ಗೃಹಲಕ್ಷ್ಮಿ ಯೋಜನೆಯು ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ: ರಾಹುಲ್ ಗಾಂಧಿ

3 years ago

Grilahkshmi Yojana is the biggest project in the world: Rahul Gandhi

ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ಅರಮನೆ ನಗರಿ,ಸಾಂಸ್ಕೃತಿಕ‌ ರಾಜಧಾನಿ ಮೈಸೂರಿನಲ್ಲಿ ಅದ್ಧೂರಿ‌‌ ಚಾಲನೆ ನೀಡಲಾಗಿದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭಕ್ಕೆ ಸಾಗರದಂತೆ ಹರಿದು ಬಂದ ಜನ ಸಾಗರದ ಹರ್ಷೋದ್ಗಾರದ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಸಮಾಜ ಕಲ್ಯಾಣ ಮಂತ್ರಿ ಡಾ.ಮಹದೇವಪ್ಪ‌ ಅವರು, ದೇಶದ ಸಂವಿಧಾನದ‌ ಪ್ರಸ್ತಾವನೆಯನ್ನು ಬೋಧಿಸಿದರು. ಈ ವೇಳೆ ನಟ ಸಂಗೀತ ನಿರ್ದೇಶಕ ಸಾಧು ಕೋಕಿಲ ಸಿದ್ದಪಡಿಸಿದ ವಿಶೇಷ ಸಂಗೀತ ತೇಲಿಬಂತು. ಜೊತೆಯಲ್ಲಿ ವೇದಿಕೆಗೆ ಬಂದ‌ ಅಷ್ಟಲಕ್ಷ್ಮಿಯರು ಹಾಗೂ 2 ಸಾವಿರ ರೂಪಾಯಿ ಮೌಲ್ಯದ ಚೆಕ್ ಪ್ರತಿಕೃತಿಯು ಸನ್ನಿವೇಶವನ್ನು ಕಳೆಗಟ್ಟಿಸಿತ್ತು. ಇದನ್ನು ಕಂಡ ಯಜಮಾನಿ ಮಹಿಳೆಯರು, ಅವರ ಅಕ್ಕ-ತಂಗಿಯರು, ತಾಯಂದಿರು, ಮನೆಯ ಯಜಮಾನರು, ಸರ್ವ ಸದಸ್ಯರು‌ ಹರ್ಷೋದ್ಗಾರ ಮಾಡಿದರು.

ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದ ರಾಜ್ಯದ 12,600 ಸ್ಥಳಗಳಲ್ಲೂ ಸಂಭ್ರಮ ಮೇರೆ ಮೀರಿತ್ತು.

ನುಡಿದಂತೆ ನಡೆದಿದ್ದೇವೆ: ನಂತರ ಮಾತನಾಡಿದ ರಾಹುಲ್ ಗಾಂಧಿ, ‘ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದಾಗ, ಇವೆಲ್ಲ ಅಸಾಧ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದರು. ಕಾಂಗ್ರೆಸ್ ಸುಳ್ಳು ಹೇಳ್ತಿದೆ ಎಂದಿದ್ದರು. ಆದರೆ ಈಗ ಸತ್ಯ ನಿಮ್ಮ ಕಣ್ಣ ಮುಂದೆಯೇ ಇದೆ. ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಉಚಿತವಾಗಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಶೀಘ್ರದಲ್ಲೇ ನಿರುದ್ಯೋಗಿಗಳಿಗಾಗಿ ಯುವನಿಧಿ ಕಾರ್ಯಕ್ರಮವೂ ಅನುಷ್ಠಾನಕ್ಕೆ ಬರಲಿದೆ’ ಎಂದರು.

‘ಗೃಹಲಕ್ಷ್ಮಿ ಯೋಜನೆಯು ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ. ಇಂಥ ಯೋಜನೆ ಬೇರೆಲ್ಲೂ ಇಲ್ಲ. ನಾವು ಕೊಡುವ  2 ಸಾವಿರ ರೂಪಾಯಿ ಸಣ್ಣದಲ್ಲ. ಅದು ಮಹಿಳೆಗೆ ಸಂರಕ್ಷಣೆ ನೀಡುತ್ತದೆ.‌ ಅದನ್ನು ಉಳಿಸಿ ಮಕ್ಕಳ ಶಿಕ್ಷಣಕ್ಕೆ ಬಳಸಬಹುದು. ರಾಜ್ಯದ ಮಹಿಳೆಯರೇ ರಾಜ್ಯದ ಏಳಿಗೆಗೆ ಕಾರಣ. 75 ವರ್ಷಗಳ‌ ಅಭಿವೃದ್ಧಿ‌‌ ನಿಮ್ಮಿಂದಲೇ ಆಗಿದೆ’ ಎಂದು ಬಣ್ಣಿಸಿದರು.

‘ಮುಕ್ತವಾಗಿ ನಮ್ಮೊಂದಿಗೆ ಮಾತಾಡಿ, ನಾವು ಸುಳ್ಳು ಆಶ್ವಾಸನೆ ಕೊಡಲ್ಲ. ಆಗುವುದಿಲ್ಲ ಎಂದರೆ ಅದನ್ನೇ ಹೇಳುತ್ತೇವೆ. ಸಾಧ್ಯವಾಗುವುದಾರೆ ಮಾಡಿಯೇ ತೀರುತ್ತೇವೆ. ಇದು‌ ನಮ್ಮ ಯೋಜನೆಯಲ್ಲ; ನಿಮ್ಮ ಯೋಜನೆ. ಕಾಂಗ್ರೆಸ್ ಪಕ್ಷದ‌‌ ಥಿಂಕ್ ಟ್ಯಾಂಕ್ ಮಾಡಿದ್ದಲ್ಲ. ನೀವು ನಮಗೆ ಯೋಜನೆಯ ದಾರಿ ತೋರಿಸಿದಿರಿ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ 600 ಕಿಮೀ ನಡೆದಿದ್ದೆ. ಬೆಲೆ ಏರಿಕೆಯು ಮಹಿಳೆಯರ ಮೇಲೆ ಬರೆ ಹಾಕಿದೆ ಎಂದು ಆಗ ಅನ್ನಿಸಿತ್ತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಎಲ್ಲದ್ದರ ಏಟು ಮಹಿಳೆಯರ ಮೇಲೇ ಬೀಳುತ್ತದೆ. ಆ ಬಗ್ಗೆ ಮಹಿಳೆಯರು ನನಗೆ ಹೇಳಿದ್ದರು. ನಡೆಯುತ್ತಾ ನಡೆಯುತ್ತಾ, ಮಹಿಳೆಯರೇ ಈ ರಾಜ್ಯದ ಅಡಿಪಾಯ. ಅವರಿಲ್ಲದೆ ಈ ರಾಜ್ಯ ನಿಲ್ಲದು ಎಂಬುದು ಅರಿವಿಗೆ ಬಂದಿತ್ತು. ಮರದ ಬೇರು ಕಾಣದ ರೀತಿಯಲ್ಲಿ, ಮನೆಯಲ್ಲೆ ಉಳಿದ ಮಹಿಳೆಯರು, ಯಾವುದೇ ಊರಾಗಿರಲಿ, ಇಡೀ ರಾಜ್ಯದ ಭದ್ರ ಬುನಾದಿ ನೀವೇ’ ಎಂದಾಗ ಮಹಿಳೆಯರು‌ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ 100 ದಿನಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ರಕ್ಷಾಬಂಧನದ‌‌ ದಿನವಾದ ಇಂದು ನಾಡಿನ ಕೋಟ್ಯಂತರ ಅಕ್ಕ ತಂಗಿಯರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ’ ಎಂದರು.

ಕೇಂದ್ರ ಸರ್ಕಾರವು ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಇಬ್ಬರು ಮೂವರಿಗಷ್ಟೇ ಅಭಿವೃದ್ಧಿಯ ಹೊಣೆ‌ ನೀಡಲಾಗಿದೆ. ಆದರೆ ಕರ್ನಾಟಕದ ಐದು ಭರವಸೆಗಳು ಆಡಳಿತದ ನೀಲಿ ನಕ್ಷೆಯಾಗಿದೆ. ಬಡವರಿಗಾಗಿ ಸರ್ಕಾರಗಳು ಕೆಲಸ ಮಾಡಬೇಕು. ಜಾತಿ, ಧರ್ಮ ಮೀರಿ‌ ನೆರವಾಗಬೇಕು. ರಾಜ್ಯದ ಯೋಜನೆಗಳನ್ನು ಇಡೀ ದೇಶದಲ್ಲಿ ಮಾದರಿಯಾಗಿ ಜಾರಿಗೆ ತರಲಾಗುವುದು. ಇವು ದೇಶಕ್ಕೆ ಸರಿಯಾದ ದಾರಿ ತೋರಿವೆ’ ಎಂದು ಹೇಳಿದರು.

ಖರ್ಗೆ ವಾಗ್ದಾಳಿ: ನಂತರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ದೇಶ ಹಾಳು ಮಾಡುತ್ತಿದೆ. ಕೇಂದ್ರದಲ್ಲಿರುವ ಪ್ಯಾಸಿಸ್ಟ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ಪಕ್ಷ ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿಯು ಭಾರತವನ್ನು ವಿಭಜಿಸುತ್ತಿದೆ. ಈ ಕಾರ್ಯಕ್ರಮಗಳನ್ನು ಯಾರೂ ಕೊಡಲಾಗುವುದಿಲ್ಲ, ದೇಶ ದಿವಾಳಿಯಾಗುತ್ತದೆ ಎಂದೆಲ್ಲಾ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹೇಳುತ್ತಿದ್ದರು. ಈಗ ಇಲ್ಲಿ ನಡೆದಿರುವುದನ್ನು ನೋಡಿದರೆ ಅವರೂ ಹೃದಯ ಪೂರ್ವಕವಾಗಿ ಒಪ್ಪಬೇಕು ಎನಿಸಬಹುದು. ಆದರೆ ಅವರು ಹಾಗೆ ಮಾಡುವುದಿಲ್ಲ. ನಾವೇ ಮಾಡಿದ್ದೇ ಸರಿ ಎಂಬ ಮನೋಭಾವ ಅವರದ್ದು. ಬೇರೆಯವರು ಮಾಡಿದ್ದನ್ನು ಒಪ್ಪುವುದಿಲ್ಲ ಎಂದು ಟೀಕಿಸಿದರು.

ನಾವು ಇಲ್ಲದೇ ಇದ್ದಿದ್ದರೆ ದೇಶ ಒಗ್ಗಟಾಗಿ ಇರುತ್ತಿರಲಿಲ್ಲ. ದೇಶಕ್ಕೆ‌ ಹೊಸ ಸಂವಿಧಾನ ನೀಡಿದವರು ಯಾರು? ನಾವು. ಸಂವಿಧಾನ ಬಿಟ್ಟರೆ ನಾವು ಸತ್ತ ಹಾಗೆಯೇ. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟರ ಬದುಕು ಹಸನಾಗುತ್ತಿದ್ದರೆ ಅದಕ್ಕೆ ಕಾರಣ ಸಂವಿಧಾನ. ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬಾರದು. ಸಂವಿಧಾನ ಉಳಿಸಿಕೊಳ್ಳದೇ ಇದ್ದರೆ ಮುಂದಿನ ಪೀಳಿಗೆ ಬಹಳ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ. ದೇಶದಲ್ಲಿ ಯಾವ ಸರ್ಕಾರವೂ ಇಂತಹ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ದೇಶದ ಎಲ್ಲರೂ ಇತ್ತ ನೋಡುತ್ತಿದ್ದಾರೆ’ ಎಂದರು.

Leave a Reply