ಮಂಗಳೂರು: ಉಡುಪಿ ತಾಲ್ಲೂಕಿನ ತೆಂಕನಿಡಿಯೂರು ಗ್ರಾಮ ಪಂಚಾಯತಿಯ ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿ ಅನಧಿಕೃತ ಕೋಳಿ ಅಂಗಡಿಯೊಂದನ್ನು ತೆರೆದಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ದುರ್ವಾಸನೆ ಮತ್ತು ಪರಿಸರ ಮಾಲಿನ್ಯ ಉಂಟಾಗುವ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ, ಪಂಚಾಯಿತಿ ಸದಸ್ಯರು ಮತ್ತು ಪರಿಸರದ ನಾಗರಿಕರು ಅನಧಿಕೃತ ಕೋಳಿ ಅಂಗಡಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಪಂಚಾಯತಿಯ ನಿರ್ಲಕ್ಷ್ಯ ಖಂಡಿಸಿ ಧರಣಿ ನಡೆಸುವ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ.ಎಚ್ ಅವರಿಗೆ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಕೊಡವೂರು ಪಾಳೆಕಟ್ಟೆ ಶಾಖೆಯ ಅಧ್ಯಕ್ಷ ರವಿ ಲಕ್ಷ್ಮೀ ನಗರ ಮತ್ತು ದಲಿತ ಚಿಂತಕ ಜಯನ್ ಮಲ್ಪೆ ಮನವಿ ನೀಡಿ ಎಚ್ಚರಿಸಿದರು.



