ಶಾಸಕರಿಗೆ 50 ಕೋಟಿ ಅನುದಾನ: ಸಿದ್ದರಾಮಯ್ಯ ಹೊಸ ತಂತ್ರ

9 months ago

ಬೆಂಗಳೂರು: ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಇಲ್ಲ ಮತ್ತು ನಾಯಕತ್ವ ಬದಲಾವಣೆ ವಿಷಯದ ಕುರಿತಾಗಿ ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಗಳು ತೀವ್ರಗೊಂಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರ ಓಲೈಕೆಗೆ ಮುಂದಾಗಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆದಿರುವ ಬೆನ್ನಲ್ಲೇ ಡಿಸಿಎಂ ಡಿ ಕೆ ಶಿವಕುಮಾರ್ ಬಳಿ, ಒಬ್ಬಿಬ್ಬರು ಶಾಸಕರು ಮಾತ್ರ ಇದ್ದಾರೆ. ಅಂತಹವರು ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ, ಶಾಸಕರನ್ನು ತಮ್ಮ ಬಳಿಯೇ ಹಿಡಿದಿಟ್ಟುಕೊಳ್ಳಲು ಅನುದಾನದ ಅಸ್ತ್ರ ಪ್ರಯೋಗಿಸಿದ್ದಾರೆ.

ಶಾಸಕರಾಗಿ ಆಯ್ಕೆಯಾಗಿ ಎರಡು ವರ್ಷ ಕಳೆದರೂ ಸಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅಳಲು ತೋಡಿಕೊಂಡ ಶಾಸಕರನ್ನೇ ತಮ್ಮವರನ್ನಾಗಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನ ನಡೆಸಿರುವುದು ಕುತೂಹಲ ಮೂಡಿಸಿದೆ.

ಇದಕ್ಕಾಗಿ ಅವರು ರಾಜಕೀಯ ತಂತ್ರಗಾರಿಕೆ ಹೆಣೆದಿದ್ದು ಪ್ರಸಕ್ತ ಸಾಲಿನ ಬಜೆಟ್ಟಿನಲ್ಲಿ ಪ್ರಕಟಿಸಿದ್ದ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿರುವುದಾಗಿ ಆದೇಶ ಹೊರಡಿಸಿದ್ದಾರೆ.

ಈ ಐವತ್ತು ಕೋಟಿ ರೂಪಾಯಿಯಲ್ಲಿ 37.50 ಕೋಟಿ ರೂಪಾಯಿಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶದ ರಸ್ತೆ ಹಾಗೂ ಒಳಚರಂಡಿ ನಿರ್ಮಿಸಲು ಬಳಸಬಹುದಾಗಿದೆ. ಉಳಿದಿರುವ 12.50 ಕೋಟಿ ರೂಪಾಯಿಗಳನ್ನು ಶಾಸಕರ ವಿವೇಚನಾಧಿಕಾರ ಬಳಸಿ ವೆಚ್ಚ ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಮತ್ತೊಂದು ಆದೇಶ ಹೊರಡಿಸಿದ್ದು ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆ ಮಾಡಿರುವ ಅನುದಾನವನ್ನು ಪಡೆದುಕೊಳ್ಳಲು ಶಾಸಕರು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಮತ್ತು ವಿಶೇಷ ಅಧಿಕಾರಿಯನ್ನು ಭೇಟಿ ಮಾಡಿ ಪತ್ರ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಈ ರೀತಿ ಪತ್ರ ಪಡೆದುಕೊಳ್ಳುವ ಶಾಸಕರು ಆನಂತರ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತಾವು ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಯ ಬಗ್ಗೆ ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅವರ ಅನುಮೋದನೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಈ ಆದೇಶದ ಮೂಲಕ ಮುಖ್ಯಮಂತ್ರಿಗಳು ಅನುದಾನ ಕೋರಿ ಬರುವ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರನ್ನು ತಮ್ಮ ಬಳಿ ಉಳಿಸಿಕೊಳ್ಳುವ ತಂತ್ರವಾಗಿದೆ. ಅನುದಾನ ಬೇಕಾಗಿರುವ ಶಾಸಕರು ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಕುರಿತಾಗಿ ಚಕಾರ ಎತ್ತುವುದಿಲ್ಲ ಎನ್ನುವುದು ಇದರ ಹಿಂದಿರುವ ಲೆಕ್ಕಾಚಾರವಾಗಿದೆ.

Leave a Reply