ಮಲೆನಾಡಿನ ಕುರಿತ ನೈಜ ಕಾಳಜಿಯುಳ್ಳ ಚಿತ್ರ ಜಲಪಾತ

2 years ago

#Jalapatha #real #caring #film #malenadu #entertainment #sandalwood #rameshbegur

ಗೆಳೆಯ ರಮೇಶ್ ಬೇಗಾರ್ ಕಾಲೇಜು ದಿನಗಳಿಂದಲೂ ಕ್ರಿಯಾಶೀಲರು. ಸಾಹಿತ್ಯ, ನಾಟಕ, ಯಕ್ಷಗಾನ ಎಲ್ಲಾ ಕ್ಷೇತ್ರಗಳತ್ತಲೂ ಆಸಕ್ತರು. ಆ ಕಾಲದಲ್ಲಿಯೇ ಗಿರೀಶ್ ಕಾಸರವಳ್ಳಿ, ಶಂಕರ್ ನಾಗ್ ಅಂತಹವರೊಂದಿಗೆ ಒಡನಾಟ. ಕಾಳಿಂಗ ನಾವುಡರು ಬಹು ಆಪ್ತರು. ಆಗೆಲ್ಲಾ ನಾವು ನಮ್ಮ ಓದು ಮುಂದಿನ ಭವಿಷ್ಯ ಇಷ್ಟೇ ಯೋಚನೆ ಮಾಡುತ್ತಿದ್ದವರು. ರಮೇಶ್ ಆಗಲೇ ಹಲವು ಕನಸುಗಳನ್ನು ಅರಳಿಸಿ ನಮಗಿಂತ ಗಾವುದ ದೂರ ಸಾಗಿದ್ದರು.

ನಾವೆಲ್ಲಾ ಬದುಕಿನ ಹಾದಿ ಹಿಡಿದು ಬೇರೆ ಬೇರೆ ಕಡೆ ಹೊರಟರೆ ರಮೇಶ್ ಶೃಂಗೇರಿಯಲ್ಲಿಯೇ ಗಟ್ಟಿಯಾಗಿ ಉಳಿದರು. ನೆಲದ ಮೂಲಕವೇ ದಾರಿ ಆಕಾಶಕ್ಕೆ ಎಂದು ಶೃಂಗೇರಿಯನ್ನೇ ಸಾಂಸ್ಕೃತಿಕ ಕೇಂದ್ರವಾಗಿ ಮಾಡಿದರು. ಸಿನಿಮಾ ರಂಗದಲ್ಲಿ ಆಗಲೇ ಗಟ್ಟಿ ಹೆಜ್ಜೆಗಳನ್ನು ಊರಿದ್ದ ಅವರಿಗೆ ಆಗಲೇ ಪೂರ್ಣಪ್ರಮಾಣದಲ್ಲಿ ಚಿತ್ರರಂಗಕ್ಕೆ ಬರುವಂತೆ ಅವರಿಗೆ ಸಾಕಷ್ಟು ಸಲ ಹೇಳಿದ್ದೆ. ಚಲನಚಿತ್ರದ ಪರಿಭಾಷೆಯಲ್ಲೇ ಹೇಳುವುದಾದರೆ ‘ತೀರಾ ತಡವಾಗಿ’ ಅಂತೂ ‘ವೈಶಂಪಾಯನ ತೀರ’ದಿಂದ ಎಂಟ್ರಿ ಕೊಟ್ಟರು.

ಈಗ ಅವರ ನಿರ್ದೇಶನ ಎರಡನೆಯ ಚಿತ್ರ ‘ಜಲಪಾತ’ ತೆರೆ ಕಂಡಿದೆ. ಇದು ಅವರೇ ಕರೆದುಕೊಂಡ ಹಾಗೆ ’ಭೂರಮೆಯ ಸ್ವಗತ’ದ ಕಥೆ. ಮಲೆನಾಡಿನ ಪರಿವರ್ತನೆಗಳನ್ನು ಅವರು ಬಹು ಹತ್ತಿರದಿಂದ ಬಲ್ಲವರು. ನಾಗರೀಕತೆಯ ಅಬ್ಬರಕ್ಕೆ ತತ್ತರಿಸುತ್ತಿರುವ ಮಲೆನಾಡಿನಲ್ಲಿ ಪ್ರಕೃತಿ ತನ್ನ ಸಹಜ ರಮಣೀಯತೆಯನ್ನು ಉಳಿಸಿಕೊಳ್ಳಲು ಮಾನವ ಅಡ್ಡವಾಗುತ್ತಿದ್ದಾನೆ. ದುರಾಸೆಯಿಂದ ಎಲ್ಲರ ಬದುಕನ್ನೂ ಅಸಹನೀಯವಾಗಿಸುತ್ತಿದ್ದಾನೆ. ಈ ಕುರಿತ ನೈಜ ಕಾಳಜಿಯನ್ನು ಚಿತ್ರದೊಳಗೆ ತರಲು ರಮೇಶ್ ಪ್ರಯತ್ನಿಸಿದ್ದಾರೆ. ಅವರಿಗೆ ಹೇಳಬೇಕಾದ ವಿಷಯಗಳು ಸಾಕಷ್ಟಿವೆ.

ಜೊತೆಗೆ ಅವರ ಅನುಭವದ ಲೋಕವೂ ವಿಸ್ತಾರವಾಗಿದೆ. ಕಂಡ ಆತಂಕದ ನೆಲೆಗಳೂ ಅಗಾಧವಾಗಿದೆ ಹೀಗಾಗಿ ಇದು ನೇರ ನಿರೂಪಣೆಯ ಕಥೆಯಲ್ಲಿ ನಿಲುಕುವುದು ಕಷ್ಟ. ರಮೇಶ್ ಅದಕ್ಕಾಗಿ ಸಂಕಥನದ ಮಾದರಿಯ ಕಥನ ಕ್ರಮವನ್ನು ಬಳಸಿದ್ದಾರೆ. ಪಾತ್ರಗಳು ತಾತ್ವಿಕತೆಯನ್ನು ಬಿಂಬಿಸುತ್ತಲೇ ಕಥನ ಕ್ರಮವನ್ನು ಕಟ್ಟಿ ಕೊಡುತ್ತವೆ. ಹೀಗಾಗಿ ಅವರಿಗೆ ಲೋಕಾಂತ ಮತ್ತು ಏಕಾಂತ ಎರಡನ್ನೂ ಒಟ್ಟಿಗೆ ಸಾಧಿಸುವುದು ಸಾಧ್ಯವಾಗಿದೆ.

ಮಲೆನಾಡು ಇಲ್ಲಿ ಕೇವಲ ವಸ್ತುವೂ ಹಿನ್ನೆಲೆಯೂ ಆಗಿಲ್ಲ. ಇಡೀ ಚಿತ್ರದ ಜೀವಾಳವಾಗಿದೆ. ಅಷ್ಟೇ ಅಲ್ಲ ಮೂಲ ತಾತ್ವಿಕತೆ ಈ ಮಿತಿಯನ್ನು ದಾಟಿ ಜಾಗತಿಕತೆಯ ಕಡೆಗೆ ನಡೆಯುತ್ತದೆ. ಹೀಗಾದಾಗಲೂ ಚಿತ್ರ ತನ್ನ ಗಟ್ಟಿತನವನ್ನು ಉಳಿಸಿಕೊಂಡಿದೆ.

ಅಕೇಷಿಯಾ ಬಗ್ಗೆ ಮಾತನಾಡುವ ಚಿತ್ರ ಪ್ಲಾಸ್ಟಿಕ್ ಬಳಕೆ ಬಗ್ಗೆ ಎಚ್ಚರಿಸುತ್ತದೆ, ಕಾಡಿನ ಅಗತ್ಯವನ್ನು ಹೇಳುತ್ತಾ ಪಶು ಪಕ್ಷಿಗಳಿಂದ ನಾವು ಮಾಡಿಕೊಂಡಿರುವ ಅಂತರದ ಬಗ್ಗೆ ಎಚ್ಚರಿಸುತ್ತದೆ. ಶಿಥಿಲವಾಗುತ್ತಿರುವ ಸಂಬಂಧಗಳ ಬಗ್ಗೆ ಹೇಳುತ್ತಾ ಮಲೆನಾಡಿನ ಬದುಕಿನ ನಿನ್ನೆ ಇಂದುಗಳನ್ನು ತುಲನೆ ಮಾಡುತ್ತದೆ. ಮಹತ್ವದ ಸಂಗತಿ ಎಂದರೆ ಚಿತ್ರಕ್ಕೆ ಕಲಾವಿದರು ಜೀವ ತುಂಬಿದ್ದಾರೆ. ತುಂಟತನದೊಳಗೆ ಗಾಂಭೀರ್ಯತೆ ಎಳೆಯನ್ನು ತಂದು ಚಿಂತನೆಗೆ ಹಚ್ಚುವ ಪೂರ್ವಿಯ ಪಾತ್ರದಲ್ಲಿ ನಾಗಶ್ರೀ ಮಿಂಚಿದ್ದಾರೆ. ಸೂಕ್ಷ್ಮಗಳನ್ನು ಅಭಿವ್ಯಕ್ತಿಸುವಲ್ಲಿ ಅವರಿಗಿರುವ ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಂಡರೆ ಕನ್ನಡ ಚಿತ್ರರಂಗಕ್ಕೆ ಗಟ್ಟಿಯಾದ ಕಲಾವಿದೆಯೊಬ್ಬಳು ಸಿಕ್ಕುತ್ತಾಳೆ.

ರಜನೀಶ್ ನಾಯಕನ ಪಾತ್ರವನ್ನು ಜೀವಿಸಿದ್ದಾರೆ. ಬದಲಾಗುವ ಭಾವಗಳ ಬಿಂಬಿಸುವಲ್ಲಿ ಅವರಿಗಿರುವ ಶಕ್ತಿ ಗಮನ ಸೆಳೆಯುತ್ತದೆ. ರವಿ ಕುಮಾರ್, ರೇಖಾ ಪ್ರೇಮ ಕುಮಾರ್, ಅಭಿಷೇಕ್ ಹೆಬ್ಬಾರ್ ತಮ್ಮ ಪಾತ್ರಗಳ ಮಿತಿಯಲ್ಲಿಯೇ ಮಿಂಚಿದ್ದಾರೆ. ಚಿತ್ರದ ಇನ್ನೊಂದು ಮಹತ್ವದ ಅಂಶ ಸಂಗೀತ, ಗಾಯಕಿಯಾಗಿ ಹೆಸರು ಮಾಡಿರುವ ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶಕಿಯಾಗಿ ಮೊದಲ ಚಿತ್ರದಲ್ಲಿಯೇ ತಮ್ಮ ಶಕ್ತಿಯನ್ನು ತೋರಿದ್ದಾರೆ. ಜೊತೆಗೆ ಛಾಯಾಗ್ರಹಣ ಮಲೆನಾಡನ್ನು ಕಣ್ಮುಂದೆ ತಂದು ನಿಲ್ಲಿಸಿದೆ. ಇಡೀ ಚಿತ್ರವನ್ನು ಬೆಸಿದಿರುವ ಅಪರ್ಣ ಅವರ ಧ್ವನಿ ಚಿತ್ರದ ಇನ್ನೊಂದು ಹೆಗ್ಗಳಿಕೆ.

‘ಜಲಪಾತ’ ಮಲೆನಾಡಿನ ಸ್ವಗತವೂ ಹೌದು, ಆತಂಕವೂ ಹೌದು. ಯಾರದೋ ಬಲೆಗೆ ಇನ್ಯಾರೋ ಬಲಿಯಾಗಿರುವ ಜಾಗತೀಕರಣದ ವಿಷಘಟ್ಟವೂ ಹೌದು. ಈ ಚಿತ್ರವನ್ನು ಬೆಂಬಲಿಸುವುದು ಅದರಿಂದ ಕಲಿತ ಪಾಠವನ್ನು ಅಳವಡಿಸಿಕೊಳ್ಳುವುದು ನಮ್ಮ ಮುಂದಿನ ಪೀಳಿಗೆಗೆ ಇರುವುದೊಂದೆ ಭೂಮಿಯನ್ನು ಉಳಿಸುವ ಕ್ರಮವೂ ಹೌದು. ಇಂತಹ ಸಾಹಸಕ್ಕೆ ಬೆಂಬಲವಾಗಿ ನಿಂತ ನಿರ್ಮಾಪಕ ರವೀಂದ್ರ ತುಂಬರಮನೆ ಪ್ರಶಂಸೆಗೆ ಅರ್ಹರು.

ಇವತ್ತು ಚಲನಚಿತ್ರ ಪರಿಭಾಷೆ ಮತ್ತು ಸಾಧ್ಯತೆ ಎರಡೂ ಬದಲಾಗುತ್ತಿದೆ. ಹೊಸ ನುಡಿಗಟ್ಟನ್ನು ರಮೇಶ್ ಕಲಿತರೆ ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ. ಹೀಗಾಗಲಿ ಎಂದು ನಾನು ಹೃದಯಪೂರ್ವಕವಾಗಿ ಹಾರೈಸುತ್ತೇನೆ.

  • ಎನ್.ಎಸ್.ಶ್ರೀಧರ ಮೂರ್ತಿ, ನಿರ್ದೇಶಕ, ಮಾಧ್ಯಮ ಭಾರತಿ, ಭಾರತೀಯ ವಿದ್ಯಾ ಭವನ

Leave a Reply