ನಾಯಿ ಕಡಿದ ತಕ್ಷಣ ರೇಬೀಸ್ ಚುಚ್ಚುಮದ್ದು ಪಡೆದು ರೋಗದಿಂದ ಮುಕ್ತರಾಗಿ

2 years ago

ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್ ಸಲಹೆ

ಬಳ್ಳಾರಿ: ಯಾರಿಗಾದರೂ ನಾಯಿ ಕಡಿದ ಸಂದರ್ಭದಲ್ಲಿ ಮಾರಣಾಂತಿಕವಾಗಿ ಕಂಡುಬರಬಹುದಾದ ರೇಬೀಸ್ ಕಾಯಿಲೆಯನ್ನು ನಿಯಂತ್ರಿಸಲು ತಕ್ಷಣ ಹತ್ತಿರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ನಿಗದಿತ ಅವಧಿಗಳಲ್ಲಿ ಲಸಿಕೆ ಪಡೆದು ಕಾಯಿಲೆಯಿಂದ ದೂರವಾಗಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಕರೆನೀಡಿದರು.

ಪಂಚಾಯತ್ ನ ವಿಡಿಯೋ ಹಾಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೆಬೀಸ್ ಕಾಯಿಲೆ ನಿಯಂತ್ರಣ ಕುರಿತು ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಾಕಿದ ನಾಯಿಗಳಿಗೆ ಮಾಲೀಕರು ನಿಯಮಿತವಾಗಿ ರೇಬೀಸ್ ನಿರೋಧಕ ಚುಚ್ಚುಮದ್ದು ಹಾಕಿಸಬೇಕು ಹಾಗೂ ಯಾರಿಗಾದರೂ ಬೀದಿನಾಯಿಗಳು ಅಥವಾ ಸಾಕಿದ ನಾಯಿಗಳು ಕಚ್ಚಿದ ಅಥವಾ ಗಾಯವನ್ನು ನೆಕ್ಕಿದಲ್ಲಿ ನಿರ್ಲಕ್ಷ್ಯ ಮಾಡದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆಯನ್ನು ಪಡೆಯುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಇತ್ತೀಚಿಗೆ ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಿದ್ದು, ಸಾರ್ವಜನಿಕರು ಅನುಮತಿ ಪಡೆಯದೆ ಮಾಂಸ ಮಾರಾಟ ಮಾಡಬಾರದು. ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಬಾರದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್‌ಬಾಬು ಮಾತನಾಡಿ, ಜಿಲ್ಲೆಯ ಎಲ್ಲಾ 29 ಪ್ರಾಥಮಿಕ ಆರೋಗ್ಯ ಕೇಂದ್ರ, 06 ಸಮುದಾಯ ಆರೋಗ್ಯ ಕೇಂದ್ರ ಮತ್ತು 2 ಸಾರ್ವಜನಿಕ ಆಸ್ಪತ್ರೆ, 9 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆ, ವಿಮ್ಸ್ ಗಳಲ್ಲಿ ಸದಾ ಲಸಿಕೆ ಲಭ್ಯವಿದ್ದು ಯಾವುದೇ ಆತಂಕವಿಲ್ಲ ಎಂದರು.

ಸಾರ್ವಜನಿಕರು ನಾಯಿ ಕಡಿತದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರದೇ ಸೋಪು ಮತ್ತು ನೀರಿನಿಂದ ಗಾಯವನ್ನು ಚೆನ್ನಾಗಿ ತೊಳೆದು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಎಂದರು.

ಇದೇ ವೇಳೆ ಇಲಿ ಜ್ವರ ನಿಯಂತ್ರಣ ಕಾರ್ಯಕ್ರಮ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸವರೆಡ್ಡಿ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಮರಿಯಂಬಿ.ವಿ.ಕೆ‌, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ವಿಮ್ಸ್ ತಜ್ಞ ಡಾ.ಅನಂತ ಆಚಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ತಾಲೂಕು ಪಂಚಾಯತ ಅಧಿಕಾರಿಗಳು, ಪಶು ಸಂಗೋಪನಾ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಇತರ ಇಲಾಖೆ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಹಾಜರಿದ್ದರು.

Leave a Reply