ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಅಭ್ಯಾಸ ಮಾನವನ ಸರ್ವರೋಗಗಳನ್ನು ಸರಿ ಮಾಡುವ ಸಂಜೀವಿನಿ

5 months ago

ಕಾಯಿಲೆ ಮೂಲದಿಂದಲೇ ಸರಿ ಮಾಡುವ ಏಕೈಕ ಮಾರ್ಗ

ದಾವಣಗೆರೆ: ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಅಭ್ಯಾಸ ಮಾನವನ ಸರ್ವರೋಗಗಳನ್ನು ಸರಿ ಮಾಡುವ ಸಂಜೀವಿನಿ ಎಂದು ಡಾ.ಗಂಗಾಧರವರ್ಮ ಹೇಳಿದರು.

ನಗರದ ಎಸ್.ಟಿ.ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿವಸದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 8ನೇ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ಅತೀವ ಸಂತೋಷವನ್ನು ತಂದಿದೆ. ಪ್ರಕೃತಿ ಚಿಕಿತ್ಸೆಯು ಕೇವಲ ಕಾಯಿಲೆಯ ಉಪಶಮನಕ್ಕೆ ಮಾತ್ರ ಚಿಕಿತ್ಸೆಯನ್ನು ನೀಡದೆ, ಕಾಯಿಲೆಯನ್ನು ಮೂಲದಿಂದಲೇ ಸರಿ ಮಾಡುವ ಭಾರತೀಯ ವೈದ್ಯ ಪದ್ದತಿ ಎಂದರು.

ಬಹುತೇಕ ಕಾಯಿಲೆಗಳು ತಪ್ಪಾದ ಜೀವನ ಶೈಲಿ, ದೋಷಯುಕ್ತ ಆಹಾರ, ಒತ್ತಡ, ನಿದ್ರೆಯ ಅಭಾವ, ನೀರಿನ ಕೊರತೆ, ದೇಹದಲ್ಲಿ ವಿಷ ವಸ್ತುಗಳ ಸಂಗ್ರಹದಿಂದಾಗಿ ಬರುತ್ತವೆ. ಪ್ರಕೃತಿ ಚಿಕಿತ್ಸಾ ಪದ್ದತಿಯು ಈ ಮೂಲಕಾರಣಗಳನ್ನು ಪತ್ತೆಮಾಡಿ ಸರಿಪಡಿಸುತ್ತದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಯು ಔಷಧಿಯ ಅವಲಂಬನೆಯನ್ನು ಕಡಿಮೆ ಮಾಡಿ, ದೇಹದ ಸ್ವಂತ ಶಕ್ತಿಯನ್ನು ಜಾಗೃತಗೊಳಿಸುವ ಪ್ರಕೃತಿ ವಿಧಾನಗಳು ಜಗತ್ತಿನಾದ್ಯಂತ ಜನಪ್ರಿಯವಾಗುತ್ತಿವೆ. ಮೂಲ ಕಾರಣ ಶೋಧನೆ ಮತ್ತು ದೇಹದ ಪುನರ್ ಸಮತೋಲನ ಶಾಶ್ವತ ಆರೋಗ್ಯ ಎಂಬ ಸರಳ ತತ್ವದ ಮೇಲೆ ಇದು ನಿಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ವಿಂಧ್ಯ ಗಂಗಾಧರ ವರ್ಮ,  ಪ್ರಕೃತಿ ಚಿಕಿತ್ಸೆಯಲ್ಲಿ ವ್ಯಕ್ತಿಯ ದೇಹದ ಪ್ರಕೃತಿ, ಆಹಾರ ಅಭ್ಯಾಸ, ಮಾನಸಿಕ ಸ್ಥಿತಿ, ಜೀವನ ಶೈಲಿ ಎಲ್ಲದರ ವಿಶ್ಲೇಷಣೆಯ ಮೇಲೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ಇದರ ಫಲಿತಾಂಶಗಳು ವೇಗವಾಗಿ ಮತ್ತು ದೀರ್ಘಕಾಲ ಉಳಿಯುತ್ತವೆ ಎಂದರು.

ಪುತ್ತೂರು ಶಲ್ಯ ಪ್ರೊಫೆಸರ್ ರಾಜಪ್ಪ, ಪವಿತ್ರ, ತುಳಸಿ ರಾಮರಾಜು, ಪ್ರಹ್ಲಾದ್ ಕೊಪ್ಪದ್, ಗಾಯತ್ರಿ ಮತ್ತು ನಾಗಪ್ಪ, ಶಿಲ್ಪ, ಬೈರಾಜು ಪೂರ್ಣ ಚಂದ್ರ ಹಾಗೂ ಸಿಬ್ಬಂದಿ, ಸಾಧಕರು ಮತ್ತು ಸಾರ್ವಜನಿಕರು ಹಾಜರಿದ್ದರು.

Leave a Reply