ದಾವಣಗೆರೆ: ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿರುವ ದಾವಣಗೆರೆಯ ಮುಖ್ಯಭಾಗದಲ್ಲಿದ್ದ ಹೆಗಡೆ ನಗರದ ಜನರನ್ನು ಉತ್ತಮ ವ್ಯವಸ್ಥೆಗಳೊಂದಿಗೆ ಒಳ್ಳೆಯ ಕಡೆ ಮನೆ ಮಾಡಿಸಿಕೊಡುತ್ತೇವೆ ಎಂದು ನಂಬಿಸಿ ಸುಮಾರು 7-8 ಕಿಲೋಮೀಟರ್ ದೂರದ ದೊಡ್ಡಬಾತಿ ಎಂಬಲ್ಲಿನ ಬಯಲಿನಲ್ಲಿ ಬಿಟ್ಟು ಬರಲಾಗಿದೆ. ಇದು ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ತಮ್ಮದೇ ಕ್ಷೇತ್ರದ ಜನರನ್ನು ನಂಬಿಸಿ ಕತ್ತು ಕುಯ್ಯುವ ಕಾರ್ಯವಾಗಿದ್ದು 450ಕ್ಕೂ ಹೆಚ್ಚು ಕುಟುಂಬಗಳು ಈಗ ನಿರಾಶ್ರಿತ ಪ್ರಜೆಗಳಂತೆ ಕಣ್ಣೀರಲ್ಲಿ ಬದುಕುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ವತಿಯಿಂದ ಈ ಕುರಿತು ಸತ್ಯ ಶೋಧನಾ ಸಮಿತಿಯನ್ನು ಕಳುಹಿಸಿ ಸತ್ಯ ಮಾಹಿತಿ ಸಂಗ್ರಹಿಸಲಾಗಿದೆ. ಅದು ಈ ಕೆಳಗಿನಂತಿದೆ ಎಂದು ಪ್ರಕರಣ ಮುಖ್ಯ ಅಂಶಗಳ ಪಟ್ಟಿಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.
1. ರಿಂಗ್ ರೋಡ್ ಜೋಡಣೆ ಕಾರಣ ಮುಂದಿಟ್ಟು 40 ವರ್ಷಗಳಿಂದ ವಾಸವಿದ್ದ ಜನರನ್ನು ತೆರವುಗೊಳಿಸಲಾಗಿದೆ.
2. ಪರ್ಯಾಯ ಜಾಗ ಎಂದು ನಗರಕ್ಕೆ ಹತ್ತಿರವಿದ್ದ ಸರ್ವೆ ನಂಬರ್ 49 ಅನ್ನು ತೋರಿಸಲಾಯಿತು. ನಂತರ ಸರ್ವೆ ನಂಬರ್ 50, 51, 52 ಸ್ಥಳಗಳನ್ನು ತೋರಿಸಲಾಯಿತು. ಅದನ್ನೇ ನಂಬಿಸಿ ಹೆಗಡೆ ನಗರದಿಂದ ಜನರನ್ನು ತೆರವುಗೊಳಿಸಲು ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಲಾಯಿತು.
3. ವಾಸ್ತವದಲ್ಲಿ ನಗರದಿಂದ 7-8 ಕಿಲೋಮೀಟರ್ ದೂರದ ಮೂಲಭೂತ ಸೌಕರ್ಯಗಳಿಲ್ಲದ ಸರ್ವೆ ನಂಬರ್ 53 ರಲ್ಲಿ ಜನರನ್ನ ತಂದು ಕಸ ಸುರಿಯುವ ರೀತಿಯಲ್ಲಿ ಬಿಟ್ಟು ಬರಲಾಯಿತು.
4. ಕೊರೆಯುವ ಚಳಿಯ ಮದ್ಯ ಕೇವಲ ಕಬ್ಬಿಣದ ಶೀಟ್ ಮತ್ತು ಟಾರ್ಪಲ್ ಒದಗಿಸಿಕೊಡಲಾಯಿತು.
5. ಆರಂಭದಲ್ಲಿ ಕುಡಿಯಲು ಬಾಟಲ್ ನೀರು, ಒಳ್ಳೆಯ ಊಟದ ಏರ್ಪಾಟು ಮಾಡಿ ಜನರು ಪ್ರಶ್ನಿಸದಂತೆ ನೋಡಿಕೊಳ್ಳಲಾಯಿತು.
6. ಜನರನ್ನು ಇಲ್ಲಿಗೆ ತಂದು ಬಿಟ್ಟು ಒಂದೂವರೆ ತಿಂಗಳು ಕಳೆದಿದೆ. ಈಗ ಬಾಟಲ್ ನೀರು ಇಲ್ಲ, ಊಟವೂ ಇಲ್ಲ. ಜನರಿಗೆ ತಾವು ಮೋಸ ಹೋದ ಬಗ್ಗೆ ಅರಿವಾಗತೊಡಗಿದೆ.
7. ಇಲ್ಲಿನ ಬಹುತೇಕ ಮಂದಿ ಮಂಡಕ್ಕಿ ಬಟ್ಟಿ ಸೇರಿದಂತೆ ದಿನಗೂಲಿ ಕಾರ್ಮಿಕರಾಗಿದ್ದು, ಈ ಪ್ರದೇಶ ಇರುವ ಜಾಗಕ್ಕೆ ರಸ್ತೆ ಸಂಪರ್ಕವಿಲ್ಲ. ಹಾಗಾಗಿ ಬಸ್ಸಿನ ವ್ಯವಸ್ಥೆ ಇಲ್ಲ. ಏನೇ ಬೇಕಿದ್ದರೂ ಕನಿಷ್ಠ 4 ಕಿಲೋಮೀಟರ್ ಆಟೋದಲ್ಲಿ ಹೋಗಬೇಕು. ಅದಕ್ಕೆ ಆಟೋದವರು 200 ರೂಪಾಯಿ ವರೆಗೆ ತೆಗೆದುಕೊಳ್ಳುತ್ತಿದ್ದಾರೆ.
8. ಹತ್ತಿರದಲ್ಲಿ ಮೂಲಭೂತ ಸೌಕರ್ಯಗಳಾದ ಅಂಗನವಾಡಿ ಶಾಲೆ, ಆಸ್ಪತ್ರೆ ಯಾವುದೂ ಇಲ್ಲ.
9. ಸಂಪೂರ್ಣ ಹೊಲಗಳಿಂದ ಸುತ್ತುವರಿದಿರುವ ಸ್ಥಳವಾಗಿರುವುದರಿಂದ ಜೋರು ಗಾಳಿ ಬಿಸುತ್ತಲೇ ಇರುತ್ತದೆ. ಜೊತೆಗೆ ಹಾವುಗಳ, ನರಿಗಳ ಕಾಟ ಬಹಳಷ್ಟಿದೆ.
10. ಸುಮಾರು ಕುಟುಂಬಗಳಿಗೆ ಯಾವುದೇ ಸ್ಥಳ ತೋರಿಸದೆ ಪೆಂಡಾಲ್ ಹಾಕಿ ಕಾಯಿರಿ ಎಂದು ಹೇಳಲಾಗಿದೆ. ಉಳಿದವರಿಗೆ ಕನಿಷ್ಠ ಒಂದು ಜಾಗ, ಹಕ್ಕುಪತ್ರ ಇದೆ. ಇವರಿಗೆ ಅದೂ ಇಲ್ಲ.
11. ಪಕ್ಕದ ಹೊಲಗಳಲ್ಲಿ ನಾಟಿ ಮಾಡಿ ನೀರು ಬಿಟ್ಟರೆ ಇವರಿಗೆ ಕೊಟ್ಟಿರುವ ಜಾಗಕ್ಕೆ ನೀರು ನುಗ್ಗಲಿದೆ.
12. ಮಣ್ಣು ರಸ್ತೆ ಮಳೆ ಬಂದರೆ ನಡೆದಾಡಲು ಸಾಧ್ಯವಾಗದಷ್ಟು ಕೊಚ್ಚೆಯಾಗಲಿದೆ.
ಸದ್ಯ ಇಲ್ಲಿನ ಜನ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಅಕ್ಷರಶಃ ನರಕದಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಅವರ ತಲೆಯ ಮೇಲೆ ಸೂರು ಬರುವುದು ಯಾವಾಗ ಎಂದು ಅವರಿಗೆ ಯಾವ ಭರವಸೆಯನ್ನು ಜಿಲ್ಲಾಡಳಿತವಾಗಲಿ, ಶಾಸಕರಾಗಲಿ ನೀಡಿಲ್ಲ ಎಂದರು.
ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಬದುಕುತ್ತಿರುವವರ ಪರ ಎಸ್‌ಡಿಪಿಐ ಪಕ್ಷ ನಿಲ್ಲಲಿದೆ. ವಸತಿ ಸಚಿವರಾದ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸ್ಥಳೀಯ ಶಾಸಕರಾದ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪಕ್ಷದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸುತಿದ್ದು, ಒಂದು ತಿಂಗಳ ಗಡುವು ನೀಡಲಾಗಿದೆ ಎಂದರು.
ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣ ಇವರಿಗೆ ಪಕ್ಕ ಮನೆ ಮತ್ತು ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಲ್ಲಿನ ಸಂತ್ರಸ್ತರನ್ನು ಸೇರಿಸಿಕೊಂಡು ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿ, ರಿಯಾಜ್ ರಿಜ್ ವಿ, ಜಿಲ್ಲಾ ಉಪಾಧ್ಯಕ್ಷ, ಅಶ್ಫಾಕ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎ. ಆರ್. ತಾಹೀರ್, ಜಿಲ್ಲಾ ಖಜಾಂಚಿ ಹಾಜರಿದ್ದರು.




