ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ 300 ಹುದ್ದೆ ಭರ್ತಿ: ಕೆ.ಎಚ್.ಮುನಿಯಪ್ಪ

3 years ago

#KHMuniappa #LegalMetrologyDepartment #recruitment

ಬೆಂಗಳೂರು: ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಮಂಜೂರಾಗಿದ್ದ 500 ಹುದ್ದೆಗಳ ಪೈಕಿ 300 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಖಾಲಿ ಇರುವ 300 ಹುದ್ದೆಗಳನ್ನು ಆರು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲಾಗುವುದು. ಕೆಪಿಎಸ್‍ಸಿ ಇಲ್ಲವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ಮಾಡಲಾಗುತ್ತದೆ ಎಂದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಇನ್‍ಸ್ಪೆಕ್ಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಬಡ್ತಿ ಕೂಡ ನೀಡಲಾಗುವುದು. 500 ಕೋಟಿ ರಾಜಸ್ವ ಸಂಗ್ರಹ ಮಾಡುವ ಗುರಿ ನಿಗದಿಪಡಿಸಲಾಗಿದೆ. ವಾರ್ಷಿಕ 100 ಕೋಟಿ ರೂ.ನಷ್ಟು ರಾಜಸ್ವವನ್ನು ಇಲಾಖೆ ಸಂಗ್ರಹಿಸುತ್ತಿತ್ತು ಎಂದು ಮಾಹಿತಿ ನೀಡಿದರು.

ಅಳತೆ ಮತ್ತು ತೂಕದಲ್ಲಿ ವಂಚನೆ ಮಾಡುವುದನ್ನು ತಪ್ಪಿಸಲು ಡಿಸ್‍ಪ್ಲೇ ಫಲಕಗಳನ್ನು ಅಳವಡಿಸಿ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಲಾಗುವುದು ಎಂದು ಹೇಳಿದರು.

ದಿನಸಿ ಅಂಗಡಿ, ಗಿರವಿ ಅಂಗಡಿ, ಪೆಟ್ರೋಲ್ ಬಂಕ್‍ಗಳಲ್ಲಿ ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸವಿದ್ದರೆ ಇಲಾಖೆ ಅಕಾರಿಗಳು ಕ್ರಮ ಕೈಗೊಂಡು ಗ್ರಾಹಕರಿಗೆ ನ್ಯಾಯ ಒದಗಿಸುತ್ತಾರೆ. ಇಲಾಖೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅತಿಹೆಚ್ಚು ಜಾಗೃತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯು 92 ಸ್ವಂತ ಕಚೇರಿಗಳನ್ನು ಹೊಂದಿದ್ದು, ಇನ್ನು 45 ಕಚೇರಿಗಳಿಗೆ ಸ್ವಂತ ಕಟ್ಟಡ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇ-ಮಾಪನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯವು ಮೊದಲನೆಯದಾಗಿದ್ದು, ಅದನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Leave a Reply