ದೆಹಲಿ: ಸಂಸತ್ತಿನ ಅಧಿವೇಶನದಲ್ಲಿ ವಿಪಕ್ಷಗಳ ಸಂಸದರು ಮಂಗಳವಾರ ನಡೆಸಿದ ಗದ್ದಲ, ಅಶಿಸ್ತಿನ ವರ್ತನೆಗೆ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದರು. ಸದನದಲ್ಲಿ ವಿಪಕ್ಷಗಳ ಸಂಸದರ ವರ್ತನೆ ವಿಷಯ ಪ್ರಸ್ತಾಪಿಸಿದ ಅವರು, ಭಾವುಕರಾಗಿ ವರ್ತಿಸಿದರು.
ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಕೃಷಿ ಮಸೂದೆ ಚರ್ಚೆಗೆ ಆಗ್ರಹಿಸಿ ಮೇಜು ಹತ್ತಿ ಕಾಗದಪತ್ರಗಳನ್ನು ತೂರಿದರು. ಆಪ್ ಸದಸ್ಯ ಸಂಜಯ ಸಿಂಗ್ ಸೇರಿದಂತೆ ಹಲವರು ಇದೇ ವೇಳೆ ಮೇಜಿನ ಮೇಲೆ ಹತ್ತಿ ಕೂಗಾಟ ಗದ್ದಲ ನಡೆಸಿದ್ದರು. ನಿನ್ನೆ ಕೆಲ ಸದಸ್ಯರು ಸಭಾಪತಿಗಳು ತೆರಳಿದ ನಂತರ, ಮೇಜಿನ ಮೇಲೆ ಏರಿದ್ದರು.
ಈ ವಿಷಯವನ್ನು ಪ್ರಸ್ತಾಪಿಸಿದ ವೆಂಕಯ್ಯ ನಾಯ್ಡು, ಸದಸ್ಯರು ಗದ್ದಲ ನಡೆಸುವ ಸಮಯದಲ್ಲಿ ಅಧಿಕಾರಿಗಳು ಮತ್ತು ಸದನದ ವರದಿಗಾರರು ಆಸೀನರಾಗಿದ್ದರು. ಮತ್ತೊಬ್ಬ ಸಂಸದರು ಅಧ್ಯಕ್ಷರ ಮೇಲೆ ಅಧಿಕೃತ ಕಡತವನ್ನೇ ತೂರಿದರು. ಈ ಸ್ಥಳವನ್ನು ದೇವಾಲಯದ ಗರ್ಭಗುಡಿ ಎಂದು ಪರಿಗಣಿಸಲಾಗುತ್ತದೆ. ಕೆಲವರ ಈ ವರ್ತನೆಯಿಂದ ಸದನದ ಪಾವಿತ್ರ್ಯತೆ ನಾಶವಾಯಿತು. ವಿಪಕ್ಷಗಳ ಸಂಸದರ ಈ ವರ್ಥನೆ ಖಂಡಿಸಲು ನನ್ನ ಬಳಿ ಪದಗಳಿಲ್ಲ. ಕಳೆದ ದಿನ ನಿದ್ರೆಯಿಲ್ಲದ ರಾತ್ರಿ ಕಳೆದಿದ್ದೇನೆಂದು ಅವರು ಗೋಳಾಡಿದರು.
ಅನಂತರ ಕೆಲಕಾಲ ಮೌನಕ್ಕೆ ಜಾರಿದ ವೆಂಕಯ್ಯನಾಯ್ಡು, ಈ ಬಾರಿಯ ಅಧಿವೇಶನವನ್ನು ಇಂತಹ ಕೆಳಮಟ್ಟಕ್ಕೆ ಇಳಿಸಲು ಕಾರಣ, ಪ್ರಚೋದನೆಯನ್ನು ಕಂಡುಕೊಳ್ಳಯಲು ನಾನು ಹೆಣಗಾಡುತ್ತಿದ್ದೇನೆ ಎಂದರು.
ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಇಂತಹ ಕೃತ್ಯಗಳು ನಡೆದಿದ್ದು, ಸಭಾಪತಿಯಾಗಿ ಇದರ ಪರಿಣಾಮಗಳನ್ನು ಊಹಿಸಲು ನನಗೆ ಭಯವಾಗುತ್ತಿದೆ ಎಂದು ಅವರು ಹೇಳಿದರು.
ಕೃಷಿ ಕಾನೂನುಗಳ ಕುರಿತು ವಿಪಕ್ಷಗಳಿಗೆ ಆಕ್ಷೇಪಣೆಗಳಿದ್ದರೆ ಆ ಕುರಿತು ಸದನದಲ್ಲಿ ಚರ್ಚಿಸಬಹುದು, ಪ್ರತಿಭಟನೆ ನಡೆಸಬಹುದು ಅಥವಾ ಅದರ ವಿರುದ್ಧ ಮತ ಚಲಾಯಿಸಬಹುದು. ಆದರೆ, ಈ ಕುರಿತು ಅಂತಿಮವಾಗಿ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ಇದನ್ನು ಮಾಡಿ, ಇದನ್ನು ಮಾಡಬೇಡಿ ಎಂದು ನೀವು ಸರ್ಕಾರವನ್ನು ಒತ್ತಾಯಿಸುವಂತಿಲ್ಲ. ದಾಖಲೆಗಳೊಂದಿಗೆ ಚರ್ಚೆ ನಡೆಸಲು ಸದಸ್ಯರಿಗೆ ಸುವರ್ಣಾವಕಾಶ ಇತ್ತು. ಆದರೆ, ಸುಗಮವಾಗಿ ಕಲಾಪ ನಡೆಸಲು ಅನುವು ಮಾಡಿಕೊಡದಿರುವುದೇ ಅವರ ಏಕೈಕ ಉದ್ದೇಶವಾಗಿತ್ತು ಎಂದು ಆರೋಪಿಸಿದರು.
