ವಿ.ಶ್ರೀನಿವಾಸ ಪ್ರಸಾದ್ ಅವರ ಸ್ವಾಭಿಮಾನದ ನಡೆಗೆ ಎನ್.ಮಹೇಶರ ನಡೆ ಹೋಲಿಕೆಯೇ?

5 years ago

– ಪ್ರಜ್ವಲ್ ಶಶಿ ತಗಡೂರು

‘ಪ್ರಸಾದ ಜತೆ ಮಹೇಶ್ ಅಸ್ತ್ರ: ಕಮಲ ತಂತ್ರ’ ಎಂಬ ಆಂದೋಲನ ದೀನಪತ್ರಿಕೆಯ ವರದಿ ನೋಡಿದರೆ ಇದನ್ನು ಹೇಳಿ ಬರೆಯಿಸಿದಂತಿದೆ! ಇಷ್ಟಕ್ಕೆಲ್ಲ ಕಾರಣ ಬಿಜೆಪಿ ಸೇರಿರುವ ಎನ್.ಮಹೇಶ್ ರವರು Unconditional (ಇದು ಮಾಧ್ಯಮಗಳ ಮುಂದಿನ ತೋರಿಕೆಯ ಹೇಳಿಕೆಯಷ್ಟೇ) ಎಂದು ಹೇಳಿದ್ದಾರೆ. ಆದರೆ ಮಂತ್ರಿಗಿರಿಗಾಗಿ ತೆರೆಯ ಹಿಂದೆ ಯಾವ ಯಾವ ರೀತಿಯ ಕಸರತ್ತುಗಳನ್ನು ಮಾಡಿದ್ದಾರೆ, ಮಾಡುತ್ತಲಿದ್ದಾರೆ ಎನ್ನುವುದು ಗೊತ್ತಿಲ್ಲದ ವಿಚಾರವೇನಲ್ಲ; ಅದರ ಭಾಗವೇ ಈ ಪತ್ರಿಕಾ ವರದಿ..

ವಿ.ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಿನ್ನೆಲೆ ಮತ್ತು ಕಾರಣ, ಎನ್. ಮಹೇಶ್ ಅವರು ಬಿಎಸ್ಪಿ ತೊರೆದು ಬಿಜೆಪಿ ಸೇರಿರುವ ಹಿನ್ನೆಲೆ ಮತ್ತು ಕಾರಣ ಏನೆಂಬುದು ಜನತೆಗೆ ಜಗಜ್ಜಾಹೀರಾಗಿರುವ ಸಂಗತಿ! ಆದರೆ ಪ್ರಸಾದ್ ಅವರ ಸ್ವಾಭಿಮಾನದ ನಡೆಗೆ ಎನ್.ಮಹೇಶ್ ಅವರ ನಡೆಯನ್ನು ಹೋಲಿಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಪ್ರಸಾದ್ ಅವರ ರಾಜಕೀಯ ಹಿನ್ನೆಲೆಗೂ ಎನ್.ಮಹೇಶರ ರಾಜಕೀಯ ಹಿನ್ನೆಲೆಗೂ ಅಜಗಜಾಂತರ ವ್ಯತ್ಯಾಸವಿದೆ!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಸೌಜನ್ಯಕ್ಕೂ ಮಾತನಾಡದೆ ಏಕಾಏಕಿ ಸಂಪುಟದಿಂದ ಕೈ ಬಿಟ್ಟ ಕಾರಣ ಪ್ರಸಾದ್ ಅವರು ಕೆರಳಿದರು. ಪರಿಣಾಮ ತಾವು ಶಾಸಕರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ‘ಸ್ವಾಭಿಮಾನ ಸಮಾವೇಶ’ಗಳನ್ನು ಮಾಡಿ ಜನರನ್ನು ಸಂಘಟಿಸಿ ತನಗೆ ಅವಮಾನಿಸಿದ ಸಿದ್ದರಾಮಯ್ಯ ಮತ್ತು ತಂಡಕ್ಕೆ ಬುದ್ದಿ ಕಲಿಸುವ ಕಾರಣಕ್ಕಾಗಿ ಜನಾಭಿಪ್ರಾಯದಂತೆ ಬಿಜೆಪಿ ಸೇರಿ ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ನಂತರ ಮುಂದಿನ ದಿನಗಳಲ್ಲಿ ತನ್ನ ಸೋಲಿಸಿದ ಎಲ್ಲರನ್ನೂ ಸೋಲಿಸಿ ತಾವು ಕೂಡ ಗೆದ್ದು ಚಾಮರಾಜ ನಗರದ ಸಂಸದರಾಗಿದ್ದಾರೆ!

ಆದರೆ ಎನ್.ಮಹೇಶ್ ಅವರಿಗೆ ಯಾರು ಅವಮಾನಿಸಿದ್ದಾರೆ? ಯಾಕೆ ಅವಮಾನಿಸಿದ್ದಾರೆ? ಒಂದು ವೇಳೆ ಅವಮಾನಿಸಿದ್ದರೆ ಉಚ್ಚಾಟಿಸಿ ಅಮಾನಿಸಿರುವ ಬಿಎಸ್ಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಅವಮಾನಿಸಿದವರ ವಿರುದ್ಧ ತೊಡೆತಟ್ಟಬಹುದಲ್ಲವೇ? (ಇಲ್ಲಿ ಸೋಲು- ಗೆಲುವು ಪಕ್ಷ ಮುಖ್ಯವಲ್ಲ; ಸ್ವಾಭಿಮಾನವಷ್ಟೇ ಮುಖ್ಯ) ಹೀಗಿರುವಾಗ ಅದೇಗೆ ಪ್ರಸಾದ್ ಸಾಹೇಬರಿಗೆ ಎನ್.ಮಹೇಶ್ ಅವರನ್ನು ಹೋಲಿಕೆ ಮಾಡುವಿರಿ? ಇದೇ ನಂಜನಗೂಡು ಉಪಚುನಾವಣೆಯಲ್ಲಿ ಎನ್.ಮಹೇಶ್ ಅವರು ಯಾರಿಗೆ ಬೆಂಬಲ ನೀಡಿದ್ದರು? ಯಾಕೆ? ಎನ್ನುವುದು ಗೊತ್ತಿರುವ ಸಂಗತಿ!

ವಿ.ಶ್ರೀನಿವಾಸ ಪ್ರಸಾದ್ ಅವರು ಶೋಷಿತ ಸಮುದಾಯಗಳ ಶಕ್ತಿ, ಹಳೇ ಮೈಸೂರು ಭಾಗದಲ್ಲಿನ ಅವರ ಸಂಘಟನೆ ಹೋರಾಟದ ಕುರಿತು ಬಹುದೊಡ್ಡ ಇತಿಹಾಸವೇ ಇದೆ. ಪ್ರಸಾದರು ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ಪಕ್ಷಕ್ಕೆ ಹೋಗಿದ್ದಾರೆ ಆ ಪಕ್ಕಗಳೆಲ್ಲ ಗೆದ್ದಿವೆ. ಇದು ಪ್ರಸಾದರ ವರ್ಚಸ್ಸು ಮತ್ತು ತಾಕತ್ತು; ಅಂದರೆ ಪ್ರಸಾದ್ ಅವರು ಪಕ್ಷಾತೀತವಾದ ಮತ್ತು ಜಾತ್ಯತೀತವಾದ ವ್ಯಕ್ತಿ! ಬೇರೆ ಪಕ್ಷಗಳಲ್ಲಿದ್ದರೂ ಪ್ರಸಾದ್ ಅವರು ಸದಾ ಶೋಷಿತರ ಪರವಾಗಿ ಎದೆಯೊಡ್ಡಿ ನಿಲ್ಲುತ್ತಾರೆ. ಆದರೆ ಎನ್.ಮಹೇಶ್ ಅವರು ಶೋಷಿತ ಅಂದರೆ ಬಹುಜನ ಸಮಾಜ ಪಕ್ಷದಲ್ಲಿದ್ದು ಅಧಿಕಾರ ಪಡೆದು ಈಗ ಯಾರ ಪರವಾಗಿ ನಿಂತಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇನ್ನೊಂದು ಮಾತು ನೆನಪಿರಲಿ, ವಿ.ಶ್ರೀನಿವಾಸ ಪ್ರಸಾದ್ ಅವರು ಬೇರೆ ಪಕ್ಷದಲ್ಲಿರುವ ಯಾವ ದಲಿತ ನಾಯಕನನ್ನು ಛೇಡಿಸಿಲ್ಲ, ಅವರ ವಿರುದ್ಧ ಅಸೂಯೆ ಪಟ್ಟಿಲ್ಲ; ತನ್ನ ವಿರುದ್ಧ ಮಸಲತ್ತು ಮಾಡಿದಾಗ ಮಾತ್ರ ನೇರವಾಗಿ ಕೌಂಟರ್ ಮಾಡಿದ್ದಾರೆ ಅಷ್ಟೇ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳ್ಳಲು ವಿ.ಶ್ರೀನಿವಾಸ ಪ್ರಸಾದ್ ಅವರೇ ಕಾರಣ ಎನ್ನುವುದು ಅಕ್ಷರಶಃ ಸತ್ಯ! ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಆಗಿದ್ದ ದಲಿತ (ಬಲಗೈ) ಸಮುದಾಯ ಬಿಜೆಪಿ ಪಕ್ಷಕ್ಕೆ ಮತ ನೀಡಿರುವುದು ವಿ.ಶ್ರೀನಿವಾಸ ಪ್ರಸಾದ್ ಎನ್ನುವ ಏಕೈಕ ಕಾರಣಕ್ಕಾಗಿಯೇ. ಇದು ಬಿಜೆಪಿ ಪಕ್ಷದ ವರಿಷ್ಠರಿಗೆ ಗೊತ್ತಿಲ್ಲದಿರುವ ಸಂಗತಿಯೇನಲ್ಲ! ಆದರೆ ಈಗ ಎನ್.ಮಹೇಶ್ ಅವರ ಕಾರಣಕ್ಕಾಗಿ ದಲಿತ ಮತಗಳು ಬಿಜೆಪಿಗೆ ಮತ್ತಷ್ಟು ಬಲಗೊಳ್ಳುತ್ತವೆ ಎನ್ನುವುದು ಹಾಸ್ಯಾಸ್ಪದ. ಈಗಿನ ವಾತಾವರಣ ನೋಡುತ್ತಿದ್ದರೆ ಬಿಜೆಪಿ ಪಕ್ಷಕ್ಕೆ ವಿ.ಶ್ರೀನಿವಾಸ ಪ್ರಸಾದರ ಕಾರಣಕ್ಕಾಗಿ ಒಗ್ಗೂಡಿದ ದಲಿತ ಮತಗಳು ಎನ್.ಮಹೇಶರ ಕಾರಣಕ್ಕಾಗಿ ಛಿದ್ರವಾದರೂ ಆಗಬಹುದು!

ಏಕೆಂದರೆ ಎನ್.ಮಹೇಶ್ ಅವರು ಬಿಎಸ್ಪಿಯಲ್ಲಿದ್ದಾಗ ಬೇರೆ ಪಕ್ಷದಲ್ಲಿರುವ ನಮ್ಮ ನಾಯಕರನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ ಮತ್ತು ಆ ನಾಯಕರ ಕುರಿತು ಯುವಕರ ತಲೆಗೆ ದ್ವೇಷ ತುಂಬಿದ್ದಾರೆ! ಇವರನ್ನು ನಂಬಿದ್ದರಿಂದ ಹಲವಾರು ಜನರು ನಿಷ್ಠೂರರಾಗಿದ್ದಾರೆ. ಇದರ ಪರಿಣಾಮ ದಲಿತ ಸಂಘಟನೆಗಳು, ಮುಖಂಡರು ಎನ್.ಮಹೇಶ್ ಅವರು ದಲಿತ ಸಮುದಾಯಕ್ಕೆ ದ್ರೋಹ ಮಾಡಿದ ಜನಾಂಗ ದ್ರೋಹಿ ಎಂದು ಎನ್.ಮಹೇಶರ ವಿರುದ್ಧ ಈಗಾಗಲೇ ಚಳುವಳಿ ಆರಂಭಿಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟತ್ತದೋ ಗೊತ್ತಿಲ್ಲ; ಎನ್.ಮಹೇಶ್ ಅವರು ಯಾವುದೇ ಪಕ್ಷದಲ್ಲಾದರೂ ಇರಲಿ ಅಥವಾ ಹೋಗಲಿ, ಆದರೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ನಡೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಶೋಷಿತ ಸಮುದಾಯಗಳು ಆ ಕಾಲಘಟ್ಟಕ್ಕೆ ಪರಿವರ್ತನೆ ಆಗಬಹುದು. ಆದರೆ ಪ್ರಸಾದ್ ಸಾಹೇಬರ ವಿಚಾರದಲ್ಲಿ ಎಂದಿಗೂ ಬದಲಾಗಿಲ್ಲ ಬಹುಷಃ ಬದಲಾಗುವುದೂ ಇಲ್ಲ. ಏಕೆಂದರೆ “ವಿ.ಶ್ರೀನಿವಾಸ ಪ್ರಸಾದ್ ಅವರು ಶೋಷಿತರ ತಲೆಯಲ್ಲಿಲ್ಲ; ಶೋಷಿತ ಸಮುದಾಯದ ಜನರ ಹೃದಯದೊಳಗೆ ಸದಾ ನೆಲೆಸಿದ್ದಾರೆ”.

Leave a Reply