ಉತ್ತರ ಕನ್ನಡ ಜಿಲ್ಲೆಯಲ್ಲಿನ ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳು, ಹಿಂದುಳಿದ ವರ್ಗದ ಜನಸಂಖ್ಯೆಯುಳ್ಳ ಪ್ರದೇಶಗಳು ಹಾಗೂ ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಅವರ ಮನೆ ಬಾಗಿಲಿಗೆ ತೆರಳಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡುವ ಸಂಚಾರಿ ಆರೋಗ್ಯ ಘಟಕಗಳ ಸೇವೆಯು ಶೀಘ್ರದಲ್ಲಿ ಆರಂಭಗೊಳ್ಳಲಿದೆ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ಪ್ರಸ್ತುತ ಜಿಲ್ಲೆಯ ಅಂಕೋಲಾ, ಹೊನ್ನಾವರ, ಶಿರಸಿ, ಯಲ್ಲಾಪುರ, ಜೋಯಿಡಾ ಮತ್ತು ಹಳಿಯಾಳ ತಾಲೂಕು ವ್ಯಾಪ್ತಿಯಲ್ಲಿನ ದುರ್ಗಮ ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಒದಗಿಸಲು 6 ಸಂಚಾರಿ ಆರೋಗ್ಯ ಘಟಕಗಳು ಮಂಜೂರಾಗಿವೆ.
ಈಗಾಗಲೇ ಈ ತಾಲೂಕುಗಳ ವ್ಯಾಪ್ತಿಯಲ್ಲಿನ ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳು, ಹಿಂದುಳಿದ ವರ್ಗದ ಜನಸಂಖ್ಯೆಯುಳ್ಳ ಪ್ರದೇಶಗಳು ಹಾಗೂ ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಪ್ರದೇಶಗಳನ್ನು (ಸಮೀಪದ ಆರೋಗ್ಯ ಉಪ ಕೇಂದ್ರಗಳಿಂದ ಐದು ಕಿಲೋ ಮೀಟರ್ ಹಾಗೂ ಅದಕ್ಕಿಂತ ಹೆಚ್ಚಿನ ದೂರವಿರುವ ಹಳ್ಳಿಗಳು / ಜನವಸತಿ ಪ್ರದೇಶಗಳು) ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಮೂಲಭೂತ ಆರೋಗ್ಯ ಸೇವೆಗಳಾದ 12 ವಿಸ್ತೃತ ಪ್ಯಾಕೇಜ್ ಸೇವೆಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ವೈದ್ಯಕೀಯ ಸೇವೆಗಳನ್ನು ಈ ಸಂಚಾರಿ ಆರೋಗ್ಯ ಘಟಕಗಳ ಮೂಲಕ ನೀಡಲಾಗುವುದು.
ಈ ಸಂಚಾರಿ ಆರೋಗ್ಯ ಘಟಕಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಒಂದು ವಾಹನ ಹಾಗೂ ಒಬ್ಬರು ಎಂ.ಬಿ.ಬಿ.ಎಸ್ ವೈದ್ಯರು, ಶುಶ್ರೂಷಕರು ಹಾಗೂ ಪ್ರಯೋಗ ಶಾಲಾ ತಂತ್ರಜ್ಞರು ಇರಲಿದ್ದು, ಪ್ರತಿ ದಿನ ರಸ್ತೆ ನಕ್ಷೆಯನ್ವಯ ನಿಗದಿತ ಪಡಿಸಲಾದ ಹಳ್ಳಿಗಳನ್ನು ಪ್ರತಿ ದಿನ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ ಒಂದು ಹಳ್ಳಿ ಹಾಗೂ ಮಧ್ಯಾಹ್ನ ಮತ್ತೊಂದು ಹಳ್ಳಿಯನ್ನು ಭೇಟಿ ನೀಡಿ ಅಲ್ಲಿನ ಸಾರ್ವಜಿಕರಿಗೆ ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತದೆ. ಅಲ್ಲದೇ ಸಂಬಂಧಪಟ್ಟ ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಕೂಡಾ ಪ್ರತಿ ವಾರ ಈ ಪ್ರದೇಶಗಳಿಗೆ ನಿಗದಿತ ದಿನದಂದು ಭೇಟಿ ನೀಡಿ ಆರೋಗ್ಯ ಸೇವೆಗಳನ್ನು ಕಡ್ಡಾಯವಾಗಿ ನೀಡಲು ಸೂಚನೆ ನೀಡಲಾಗಿದೆ.
ಸಂಚಾರಿ ಆರೋಗ್ಯ ಘಟಕ (ಎಂ.ಹೆಚ್.ಯು) ಗಳು ನಿಗದಿತ ದಿನಗಳಲ್ಲಿ ಮತ್ತು ನಿಗದಿತ ಸಮಯದಲ್ಲಿ ಗೊತ್ತುಪಡಿಸಿದ ಗ್ರಾಮಗಳಿಗೆ / ಹಳ್ಳಿಗಳಿಗೆ ತೆರಳಿ ಸೇವೆ ಸಲ್ಲಿಸುವುದರ ಜೊತೆಗೆ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಪತ್ತೆ ಹೆಚ್ಚುವಿಕೆ ಮತ್ತು ಚಿಕಿತ್ಸೆಗಳನ್ನು ನೀಡಲಾಗುವುದು ಹಾಗೂ ನಿಗಧಿಪಡಿಸಲಾದ ಹಳ್ಳಿಗಳಲ್ಲಿ ಪ್ರಸವ ಪೂರ್ವ, ಹೆರಿಗೆ ಹಾಗೂ ಪ್ರಸವದ ನಂತರ ಬಾಣಂತಿಯರಿಗೆ ಅಗತ್ಯ ಸೇವೆಗಳು, ಲಸಿಕೆ ಕಾರ್ಯಕ್ರಮಗಳನ್ನು ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ.
ಈ ವಾಹನಗಳ ಮೂಲಕ ರಾಷ್ಟ್ರೀಯ ಮತ್ತು ರಾಜ್ಯದ ಆರೋಗ್ಯ ಕಾರ್ಯಕ್ರಮಗಳ ಕುರಿತು ಪ್ರಚಾರ, ಸಾರ್ವಜನಿಕರಿಗೆ ಐ.ಇ.ಸಿ ಸಾಮಾಗ್ರಿಗಳನ್ನು ವಿತರಣೆ, ಆರೋಗ್ಯದ ವಿಚಾರಗಳ ಸಮಾಲೋಚನೆ, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾದ ಬ್ಯಾನರ್ ಗಳು, ಪೋಸ್ಟರ್ ಗಳು, ಕರ ಪತ್ರ ಹಾಗೂ ಮೈಕಿಂಗ್ ವ್ಯವಸ್ಥೆಯ ಮೂಲಕ ಐ.ಇ.ಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನೂ ಕೂಡ ಹೊಂದಲಾಗಿದೆ.
ಆರೋಗ್ಯ ಕ್ಷೇತ್ರದ ಸುಧಾರಣೆಗೆ ಮತ್ತು ಸಮಾಜದ ಪ್ರತಿಯೊಬ್ಬ ನಾಗರೀಕರಿಗೂ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ರೂಪುಗೊಂಡ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳು ಹಾಗೂ ಆರೋಗ್ಯ ಸೇವೆಯಿಂದ ವಂಚಿತವಾಗಿರುವ ಪ್ರದೇಶಗಳಲ್ಲಿನ ಜನತೆಯ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆಗಳನ್ನು ಒದಗಿಸಲು 6 ಸಂಚಾರಿ ಆರೋಗ್ಯ ಘಟಕಗಳು ಮಂಜೂರಾಗಿದ್ದು, ಶೀಘ್ರದಲ್ಲೇ ಅವು ಕಾರ್ಯಾರಂಭ ಮಾಡಲಿವೆ. ಈ ಸಂಚಾರಿ ಘಟಕಗಳ ಮೂಲಕ ಆ ಪ್ರದೇಶಗಳ ಜನತೆಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿ, ಔಷಧಗಳನ್ನು ಮತ್ತು ಆರೋಗ್ಯ ಸಂಬಂಧಿತ ಇತರೇ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ವಿತರಿಸಲಾಗುವುದು.
– ಡಾ.ನಟರಾಜ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ, ಉತ್ತರ ಕನ್ನಡ ಜಿಲ್ಲೆ




