ಡಿಹೆಚ್ಓ ಡಾ.ವೈ.ರಮೇಶ್ ಬಾಬು ಎಚ್ಚರಿಕೆ
ಬಳ್ಳಾರಿ: ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರುವ ವೈದ್ಯರು ಕೆ.ಪಿ.ಎಮ್.ಇ ಕಾಯ್ದೆ ಅಡಿಯಲ್ಲಿ ನೋಂದಾಯಿಸಿಕೊಂಡು ಕ್ಲಿನಿಕ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಮ್ ಅಥವಾ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳನ್ನು ಆರಂಭಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕಾಯ್ದೆ 2007 ಮತ್ತು 2009ರ ನಿಯಮಗಳು ಹಾಗೂ ಕಾಲಕಾಲಕ್ಕೆ ಆದ ತಿದ್ದುಪಡಿ ಅನುಸಾರ ಅಂಗೀಕೃತ ವೈದ್ಯಕೀಯ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರುವ ವೈದ್ಯರು ಕಡ್ಡಾಯವಾಗಿ ಕೆ.ಪಿ.ಎಮ್.ಇ ಕಾಯ್ದೆಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಂದ ಕೆ.ಪಿ.ಎಮ್.ಇ ಕಾಯ್ದೆಯಡಿ ನೋಂದಣಿ ಪ್ರಮಾಣ ಪತ್ರವನ್ನು ಪಡೆದ ನಂತರವೇ ಕ್ಲಿನಿಕ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಮ್ ಅಥವಾ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳನ್ನು ಆರಂಭಿಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.
ಒಂದು ವೇಳೆ ನಿರ್ಲಕ್ಷಿಸಿ ಅನುಮತಿ ಪಡಿಯದೇ ಆರಂಭಿಸಿದರೆ ಕೆ.ಪಿ.ಎಮ್.ಇ ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಸಂಬಂಧಪಟ್ಟವರ ವಿರುಧ್ದ ಕೆ.ಪಿ.ಎಮ್.ಇ ಕಾಯ್ದೆ ಕಲಂ 19, 20, 21 ಹಾಗೂ 22 ರ ಅನುಸಾರ ದಂಡ ವಿಧಿಸಲಾಗುವುದೆಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಅನುಮತಿ ಪಡೆಯದೇ ಖಾಸಗಿ ಕೇಂದ್ರಗಳನ್ನು ತೆರೆದಿರುವ ಒಂದು ಆಸ್ಪತ್ರೆ, ಎರಡು ಪಾಲಿ ಕ್ಲಿನಿಕ್, ಒಂದು ಪ್ರಯೋಗಾಲಯ ಹಾಗೂ ಒಂದು ಕ್ಲಿನಿಕ್ ವಿರುದ್ಧ ಸಿರುಗುಪ್ಪ ತಾಲ್ಲೂಕಿನಲ್ಲಿ ತಲಾ ರೂ.50,000/- ರಂತೆ ಒಟ್ಟು ರೂ.2,50,000/- ದಂಡವನ್ನು ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಕಲಿ ವೈದ್ಯರ ವಿರುದ್ಧ ಎಫ್ಐ.ಆರ್ ದಾಖಲು: ಜಿಲ್ಲೆಯಲ್ಲಿ ಅಧಿಕೃತ ವೈದ್ಯಕೀಯ ಪದವಿ ಇಲ್ಲದೇ ವೈದ್ಯ ವೃತ್ತಿ ಮಾಡುವವರಿಗೆ ಕೆ.ಪಿ.ಎಮ್.ಇ ಕಾಯ್ದೆ ಅನುಸಾರ ಎಫ್.ಐ.ಆರ್ ದಾಖಲು ಮಾಡಲಾಗುತ್ತಿದೆ. ಈಗಾಗಲೇ ಬಳ್ಳಾರಿ ತಾಲ್ಲೂಕಿನ ಕೊರ್ಲಗುಂದಿ ಗ್ರಾಮ, ಬಳ್ಳಾರಿ ನಗರದ ಬೆಳಗಲ್ ಕ್ರಾಸ್ ಮತ್ತು ಮಿಲ್ಲರ್ ಪೇಟೆಯಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿದ್ದ ಮೂವರು ನಕಲಿ ವೈದ್ಯರ ವಿರುದ್ಧ ಎಫ್ಐವಆರ್ ದಾಖಲಿಸಿ ತಲಾ ರೂ.50,000/- ರಂತೆ ಒಟ್ಟು ರೂ.1,50,000/- ದಂಡವನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಬಾಡಿಗೆ ನೀಡುವಾಗ ಮಳಿಗೆ/ ಮನೆ ಮಾಲಿಕರು ವಹಿಸಬೇಕಾದ ಮುಂಜಾಗ್ರತೆ: ಯಾವುದೇ ಮನೆ ಅಥವಾ ಮಳಿಗೆಗಳನ್ನು ಆಸ್ಪತ್ರೆ, ಕ್ಲಿನಿಕ್ ಹಾಗೂ ಪ್ರಯೋಗಾಲಯ ಮುಂತಾದವುಗಳಿಗೆ ಬಾಡಿಗೆ ಕೊಡುವ ಮುನ್ನ ಸಂಬಂಧಪಟ್ಟ ಮನೆ ಹಾಗೂ ಕಟ್ಟಡದ ಮಾಲೀಕರು ವೈದ್ಯರ ಅಧಿಕೃತ ವೈದ್ಯಕೀಯ ಪ್ರಮಾಣವನ್ನು ಪರಿಶೀಲಿಸಿ ನಂತರ ಬಾಡಿಗೆ ಕೊಡಬೇಕು ಎಂದು ತಿಳಿಸಿದ್ದಾರೆ.




