಇಂಥ ಮಹಾನ್ ವ್ಯಕ್ತಿ ಕರ್ನಾಟಕದಲ್ಲಿದ್ದದ್ದು ನಮ್ಮ ನಾಡಿಗೆ ದೊಡ್ಡ ಗೌರವ, ಬಸವಣ್ಣನವರ ಆಚಾರ, ವಿಚಾರ, ತತ್ವ, ಆದರ್ಶಗಳನ್ನು ದೇಶಕ್ಕೆ ಹಾಗೂ ಜಗತ್ತಿಗೆ ಪ್ರಚಾರವಾಗಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಎಲ್ಲಾ ಸರಕಾರಿ ಮತ್ತು ಅರೆಸರಕಾರಿ, ಸಂಘ ಸಂಸ್ಥೆಗಳಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕರೆಂದು ಭಾವಚಿತ್ರ ಹಾಕಿರುವುದು ಶ್ಲಾಘನೀಯ. ಇದರಿಂದ ಜನಸಾಮಾನ್ಯರಿಗು ಬಸವಣ್ಣನವರ ತತ್ವಗಳು ತಲುಪಲಿವೆ ಎಂದರು.

ಮನೆಯೆ ಮೊದಲ ಪಾಠಶಾಲೆ ತಾಯಿಯೇ ಮೊದಲು ಗುರು. ಗೃಹಿಣಿಯರು ಈ ನಿಟ್ಟಿನಲ್ಲಿ ಬಸವಣ್ಣರ ಅಚಾರ, ವಿಚಾರ, ಸಂಸ್ಕಾರಗಳನ್ನು ಮಕ್ಕಳಿಗೆ ನೀಡಲು ಮುಂದಾಗಬೇಕು ಎಂದುಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಎಂ.ಎಂ.ಕಲ್ಬುರ್ಗಿ ರಾಷ್ಟ್ರಿಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ, ಬಸವಣ್ಣನವರನ್ನು ಈ ಜಗತ್ತು ಕಂಡ ಮೊದಲ ಸ್ವತಂತ್ರ ಧಾರ್ಮಿಕ ಮಹಾಮಾನವತಾವಾದಿ. ಅವರ ಕ್ರಾಂತಿ ಆರಂಭಗೊಂಡಿದ್ದು ಅವರ ಮನೆಯಲ್ಲಿ ಮಹಿಳಾ ಸಮಾನತೆಯ ವೈಚಾರಿಕತೆಯಿಂದ ಆರಂಭಗೊಂಡಿತ್ತು ಎಂದರು.

ಸಿದ್ದರಾಮಯ್ಯನವರು ನಿನ್ನೆ ಮಂಡಿಸಿದ ಬಜೆಟ್ಗೆ್ ಕಾಯಕ ದಾಸೋಹ ಸೂತ್ರದ ಬಜೆಟ್ ಎಂದು ಹೆಸರಿಟ್ಟಿದ್ದು ಅಭಿನಂದನೆಯ, ಗಳಿಕೆ ಹಾಗೂ ಬಳಕೆಯ ಸಮಾನತೆಯನು ಹೇಗೆ ಸರಿದೂಗಿಸಬೇಕೆಂದು ಅವರು ಬಸವಣ್ಣನ ತತ್ವದ ಮೂಲಕ ಈಗ ತೋರಿಸಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರದ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಂ.ಹೀರೆಮಠ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರ ಹಾಗೂ ಸಮಾಜದ ಮುಖಂಡರು ಉಪಸ್ತಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು, ನ್ಯಾ. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.




