ಪತ್ರಕರ್ತ ರಾ.ಪ್ರವೀಣ್ ಕಾಲೈಕ್ಯ

2 years ago

#Journalist #RaPraveen #passedaway

ಪಾದರಸದಂತಹ ಪತ್ರಕರ್ತ ರಾ.ಪ್ರವೀಣ್ ಇವತ್ತು ಅಕಾಲಿಕವಾಗಿ ತೀರಿಕೊಂಡರೆಂಬ ಸುದ್ದಿ ತಿಳಿದು ಆಘಾತವಾಯ್ತು. ಮೂವತ್ತು ವರ್ಷದ ಗೆಳೆತನ. ಜಾಣಗೆರೆ ವೆಂಕಟರಾಮಯ್ಯನವರ ಮುದ್ರಣಾಲಯದ ಅಡ್ಡಾದಿಂದ ಆರಂಭವಾದ ಸ್ನೇಹ ಸಂಬಂಧ ಮುಕ್ಕಾಗದೇ ಮುಂದುವರೆದಿತ್ತು.

ಇತ್ತೀಚೆಗೆ ಒಂದು ದಿನ ಬೆಳ್ಳಂಬೆಳಿಗ್ಗೆ ಕಾಲ್ ಮಾಡಿ ಗುರುವೇ ಒಂದು ಕವಿತೆ ಬರೆದಿದ್ದೇನೆ ಓದಲಾ ಎಂದು ಕೇಳಿದ. ‌ಓದಿದ. ಸಾಧಾರಣ ಕವಿತೆಯಾಗಿದ್ದರೂ ಆತನ ಕಾವ್ಯೋತ್ಸಾಹ ನನಗಿಷ್ಟವಾಯ್ತು. ಪತ್ರಿಕೋದ್ಯಮವನ್ನು ಬದುಕಾಗಿ ಅಷ್ಟೇ ಅಲ್ಲಾ ಉಸಿರಾಗಿಯೇ ಪರಿಗಣಿಸಿದ್ದ ಪ್ರವೀಣ್ ಸಾಯಬಾರದ ವಯಸ್ಸಲ್ಲಿ (55) ತೀರಿಕೊಂಡ.

ಸದಾ ಯಾವುದಾದರೊಂದು ಹುಚ್ಚುತನವನ್ನು ಆಹ್ವಾನಿಸಿಕೊಂಡೇ ಕ್ರಿಯಾಶೀಲವಾಗಿ ಓಡಾಡುತ್ತಿದ್ದ ಈ ಪ್ರವೀಣ್ ವರನಟ ರಾಜಕುಮಾರ್ ರವರ ಮಹಾ ಅಭಿಮಾನಿ. ರಾಜಕುಮಾರರವರು ಬಾರದೇ ಇದ್ದರೆ ಮದುವೆ ದಿನ ತಾಳಿಯನ್ನೇ ಕಟ್ಟುವುದಿಲ್ಲವೆಂದು ಹಠ ಹಿಡಿದು ಕೂತ ವಿಪರೀತ ಹುಚ್ಚು ಅಭಿಮಾನ. ಕೊನೆಗೆ ಈ ಅಭಿಮಾನಿ ದೇವರ ಆಗ್ರಹಕ್ಕೆ ಮಣಿದ ರಾಜಕುಮಾರರವರು ಮದುವೆ ಮನೆಗೆ ಬಂದ ಮೇಲೇಯೇ ತಾಳಿ ಕಟ್ಟಿ ಆಶೀರ್ವಾದ ಪಡೆದು ಸಂಸಾರ ಆರಂಭಿಸಿದ ಕೀರ್ತಿ ಪ್ರವೀಣನಿಗೆ ಸಲ್ಲಬೇಕು. ರಾಜ್ ರವರ ನಂತರ ಅವರ ಮಗ ಶಿವರಾಜಕುಮಾರರ ಅತ್ಯುಗ್ರ ಅಭಿಮಾನಿಯಾಗಿದ್ದ. ಶಿವರಾಜಕುಮಾರರವರಂತೆಯೇ ಕೇಶವಿನ್ಯಾಸ ಮಾಡಿಕೊಂಡಿದ್ದ. ನೋಡಲು ಶಿವರಾಜಕುಮಾರ ಹಾಗೇ ಇದ್ದೀಯಾ ಅಂದ್ರೆ ಸಂಭ್ರಮಿಸುತ್ತಿದ್ದ.

ಅದೇ ರೀತಿ ಜರ್ನಲಿಸಂ ಅನ್ನೋದನ್ನೂ ವಿಪರೀತ ಹಚ್ಚಿಕೊಂಡಿದ್ದ. ಜಾಣಗೆರೆಯವರ ಸಂಪರ್ಕದಿಂದ ಬರವಣಿಗೆಯತ್ತ ಆಕರ್ಷಿತನಾದ ಪ್ರವೀಣ್ ಅಪರಾಧ ಸುದ್ದಿಗಳ ಬರವಣಿಗೆ ಬಗ್ಗೆ ವಿಪರೀತ ಮೋಹ ಬೆಳೆಸಿಕೊಂಡಿದ್ದ. ಈ ಮೋಹದ ದಾಹ ಹೆಚ್ಚಾಗಲು ರವಿ ಬೆಳೆಗೆರೆಯವರ ಪ್ರಭಾವವೂ ಹೆಚ್ಚಾಗಿತ್ತು. ಹಾಯ್ ಬೆಂಗಳೂರು, ಅಗ್ನಿ, ಚಾರ್ಜ್ ಶೀಟ್ ನಂತಹ ಟ್ಯಾಬ್ಲೈಡ್ ಪತ್ರಿಕೆಗಳಿಗೆ ಕ್ರೈಂ ಸ್ಟೋರಿಗಳನ್ನು ರೋಚಕವಾಗಿ ಬರೆಯತೊಡಗಿದ. ಅದೇ ಉಮೇದಿನಲ್ಲಿ ಬಾಲಕೃಷ್ಣ ಕಾಕತ್ಕರ್ ಅವರ ಕ್ರೈಂ ಡೈರಿ ಧಾರಾವಾಹಿ ತಂಡ ಸೇರಿಕೊಂಡು ಅನೇಕ ಕ್ರೈಂ ಕಥೆಗಳನ್ನು ಕಟ್ಟಿಕೊಟ್ಟು ಹೆಸರುವಾಸಿಯಾದ.

“ಈ ಅಪರಾಧ ಸುದ್ದಿಗಳಿಗೆ ಆಯಸ್ಸು ಕಮ್ಮಿ, ಅವುಗಳ ಸಹವಾಸ ಬಿಟ್ಟು ಜನರಿಗೆ ಉಪಯೋಗವಾಗುವಂತಹುದ್ದನ್ನು ಬರಿಯೋ” ಎಂದು ಹೇಳಿದಾಗೆಲ್ಲಾ ಅದೆಲ್ಲಾ ನಿಮ್ಮಂತೋರಿಗೆ ಗುರುವೇ ನನಗಾಗೋದಿಲ್ಲ ಎಂದು ದೇಶಾವರಿ ನಗೆ ನಕ್ಕು ಪಾರಾಗುತ್ತಿದ್ದ. ಟ್ಯಾಬ್ಲೈಡ್ ಪತ್ರಿಕೆಗಳ ಅಪರಾಧ ಸುದ್ದಿಗಳ ವೈಭವೀಕರಣದ ಕಾಲ ಮುಗಿದು, ಕ್ರೈಂ ಡೈರಿ ಧಾರಾವಾಹಿ ನಿಂತಾದ ನಂತರ ಪ್ರಜಾ ಟಿವಿ ಸೇರಿಕೊಂಡ. ಅಲ್ಲಿಯೂ ಹೆಚ್ಚು ಕಾಲ ನೆಲೆ ನಿಲ್ಲದೇ ತನ್ನದೇ ಆದ “ರಾ ನ್ಯೂಜ್ ” ಎನ್ನುವ ಹೆಸರಿನ ಯೂಟ್ಯೂಬ್ ಚಾನೆಲ್ ಶುರು ಮಾಡಿ ಯಶಸ್ವಿಯಾದ. ಆ ಚಾನೆಲ್ ನೋಡುಗರ ಸಂಖ್ಯೆ ಹೆಚ್ಚಾದಂತೆಲ್ಲಾ ಫೋನ್ ಮಾಡಿ ಸಂಭ್ರಮಿಸುತ್ತಿದ್ದ. “ಗುರುವೇ ಓದುಗರ ಸಂಖ್ಯೆ ಒಂದು ಲಕ್ಷ ಮೀರಿತು, ಒಂದೂವರೆ ಲಕ್ಷ ದಾಟಿತು” ಅಂತೆಲ್ಲಾ ಹೇಳಿ ಖುಷಿಪಡುತ್ತಿದ್ದ. ಎಷ್ಟು ಸಾಧ್ಯವೋ ಅಷ್ಟು ರೋಚಕ ಕತೆಗಳನ್ನು ಕಟ್ಟಿ ಕೊಡಲು ಪ್ರಯತ್ನಿಸುತ್ತಲೇ ಇದ್ದ.

ಒಂದಲ್ಲಾ ಎರಡಲ್ಲಾ ಮೂರೂವರೆ ದಶಕಗಳ ಕಾಲ ಈ ಪತ್ರಿಕೋದ್ಯಮವೆಂಬ ಮಾಯಾಂಗನೆಯ ಸಾಂಗತ್ಯವನ್ನು ಬಯಸಿದ ಪ್ರೀತಿಸಿದ ಆರಾಧಿಸಿದ. ಅಪರಾಧ ಸುದ್ದಿಗಳ ಕಲೆ ಸಿದ್ದಿಸಿಕೊಂಡವರು ಬೇಕಾದಷ್ಟು ಹಣ ಆಸ್ತಿ ಮಾಡಿಕೊಂಡರು. ಆದರೆ ಪ್ರವೀಣ್ ಬ್ಲಾಕ್ಮೇಲ್ ದಂದೆಗೆ ಇಳಿಯದೇ ಇದ್ದುದರಿಂದ ಏನೂ ಮಾಡಿಕೊಳ್ಳದೇ ತನ್ನದೇ ಆದ ಹುಚ್ಚುಗಳನ್ನು ಹೆಚ್ಚಿಸಿಕೊಂಡು ಬದುಕುತ್ತಿದ್ದ.

ತನ್ನ ಯುಟ್ಯೂಬ್ ಚಾನೆಲ್ ಮೂಲಕ ಸದಾ ಏನಾದರೊಂದು ಜ್ವಲಂತ ಕಥೆ ಕಟ್ಟಿ ಕೊಡುತ್ತಲೇ ಇದ್ದ ರಾ.ಪ್ರವೀಣ್ ಬದುಕಿನ ಕಥೆ ಇವತ್ತಿಗೆ ಮುಕ್ತಾಯವಾಯಿತು. ಶ್ವಾಸಕೋಶದ ಸೋಂಕಿಗೆ ಒಳಗಾಗಿ ನವೆಂಬರ್ 16 ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಪ್ರವೀಣ್ 12 ದಿನಗಳ ಕಾಲ ಸಾವು ಬದುಕಿನ ಜೊತೆ ಸೆಣೆಸಿ ಇಂದು ಮುಂಜಾನೆ ಸಾವಿಗೆ ಶರಣಾದ. ಚೈನಾ ವೈರಸ್ ಪ್ರವೀಣ್ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಕರೋನಾ ಸಮಯದಲ್ಲೇ ರಾ.ನ್ಯೂಜ್ ಗಾಗಿ ಜೀವದ ಹಂಗುತೊರೆದು ಓಡಾಡಿದವನಿಗೆ ಈಗ ಚೀನಾ ವೈರಸ್ಸು ಸೇಡು ತೀರಿಸಿಕೊಂಡಿತಾ ಗೊತ್ತಿಲ್ಲಾ. ಪ್ರವೀಣ್ ಅಂತೂ ಬದುಕಲಿಲ್ಲ.

ಏನೇ ಇರಲಿ. ಇಷ್ಟು ಬೇಗ ಹೋಗಬಾರದಿತ್ತು ಗೆಳೆಯಾ. ಇಷ್ಟೊಂದು ಆರೋಗ್ಯವನ್ನು ನಿರ್ಲಕ್ಷಿಸಬಾರದಿತ್ತು. ಸುದ್ದಿಗಳ ಹಿಂದೆ ಸದಾ ಬಿದ್ದ ನಿನ್ನ ಸಾವಿನ ಸುದ್ದಿಯನ್ನು ಓದಿದವರು ಬೆಚ್ಚಿ ಬೀಳುವಂತೆ ಮಾಡಬಾರದಿತ್ತು. ನಿನ್ನ ಕ್ರೈಂ ಲೋಕದ ಸುದ್ದಿಗಳ ಬಗ್ಗೆ ನನಗೆ ಅಸಮಾಧಾನವಿದ್ದರೂ ನಿನ್ನ ಗೆಳೆತನದ ಬಗ್ಗೆ, ಆತ್ಮೀಯತೆಯ ಬಗ್ಗೆ ಪ್ರೀತಿ ಇತ್ತು. ನಿನ್ನ ಅಕಾಲಿಕ ಅಗಲಿಕೆ ಅತ್ಯಂತ ಬೇಸರ ತರಿಸಿತು. ಎಲ್ಲರೂ ಒಂದಿಲ್ಲಾ ಒಂದು ದಿನ ಸಾವು ಬಂದಾಗ ಹೋಗಲೇಬೇಕು. ಆದರೆ ಪ್ರವೀಣ್ ನಂತಹ ಕ್ರಿಯಾಶೀಲ ವ್ಯಕ್ತಿ ಇನ್ನೂ ಹಲವಾರು ವರ್ಷ ಬದುಕಿರಬೇಕಿತ್ತು.

ಚಂಪಾರವರ ಪದ್ಯ ನೆನಪಾಗುತ್ತಿದೆ. “ಸತ್ತವರು ಎಲ್ಲಿಗೆ ಹೋಗುತ್ತಾರೆ. ಎಲ್ಲಿಯೂ ಹೋಗುವುದಿಲ್ಲ ಬದುಕಿದವರ ನೆನಪಿನಲ್ಲಿ ಜೀವಂತವಾಗಿರುತ್ತಾರೆ”

  • ಶಶಿಕಾಂತ ಯಡಹಳ್ಳಿ, ರಂಗಕರ್ಮಿ

Leave a Reply