ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಪಟ್ಟಿಗೆ 2 ಹೆಸರು ಹೆಚ್ಛಳ: ಈಶ್ವರ ಖಂಡ್ರೆ

3 years ago

#names #single #use #plastic #free #city #list #EshwarKhandre

ಕಲ್ಬುರ್ಗಿ: ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯದ 5 ನಗರ ಅಥವಾ ಪಟ್ಟಣವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವುದಾಗಿ ಘೋಷಿಸಿದ್ದ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಇಂದು ಆ ಐದು ನಗರಗಳ ಪೈಕಿ 2 ನಗರಗಳ ಹೆಸರು ಘೋಷಣೆ ಮಾಡಿದ್ದಾರೆ.

ಕಲ್ಬುರ್ಗಿಯ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಜೂ.5ರಂದು ಘೋಷಿಸಿದಂತೆ, ಈ ವರ್ಷ 5 ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ, ಪಟ್ಟಣ ಮಾಡುವ ಸಂಕಲ್ಪ ಮಾಡಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲ್ಬುರ್ಗಿ ನಗರಗಳೂ ಸೇರಿವೆ ಎಂದು ತಿಳಿಸಿದರು.

ನಾನಕ್ ಝೀರಾ, ಬಂದೇ ನವಾಜ್ ದರ್ಗಾ, ಝರಣಿ ನರಸಿಂಹ ದೇವಾಲಯ, ಸಂತ ಪಾಲರ ಮೆಥಾಡಿಸ್ಟ್ ಚರ್ಚ್ ಇರುವ ಸರ್ವ ಜನಾಂಗದ ಶಾಂತಿಯ ತೋಟವಾದ ಬೀದರ್ ನಗರ,  ಐತಿಹಾಸಿಕ ನಗರಿ ಕಲ್ಬುರ್ಗಿಯನ್ನು ಪ್ರಥಮ ಹಂತದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲಾಗುವುದು. ಹಂತ ಹಂತವಾಗಿ ಉಳಿದ ನಗರಗಳನ್ನೂ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲಾಗುವುದು ಎಂದರು.

ದೊಡ್ಡ ಸವಾಲು: ಈ ಪ್ಲಾಸ್ಟಿಕ್ ನೀರಲ್ಲಿ ಕರಗುವುದಿಲ್ಲ. ಮಣ್ಣಲ್ಲಿ ಮಣ್ಣಾಗುವುದಿಲ್ಲ. ಜೈವಿಕವಾಗಿ ವಿಘಟನೆಯೂ ಆಗುವುದಿಲ್ಲ. ಭೂಮಿಯ ಒಡಲು ಸೇರಿ ವಿಷವಾಗುತ್ತಿದೆ. ಕಸದ ರಾಶಿಯಾಗಿ ದೊಡ್ಡ ಸಮಸ್ಯೆ ತರುತ್ತಿದೆ. ಏಕ  ಬಳಕೆ ಪ್ಲಾಸ್ಟಿಕ್ ನಲ್ಲಿ ಮನೆಯ ಕಸ ಎಲ್ಲ ಗಂಟು ಕಟ್ಟಿ ಜನ ಹೊರಗೆ ಎಸೆಯುತ್ತಿದ್ದಾರೆ. ಇದರಿಂದ ಮಳೆ ನೀರು ಚರಂಡಿಗಳು ಕಟ್ಟಿಕೊಂಡು ರಸ್ತೆಯಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಪ್ಲಾಸ್ಟಿಕ್ ಕವರ್ ಗಳಲ್ಲಿ ಉಳಿದ ಅನ್ನ, ಕತ್ತರಿಸಿದ ತರಕಾರಿ ತುಂಬಿ ಎಸೆಯುವ ಕಾರಣ, ಅದನ್ನು ತಿನ್ನುವ ದನಕರುಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರಿ. ಸಾವಿಗೀಡಾಗುತ್ತಿವೆ. ಪ್ಲಾಸ್ಟಿಕ್ ಕಸದ ರಾಶಿಗೆ ಬೆಂಕಿ ಹಚ್ಚುವ ದುರಭ್ಯಾಸವೂ ಕೆಲವರಿಗಿದೆ. ಇದರಿಂದ ವಿಷಕಾರಿ ಹೊಗೆ ಪರಿಸರ ಸೇರಿ ಆಸ್ತಮಾ, ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ. ಈ ತೀವ್ರತೆ ಅರಿತು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಕಲ್ಪನೆಯನ್ನು ಸಾಕಾರ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರಗಳಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಬಳಕೆ, ಮಾರಾಟ, ದಾಸ್ತಾನು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತದ ಸಹಕಾರದೊಂದಿಗೆ ಏಕ ಬಳಕೆ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲಾಗುವುದು ಎಂದರು.

ಹಸಿರು ವಲಯ ಕ್ರಾಂತಿಗೆ ಒತ್ತು: ಪ್ರಸಕ್ತ ವರ್ಷ 5 ಕೋಟಿ ಸಸಿ ನೆಟ್ಟು ಪೋಷಿಸುವ ಮೂಲಕ ರಾಜ್ಯದಲ್ಲಿ ಹಸಿರು ವ್ಯಾಪ್ತಿಯ ಕ್ರಾಂತಿ ಮಾಡಲು ನಿರ್ಧರಿಸಿರುವ ಅರಣ್ಯ ಇಲಾಖೆ, ಜುಲೈ 1ರಿಂದ ಆರಂಭವಾದ ವನಮಹೋತ್ಸವದ ಪ್ರಥಮ 6 ದಿನಗಳಲ್ಲಿ 68 ಲಕ್ಷ ಸಸಿಗಳನ್ನು ನೆಟ್ಟಿದೆ ಎಂದು ತಿಳಿಸಿದರು.

ವನಮಹೋತ್ಸವದ ಸಂದರ್ಭದಲ್ಲಿ ನೆಟ್ಟಿರುವ ಎಲ್ಲ ಸಸಿಗಳೂ ಬೇರೂರಿ ಬೆಳೆದು ಹೆಮ್ಮರವಾಗುವುದನ್ನು ಖಾತ್ರಿಪಡಿಸಿಕೊಳ್ಳುವ ದೊಡ್ಡ ಸವಾಲು ಇದ್ದು, ಜಿಯೋ ಟ್ಯಾಗ್, ಆಡಿಟ್ ಮೂಲಕ ಇದನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗುವುದು. ವರ್ಷವಿಡೀ ಗಿಡ ನೆಡುವ ಅಭಿಯಾನ ಮುಂದುವರಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ವಿಜಯನಗರ ಹೊರತುಪಡಿಸಿ ಉಳಿದ 5 ಜಿಲ್ಲೆಗಳಲ್ಲಿ ಅರಣ್ಯ ವ್ಯಾಪ್ತಿ ಶೇ.10ಕ್ಕಿ ಕಡಿಮೆ ಇದೆ. ಇಲ್ಲಿ ಹಸಿರು ವಲಯ ವ್ಯಾಪ್ತಿ ಹೆಚ್ಚಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಎತ್ತರದ ಗಿಡಗಳನ್ನು ಹಚ್ಚಿ, ಹಸಿರೀಕರಣ ಹೆಚ್ಚಿಸಲಾಗುವುದು ಎಂದರು.

ವಿವಿಧ ಜಿಲ್ಲೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಜಿಲ್ಲಾಧಿಕಾರಿ, ಜಿ‌ಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯು ಸಸಿಗಳನ್ನು ಎಲ್ಲಿ ನೆಡಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕು. ಜೊತೆಗೆ, ಕಾಲ ಕಾಲಕ್ಕೆ ಸಸಿಗಳನ್ನು ಸಂರಕ್ಷಿಸಲು ಗಮನ ಹರಿಸಬೇಕು. ಹೆದ್ದಾರಿಯ ಪಕ್ಕದಲ್ಲಿ ಲಕ್ಷಾಂತರ ಸಸಿಗಳನ್ನು ನೆಡಲು ಅವಕಾಶವಿದೆ. ಇದರ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗುವುದು ಎಂದರು.

ರಾಜ್ಯದ ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಆನೆಗಳು ವಸತಿ ಪ್ರದೇಶಗಳಿಗೆ ನುಗ್ಗಿ ಮಾನವ ಜೀವಕ್ಕೆ ಹಾನಿ ಮಾಡುತ್ತಿದ್ದು, ಇದನ್ನು ತಡೆಗಟ್ಟಲು ರಾಜ್ಯದಲ್ಲಿ 641 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪಣ್ಣ ಕಮ್ಮಕ್ನೂರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply