ಮನೆಯಂಗಳದ ಮಾತು ಮನದಂಗಳದ ಕಥೆ
ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಮಾನಗಳು ಅಸ್ತಿತ್ವವಾದಿ ಆಧುನಿಕ ಸಂವೇದನೆಯ ಕಾಲಘಟ್ಟಗಳು. ಅರ್ಥ-ಅನರ್ಥಗಳ ನಡುವಿನ ಅರ್ಥಾಂತರಗಳ, ಸಂಕೀರ್ಣವಲ್ಲದ ಸೂಕ್ಷ್ಮ, ಅತಿ ಸೂಕ್ಷ್ಮ ಸಾಹಿತ್ಯ ಅಸಂಗತಗಳಾಚೆ ತನ್ನ ನೆಲೆ ಮತ್ತು ಬೆಲೆಯ ಕಂಡುಕೊಂಡದ್ದು ಈ ಶತಮಾನಗಳು ಕಂಡ ವಿಸ್ಮಯಗಳಲ್ಲೊಂದು.
ಆಧುನಿಕ ಸಾಹಿತ್ಯ ಮಾನವ ಕೇಂದ್ರೀಕೃತವಾದರು ದೇಶಕಾಲಾದಿಗಳನ್ನು ಮೀರಿ ನಿಂತು ತನ್ನ ಸರ್ವವ್ಯಾಪಿತ್ವದಿಂದಾಗಿ ಓದುಗರ ಸಂವೇದನೆ ಮತ್ತು ಪ್ರಜ್ಞೆಗಳನ್ನು ಬಡಿದೆಬ್ಬಿಸಿ ಹೊಸತೊಂದು ಸಾಹಿತ್ಯ ಸಂಸ್ಕೃತಿಗೆ ನಾಂದಿ ಹಾಡಿತು. ಸುಸಂಗತದಲ್ಲಿ ಇದೇ ಜ್ಞಾನದಾಯಕವಾಗಿ, ಸತ್ಯಾನ್ವೇಷಣೆಯ ಮಾರ್ಗವಾಗಿ ಹೊಸಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು. ಕಾಲ ಮತ್ತು ಸಂದರ್ಭಗಳು ತಂದೊಡ್ಡಿದ ಒತ್ತಾಯಗಳ ಹೊರತಾಗಿಯೂ ವಿವೇಚನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದದ್ದು ವಿಶೇಷ.
ಇದರದೇ ಭಾಗವಾದ ಕಥಾ ಸಾಹಿತ್ಯ ಮೌಖಿಖಾಮೌಖಿಕ ನೆಲೆಗಳನ್ನು ದಾಟಿ ಪ್ರಜ್ಞಾವಾಹಿಯಂತೆ ಪಸರಿಸಿ ಜಾಗತಿಕವಾಗಿ ತನ್ನ ಬೇರುಗಳನ್ನು ಆಳವಾಗಿ ಊರಿ ನೆಲೆನಿಂತದ್ದು ಈಗ ಇತಿಹಾಸ. ಈ ಕಾಲಘಟ್ಟದ ಅಸಂಗತತೆ, ಅಸಹಾಯಕತೆ, ಸೂತ್ರತಪ್ಪಿದ ಬದುಕು, ಅನಾಥಪ್ರಜ್ಞೆ, ಅಪರಾಧ ಪ್ರಜ್ಞೆ, ಸಂಬಂಧಗಳ ಸಂಕೀರ್ಣತೆ, ಅಮಾನುಷತೆ, ಧರ್ಮಾಂಧತೆ, ಅಸಹಿಷ್ಣುತೆ, ಫ್ಯೂಡಲಿಸಂ, ರಾಜಕೀಯ ವ್ಯವಸ್ಥೆ ಮತ್ತು ಅರಾಜಕತೆ ಹೀಗೆ ಹತ್ತು ಹಲವು ಸಂಕೀರ್ಣತೆಗಳ ಆಖ್ಯಾನದ ವ್ಯಾಖ್ಯಾನವಾಗಿ ಆಧುನಿಕ ಕಥಾ ಸಾಹಿತ್ಯ ಕಾಣಸಿಗುತ್ತದೆ.
ನನ್ನ ಭಾವಕೋಶಕ್ಕೆ ನಿಲುಕಿದಂತೆ ಮನುಷ್ಯನ ಮೂಲ ಪ್ರವೃತ್ತಿಗಳನ್ನು(Basic Instinct) ಒಳಗೊಂಡಂತೆ ಕೇಳರಿಯದಂಥ(unheard-of)ಅಸ್ತಿತ್ವವಾದಿ ನೆಲೆಯ ರೂಪಕನಿಷ್ಠ, ಅನ್ಯೋಕ್ತಿವಿಲಾಸ, ಭ್ರಾಮಕ ಕಲ್ಪನೆ, ಇವೇ ಮೊದಲಾದ ವ್ಯಂಜನಗಳನ್ನು ಕಥಾ ಖಾದ್ಯಗಳಂತೆ ಉಣಬಡಿಸುತ್ತಿರುವ ಎಲ್ಲ ಬರವಣಿಗೆಯ ಬಾಣಸಿಗರಿಗೆ ನನ್ನ ಅಭಿವಂದನೆ ಹೇಳದೆ ಮುಂದುವರಿಯಲಾರೆ.
ಕನ್ನಡದ ಕಥಾ ಸಾಹಿತ್ಯ ಜಾಗತಿಕವಾಗಿ ಅತ್ಯಂತ ಸಮೃದ್ಧವಾದದ್ದು. ಇಲ್ಲಿಯ ಕಥೆಗಳು ನೆಲೆದ ಮಣ್ಣಿನೊಂದಿಗೆ ಮೈದಳೆದು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ತಾತ್ವಿಕವಾಗಿ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಸಾಗಿ ಬಂದಿದೆ. ಅಲ್ಲದೆ ಅಸಮಾನತೆ, ಅಧಿಪತ್ಯಗಳಿಗೆ ಸವಾಲೊಡ್ಡುವ ಚಳುವಳಿಯಾಗಿಯೂ ಕನ್ನಡ ಕಥಾ ಸಾಹಿತ್ಯ ಮಹತ್ವ ಪಡೆದುಕೊಂಡಿದೆ.
“Inside each of us is a natural-born storyteller, waiting to be released.” ಅನ್ನುವ ಮಾತಿದೆ. ಜನಪ್ರಿಯತೆಯಲ್ಲಿ ಕಾವ್ಯದ ನಂತರದ ಸ್ಥಾನವನ್ನು ಕಥಾ ಸಾಹಿತ್ಯ ಗಳಿಸಲು ಕನ್ನಡದ ಕಥೆಗಾರರ ಕೊಡುಗೆ ಅಗಣಿತವಾದುದು. ಅಸಾಮಾನ್ಯವಾದುದು. ಚಾರಿತ್ರಿಕವಾಗಿ ಕನ್ನಡದ ನವೋದಯ, ಪ್ರಗತಿಶೀಲ, ಬಂಡಾಯ, ದಲಿತ, ನವ್ಯ ಮತ್ತು ನವ್ಯೋತ್ತರ ಕಥೆಗಾರರು ಆಯಾ ಕಾಲಘಟ್ಟದ ಸಾಕ್ಷಿಪ್ರಜ್ಞೆಗಳಂತೆ ಕೆಲಸ ಮಾಡಿದ್ದು ಸತ್ಯಾತಿಸತ್ಯ.
ಸಾಹಿತ್ಯವನ್ನು ಸಾಹಿತ್ಯವಾಗಿಯೇ ಓದುವ ಪ್ರಕ್ರಿಯೆಯಾಗಿ ಸಾಗಿ, ಸಾಮಾಜಿಕ ಅಧ್ಯಯನವನ್ನು ದಾಟಿ, ಸಾಮಾಜಿಕ ಸಂದರ್ಭ-ರಾಜಕೀಯ ಸಿದ್ಧಾಂತ ಸಾಹಿತ್ಯಗಳ ಸಂಬಂಧವನ್ನು ವಿಶ್ಲೇಷಿಸುತ್ತ ಸಾಗುವಾಗ ಕನ್ನಡದ ಅನೇಕ ಕಥೆಗಾರರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ಕೆಲ ಹೆಸರುಗಳನ್ನು ಇಲ್ಲಿ ಸಂದರ್ಭಾನುಸಾರ ಹೇಳುವುದಾದರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಆರ್.ಕೃಷ್ಣಶಾಸ್ತ್ರಿ, ಆನಂದ, ಕುವೆಂಪು, ಅಶ್ವತ್ಥ, ಚದುರಂಗ, ಕಟ್ಟೀಮನಿ, ತ.ರಾ.ಸು., ನಿರಂಜನ, ರಾಮಚಂದ್ರ ಶರ್ಮ, ಯಶವಂತ ಚಿತ್ತಾಲ, ಎ.ಕೆ.ರಾಮಾನುಜನ್, ಶಾಂತಿನಾಥ ದೇಸಾಯಿ, ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಶ್ರೀಕೃಷ್ಣ ಆಲನಹಳ್ಳಿ, ದೇವನೂರ ಮಹಾದೇವ, ಎಸ್. ದಿವಾಕರ್, ಅಮರೇಶ ನುಗಡೋಣಿ ಹೀಗೆ ಹಲವರ ಕಥೆಗಳು ನನ್ನ ಓದನ್ನು ವಿಸ್ತರಿಸಿವೆ. ನನ್ನನ್ನು ರೂಪಿಸಿವೆ.
ಕಥೆಗಳು ಸಣ್ಣದಾದ ಕಾಲಕ್ಕೆ ವ್ಯಥೆಗಳು ದೊಡ್ಢವುಗಳಾಗಿ ಕಾಡುತ್ತಿರುವ ದುರಿತ ಕಾಲದಲ್ಲಿ ಮಿನಿ ಕಥೆಗಳು, ಮೈಕ್ರೋ ಕಥೆಗಳು, ನ್ಯಾನೋ ಕಥೆಗಳಾಗಿ ನಾನಾ ರೂಪ ನಾನಾ ವೇಷ ಧರಿಸಿ ಹೊರಬರುತ್ತಿವೆ. ಸಣ್ಣ ಕಥೆಗಳು ಲಂಗತೊಟ್ಟ ದೊರೆಸಾನಿ ಎಂಬುದು ನಿಜವೆ. ಹಾಗೆಯೆ ಓದುವ ಸಂಸ್ಕೃತಿಗೆ ಧಕ್ಕೆ ಬಂದೊದಗಿದ ಕಾಲಕ್ಕೆ ಸವಾಲೆಸೆದು ರೂಪಾಂತರವಾದ (Metamorphosis) ಕಥಾ ಸಾಹಿತ್ಯದ ಮರು ಓದು, ಚರ್ಚೆಯ ಅಗತ್ಯಗಳನ್ನು ಮನಗಾಣಬೇಕಿದೆ.
ಕನ್ನಡ ಕಥೆಗಳು ಪ್ರತಿಪಾದಿಸುವ ಜೀವ-ಜೀವನ ಪ್ರೀತಿ, ಸಹಿಷ್ಣುತೆ, ಸಮಾಜಿಕ ನ್ಯಾಯ, ಸಮಾನತೆ, ವೈಚಾರಿಕತೆ ಇವುಗಳನ್ನು ಮರು ಓದಿನ ಮೂಲಕ ಮತ್ತಷ್ಟು ಹಿಗ್ಗಿಸುವ ಜರೂರಿದೆ. ಬಹುಮುಖ್ಯವಾಗಿ ಉಪೇಕ್ಷೆಗೆ ಒಳಗಾಗುತ್ತಿರುವ ನನ್ನ ಕಾಲದ ಕವಿ, ಲೇಖಕ, ಬರಹಗಾರರನ್ನು ಮುನ್ನೆಲೆಗೆ ತರುವ ಮಹತ್ವಾಕಾಂಕ್ಷೆ ನಮ್ಮಲ್ಲೆರಲ್ಲಿ ಬರಬೇಕಿದೆ.
ಹಿಂದಿನವರು ಬರೆದಿದ್ದೇ ಶ್ರೇಷ್ಠ ಮುಂದಿನವರದೆಲ್ಲ ಕನಿಷ್ಠ ಎನ್ನುವಂಥಹ ತಥಾಕಥಿತ ವಾದಸರಣಿಗಳನ್ನು ಹಿಂದಿಕ್ಕಿ ಮುನ್ನಡೆಯಬೇಕಿದೆ. ಏನಕೇನ ಹೊಗಳುವುದಾದರೆ ಹೇಳು, ಟೀಕಿಸುವುದಾದರೆ ಸುಮ್ಮನಿರು ಎಂಬ ವಿಮರ್ಶೆಯ ನೆಲೆಗಳನ್ನು ಮರೆತ ಈಗಿನ ಕಾಲದ ಕೆಲ ಹವ್ಯಾಸಿ (amateur) ಬರಹಗಾರರು ಪರಂಪರೆಯೊಂದಿಗೆ ಸಂಲಗ್ನತೆ ಸಾಧಿಸಲು ದಾರಿಗಳನ್ನು ನಾವೇ ಹುಡುಕಿಕೊಡಬೇಕಿದೆ.
ಈ ದಿಸೆಯಲ್ಲಿ ಸಣ್ಣ ಕಥೆಯನ್ನು ಒಂದು ಗಮನಾರ್ಹ ಮಾಧ್ಯಮವಾಗಿ ನೆಲೆಗೊಳಿಸುವುದರೊಂದಿಗೆ ಅದಕ್ಕೆ ವಿಶಿಷ್ಟ ಮೂರ್ತ-ಸ್ವರೂಪಕೊಟ್ಟ ಎಲ್ಲ ಪೂರ್ವಸೂರಿಗಳಿಗೆ ನೆನಹಿನಲ್ಲಿ ಕನ್ನಡ ಕಥಾ ಸಾಹಿತ್ಯದ ಮರು ಓದು ಮತ್ತು ಮನನಕ್ಕೆ ಗೆಳೆಯ ಮತ್ತು ಸಾಹಿತ್ಯ ಸಹವರ್ತಿಗಳಾದ ಶಂಕರ್ ಸಿಹಿಮೊಗೆ ಮತ್ತು ಸೂರ್ಯಕೀರ್ತಿ ವೇದಿಕೆಯೊಂದನ್ನು ಇದೇ ಭಾನುವಾರ ಎಲ್ಲ ಕನ್ನಡ ಕಥಾ ಸಾಹಿತ್ಯ ಪ್ರಿಯರಿಗೆ ಒದಗಿಸಿಕೊಡಲಿದ್ದಾರೆ.
ದಿನಾಂಕ – ೦೧-೧೦-೨೦೨೩ ರ ಭಾನುವಾರ ‘ಕಥೆಗಿಣಿಚ’ ಶೀರ್ಷಿಕೆಯಡಿಯಲ್ಲಿ ಸಮಕಾಲೀನ ಕಥೆಗಳ ಚಿಂತನ-ಮಂಥನ ನಡೆಯಲಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ಹೊಸಪ್ರಯೋಗವೆಂದೇ ಹೇಳಬಹುದು. ಅನೌಪಚಾರಿಕವಾಗಿ ಒಂದೆಡೆ ಕಲೆತು ಔಪಚಾರಿಕವಾದ ಸಾಹಿತ್ಯವನ್ನು ಪರಾಮರ್ಶಿಸುವ ಅವರ ಸದುದ್ದೇಶ ಸಫಲವಾಗಲಿ ಎಂದು ಆಶಿಸೋಣ. ಬನ್ನಿ ಅಂದು ಜೊತೆಗೂಡೋಣ.
ಮೆಲೋಗರ : ನನ್ನದಲ್ಲದ ದೇಶ, ಭಾಷೆಯ ಊರಿನಲ್ಲಿ ತಳ ಊರಿದ ಕಾರಣ ಕಾಡುವ ಒಂಟಿತನವನ್ನು ನೀಗಲೋ ಎಂಬಂತೆ ಪುಣೆಯ ಭಾರತಿ ನಿವಾಸ್ ಕಾಲೋನಿಯ ಕನ್ನಡ ಸಂಘಕ್ಕೆ ಆಗಾಗ ಹೋಗಿಬರುವ ಅಭ್ಯಾಸವಾಗಿಬಿಟ್ಟಿದೆ. ಹಲವಾರು ಕನ್ನಡಿಗರ ಪರಿಚಯಕ್ಕೂ ಪುಣೆಯ ಕನ್ನಡ ಸಂಘ ಮಧ್ಯವರ್ತಿಯಂತೆ ಕಾರಣವಾಗಿದೆ. ಪುಣೆಯ ಕನ್ನಡ ಸಂಘ ಪರಿಚಯಿಸಿದ ಕನ್ನಡಿಗರ ಬಗ್ಗೆ ಬರೆಯುತ್ತಾ ಹೋದರೆ ಬೃಹದ್ಗ್ರಂಥವೆ ಆದೀತು. ಅದರ ಬಗ್ಗೆ ಇನ್ನೊಮ್ಮೆ ಬರೆದು ನಿಮ್ಮೆದುರು ಹಾಜರು ಪಡಿಸುತ್ತೇನೆ. ಈ ಮೂಲಕವೆ ಕಲುಬುರ್ಗಿಯ ಮಿತಭಾಷಿ, ಮೃದುಭಾಷಿ ಸಹೃದಯಿಯೊಬ್ಬರು ಅತಿವೇಗದಲ್ಲಿ ಆತ್ಮೀಯರಾದರು. ಅಗಾಧ ಓದಿನ ಹಸಿವಿನ ಮಿತ್ರ ಆಗಾಗ ಮನೆಗೆ ಬಂದು ಜೊತೆ ಕಾಫಿ ಹೀರಿ ಹರಟೆಯೊಡೆದು ಕುವೆಂಪು, ಬೇಂದ್ರೆ, ಎಲಿಯಟ್, ಕಾಫ್ಕಾ ಕುರಿತಾಗಿ ವಿದ್ವತ್ ಪೂರ್ಣವಾಗಿ ಮಾತಾಡಿ ಮನತಣಿಸುತ್ತಿದ್ದರು. ಮೊನ್ನೆ ಅವರು ಬಂದಾಗ ಮೊದಲಿನ ಲವಲವಿಕೆ ಕಾಣಲಿಲ್ಲ, ಪುಸ್ತಕ, ಸಾಹಿತ್ಯದ ಬಗ್ಗೆ ತುಟಿಪಿಟಕ್ ಎನ್ನದೆ ಮುಗುಮ್ಮಾಗಿ ಕುಳಿತದ್ದು ಖೇದವೆನಸಿ “ಯಾಕ್ರೀ ಸರ, ಮೈಯಾಗ ಆರಾಮಿಲ್ಲೇನೆ? ಒಂಥಾರಾಽ ಅದೀರಲ್ಲ, ಒಂದ್ ಕವಿತಿ ಒಗಿಲೇನು?” ಎಂದು ಮಾತಿಗೆಳೆದೆ. ಆ ಮನುಷ್ಯ ಮ್ಲಾನವದನರಾಗಿ ಹೇಳಿದ್ದನ್ನು ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇನೆ.
ಅವರೊಬ್ಬ ‘ಆ’ ಭಾಗದ ಖ್ಯಾತ(ತೆ) ಸಫಾರಿ ಸಾಹಿತಿ, ಕೋಶ ಓದಿದ್ದಕ್ಕಿಂತಲೂ ದೇಶ ಸುತ್ತಿದ್ದೇ ಹೆಚ್ಚು. ಹೀಗೆ ಸುತ್ತುವಾಗ ಕಂಡು-ಕೇಳಿದ ಚರ್ವಿತಚರ್ವಣಗಳನ್ನೇ ಪ್ರವಾಸ ಕಥನವಾಗಿಸಿದ ಧೀರ ಮತ್ತು ಗಂಭೀರ ಸಾಹಿತಿ. ಯಾರೇ ಅವರ ಜೊತೆ ಮಾತಾಡಿದಾಕ್ಷಣ ಅವರಿಗೆ ಬೇಕೋ ಬೇಡವೋ ಕೇಳದೆ ತಮ್ಮ ಸರಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಪುಸ್ತಕಗಳನ್ನು ಬೇಕು-ಬೇಡಗಳನ್ನು ಕೇಳದೆ ಹಲ್ಲು ಗಿಂಜುತ್ತಾ ‘ಹೇ ತಗಳ್ರೀ ಆರಾಮಾಗಿ ಓದ್ ಹೇಳ್ರಿ’ ಚೀಲಕ್ಕೆ ಹಾಕಿ ತುಂಬಿ ಕಳಿಸುತ್ತಿದ್ದರು. ಇವರ ಜೊತೆಯೂ ಹಾಗೆ ಆಗಿದೆ. ಸಮಸ್ಯೆ ಶುರುವಾದದ್ದೆ ಅಲ್ಲಿಂದ. ಇವರಿನ್ನು ಇಲ್ಲಿ ಪುಸ್ತಕದ ಗಂಟು ಬಿಚ್ಚಿರಲಿಲ್ಲ, ಅತ್ತಿಂದ ಖ್ಯಾತ ಸಾಹಿತಿ ಮೇಲಿಂದ ಮೇಲೆ ಪೋನಾಯಿಸಿ “ಅಲ್ರೀ ಪುಸ್ತಕ ತಗೊಂಡ್ ಹೋಗಿದ್ ರೊಕ್ಕ ಬರ್ಲಿಲ್ಲಲ ಅದ್ಕಽ ಫೋನ್ ಹಚ್ಚಿದೆ, ಸ್ವಲ್ಪ ಲಗು ಕಳಿಸಿಕೊಡ್ರೀ” ಅಂದದ್ದು ಕೇಳಿ ಮಿತ್ರರ ಜಂಘಾಬಲವೇ ಉಡುಗಿಹೋಗಿದೆ. “ಸರ, ಎಷ್ಟಾತ್ರಿ?” ಅಂದದ್ದೇ ತಡ ಆ ಸಾಹಿತಿ ಬರೋಬ್ಬರಿ ೬೦೦೦ ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕಿವರು “ಅಲ್ರೀ ನಾ ಕೇಳ್ಳಿಲ್ಲ ಮಾಡ್ಲಿಲ್ಲ, ನೀವಾಽ ಕೊಟ್ಟಿರಿ, ಈಗ ರೊಕ್ಕ ರೊಕ್ಕ ಅಂದ್ರ ಎಲ್ಲಿಂದ ತರೋಣು” ಅಂದರೂ ಬಿಡದೆ ಹೋದಾಗ ಕೊನೆಗೆ ಸಾಲ ಮಾಡಿ ಆ ಸಾಹಿತಿಗೆ ಅಷ್ಟೂ ದುಡ್ಡನ್ನು ಕೊಟ್ಟು ಕೈತೊಳೆದುಕೊಂಡಿದ್ದಾರೆ. ಖ್ಯಾತ ಸಾಹಿತಿಯ ಅಷ್ಟೂ ಪುಸ್ತಕಗಳನ್ನು ಗುಜರಿಗೆ ಹಾಕಿ ಬಂದ ಮುನ್ನೂರಾ ಐವತ್ತು ರೂಪಾಯಿಗಳಲ್ಲಿ ಪುಣೆಯ ಅಂಬೆಗಾವ್ ನಲ್ಲಿ ಸಿಗುವ ದಾಬೇಲಿ ತಿಂದು ಚಾ ಕುಡಿದು ಸಮಾಧಾನ ಪಟ್ಟುಕೊಂಡಿದ್ದಾರೆ. ಮತ್ತೀಗ ಅವರು ಸಾಹಿತಿ ಮತ್ತು ಸಾಹಿತ್ಯ ಈ ಎರಡರಿಂದ ದೂರವಿದ್ದಾರೆ. ಇದಕ್ಕೆ ನೀವೇನಂತೀರಿ?
– ರಾಜ್ ಆಚಾರ್ಯ




