ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತಾಗಿ ಕಾಂಗ್ರೆಸ್ಸಿನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಅಧಿಕಾರ ಹಂಚಿಕೆ ಕುರಿತಾಗಿ ಯಾವುದೇ ರೀತಿಯಾದ ಒಪ್ಪಂದ ನಡೆದಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಇವರುಗಳೇ ಕುಳಿತು ಒಪ್ಪಂದ ಮಾಡಿಕೊಂಡರೆ ಅದನ್ನು ಕೇಳಲು ಸಾಧ್ಯವಿಲ್ಲ. ನಾಯಕತ್ವ ಬದಲಾವಣೆ ವಿಚಾರ ಇದ್ದರೆ ಅದು ಶಾಸಕಾಂಗ ಸಭೆಯಲ್ಲಿ ನಡೆಯಬೇಕು ಎಂದರು.
ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರು ಬದಲಾಯಿಸುವ ಪ್ರಸ್ತಾಪ ಬಂದರೆ ಅದು ಯಾಕೆ ಎಂದು ಹೈಕಮಾಂಡನ್ನು ಪ್ರಶ್ನಿಸುತ್ತೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯ ಸಮಯದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಿದೆ. ಆಗ ಇದು ಕೇವಲ ಎರಡೂವರೆ ವರ್ಷಗಳಿಗೆ ಮಾಡಿಕೊಂಡ ತೀರ್ಮಾನ ಎಂದು ಹೇಳಿಲ್ಲ. ಐದು ವರ್ಷಗಳ ಅವಧಿಗೆ ಮಾಡಿಕೊಂಡ ತೀರ್ಮಾನ ಇದಾಗಿದ್ದು, ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಇದೀಗ ಡಿ ಕೆ ಶಿವಕುಮಾರ್ ಅವರ ಆಪ್ತರು ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಶಿವಕುಮಾರ್ ಎಲ್ಲಿಯೂ ತಮಗೆ ಅಧಿಕಾರ ಹಸ್ತಾಂತರಿಸಬೇಕು ಎಂದು ಹೇಳುತ್ತಿಲ್ಲ ಎನ್ನುವುದು ಗಮನಾರ್ಹ. ಒಂದು ವೇಳೆ ಅವರ ಬೆಂಬಲಿಗರ ಒತ್ತಡಕ್ಕೆ ಮಣಿದು ಶಾಸಕಾಂಗ ಸಭೆ ಕರೆದು ಅಲ್ಲಿ ನಾಯಕತ್ವ ಬದಲಾವಣೆ ಮಾಡುತ್ತೇವೆ ಎಂದು ಹೇಳಿದರೆ ಇದು ಸಾಧ್ಯವಿಲ್ಲ ಎಂದರು.
ಈ ಬಗ್ಗೆ ಉಸ್ತುವಾರಿಗಳನ್ನು ಪ್ರಶ್ನೆ ಮಾಡುತ್ತೇನೆ. ಸಿದ್ದರಾಮಯ್ಯ ಅವರನ್ನು ಯಾಕೆ ಬದಲಾವಣೆ ಮಾಡಬೇಕು? ಅವರ ವಿರುದ್ಧ ಯಾವುದಾದರೂ ಭ್ರಷ್ಟಾಚಾರ ಆರೋಪಗಳಿವೆಯಾ? ಜನವಿರೋಧಿ ಕೆಲಸ ಮಾಡಿದ್ದಾರಾ ಎಂದು ಕೇಳುತ್ತೇನೆ ಎಂದರು.
ಆಗ ಏನಾದರೂ ಮಾತು ಕೊಟ್ಟಿದ್ದೇವೆ ಎಂದರೆ ಇದನ್ನು ಮೊದಲೇ ಯಾಕೆ ಹೇಳಿಲ್ಲ ಎಂದು ಹೇಳುತ್ತೇನೆ. ಮಾತು ಕೊಟ್ಟಿದ್ದೇವೆ ಅಗ್ರಿಮೆಂಟ್ ಮಾಡಿಕೊಂಡಿದ್ದೇವೆ ಎಂದರೆ ಮುಖ್ಯಮಂತ್ರಿ ಸ್ಥಾನ ಎನ್ನುವುದು ಗುತ್ತಿಗೆಯಾ ಎಂದು ಪ್ರಶ್ನಿಸುವುದಾಗಿ ತಿಳಿಸಿದರು.
ರಾಜ್ಯದ ಎಲ್ಲಾ ಸಮುದಾಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಇದ್ದಾರೆ. ಇತ್ತೀಚೆಗೆ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಅವರ ಹಣೆಗೆ ವಿಭೂತಿ ಹಚ್ಚಿ 5 ವರ್ಷ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಎಂದು ಆಶೀರ್ವಾದ ಮಾಡಿದ್ದಾರೆ. ಅದರಂತೆ ಉತ್ತಮವಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ತಮ್ಮ ಅವಧಿ ಪೂರ್ಣಗೊಳಿಸಬೇಕು ಎಂದರು.




