ಜಾನುವಾರುಗಳಿಗೆ 7ನೇ ಸುತ್ತಿನ ಲಸಿಕಾ ಅಭಿಯಾನ ಕಾರ್ಯಕ್ರಮ

12 months ago

ಉಚಿತ ಕಾಲು ಬಾಯಿ ರೋಗ ಲಸಿಕಾ ಅಭಿಯಾನ

ಏಪ್ರಿಲ್ 26 ರಿಂದ ಜೂನ್ 9 ರವರೆಗೆ ಜಾನುವಾರುಗಳಿಗೆ 7ನೇ ಸುತ್ತಿನ ಲಸಿಕಾ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಿ

ಸುರೇಶ್ ಬಿ.ಇಟ್ನಾಳ್ ಸೂಚನೆ

ದಾವಣಗೆರೆ: ಜಿಲ್ಲೆಯಾದ್ಯಂತ ಇದೇ ಏಪ್ರಿಲ್ 26 ರಿಂದ ಜೂನ್ 9 ರವರೆಗೆ ಜಾನುವಾರುಗಳಿಗೆ ಉಚಿತ ಲಸಿಕಾ ಅಭಿಯಾನ ನಡೆಯಲಿದ್ದು, ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಚಿತ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲು ಬಾಯಿ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಶೇ.100 ರಷ್ಟು ಲಸಿಕೆ ನೀಡುವ ಮೂಲಕ ರೋಗವನ್ನು ಸಂಪೂರ್ಣ ನಿಯಂತ್ರಿಸಿ, ನಿರ್ಮೂಲನೆ ಮಾಡಬೇಕು. ಮಾನವನಿಗೆ ಮಾತು ಬರುವುದರಿಂದ ಸಮಸ್ಯೆಗಳನ್ನು ಹೇಳಿಕೊಂಡು ವೈದ್ಯನ ಬಳಿ ತೆರಳುತ್ತಾನೆ, ಆದರೆ ಮಾತು ಬಾರದ ಮೂಕ ಜೀವಿ ಜಾನುವಾರುಗಳ ಗತಿ ಏನು?. ಆದ್ದರಿಂದ ಸೂಕ್ಷ್ಮವಾಗಿ ಗಮನಿಸಿ ಲೋಪವಾಗದಂತೆ ಪ್ರತಿ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದರು.

ಪಶುವೈದ್ಯಕೀಯ ಇಲಾಖೆ ಸಹಾಯವಾಣಿ 1962 ಸಂಖ್ಯೆಯನ್ನು ಪ್ರತಿ ಪಶುವೈದ್ಯಕೀಯ ಇಲಾಖೆಯಲ್ಲಿ ಬಿತ್ತರಿಸಬೇಕು. ಹಾಗೆಯೇ ಇಲಾಖೆ ವತಿಯಿಂದ ಮತ್ತಷ್ಟು ಪರಿಣಾಮಕಾರಿಯಾಗಿ ರೈತರಿಗೆ ತಲುಪುವಂತೆ ಪ್ರಚಾರಪಡಿಸಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ನೋಡಿಕೊಳ್ಳಬೇಕು ಎಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಹೆಚ್.ಎಂ.ಮಹಶ್ ಮಾತನಾಡಿ, ಜಿಲ್ಲೆಯಲ್ಲಿ 2,37,801 ದನ, 91,896 ಎಮ್ಮೆ ಸೇರಿ ಒಟ್ಟು 3,29,697 ಜಾನುವಾರುಗಳಿದ್ದು, 3,13,100 ಲಸಿಕೆ ಲಭ್ಯವಿದೆ. ಜಿಲ್ಲಾದ್ಯದಂತ 3000 ಬ್ಲಾಕ್ಗರಳನ್ನು ಗುರುತಿಸಿದ್ದು, 321 ಲಸಿಕಾದಾರರು ಪ್ರತಿ ಗ್ರಾಮ ಹಾಗೂ ಮೆನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡಲಿದ್ದಾರೆ ಎಂದರು.

ಕೋಳಿ ವಿತರಣೆಗೆ ಅರ್ಹ ಮಹಿಳೆಯರ ಆಯ್ಕೆ: ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸಲು ಇಲಾಖೆ ವತಿಯಿಂದ ಅರ್ಹ ಪ.ಜಾತಿ, ಪ.ಪಂಗಡ ಹಾಗೂ ಸಾಮಾನ್ಯ ಮಹಿಳೆಯರಿಗೆ ಉಚಿತವಾಗಿ ಕೋಳಿ ಮರಿ ನೀಡಲಾಗುವುದು. ಜಿಲ್ಲೆಯಾದ್ಯಂತ 168 ಪರಿಶಿಷ್ಟ ಜಾತಿ ಮಹಿಳೆಯರಿಂದ ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ 45 ಆಯ್ಕೆ ಗುರಿ ನೀಡಲಾಗಿದೆ.  ಪರಿಶಿಷ್ಟ ಪಂಗಡ ಮಹಿಳೆಯರಿಂದ 659 ಅರ್ಜಿ ಸ್ವಕೃತವಾಗಿದ್ದು, 645 ಹಾಗೂ 737  ಸಾಮಾನ್ಯ ಮಹಿಳೆಯರಿಂದ ಅರ್ಜಿ ಸ್ವೀಕೃತವಾಗಿದ್ದು, 238 ಆಯ್ಕೆ ಮಾಡಿಕೊಳ್ಳಲು ಗುರಿ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 1065 ಅರ್ಜಿಗಳು ಸ್ವೀಕೃತವಾಗಿದ್ದು, ಇಲಾಖೆ ವತಿಯಿಂದ 737 ಆಯ್ಕೆಗೆ ಭೌತಿಕ ಗುರಿ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ “ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನದ” ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಪಶುವೈದ್ಯಾಧಿಕಾರಿಗಳು, ಕರ್ನಾಟಕ ಕುಕ್ಕುಟ ಮಾಹಮಂಡಳಿ ಪ್ರಾದೇಶಿಕ ನಿರ್ದೇಶಕರು, ಸಮಿತಿ ಸದಸ್ಯರು ಹಾಜರಿದ್ದರು.

Leave a Reply