ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ

3 years ago

#Good #news #coconut #farmers #msp

ಬೆಂಗಳೂರು: ಬೆಲೆ ಕುಸಿತದಿಂದ ಕಂಗೆಟ್ಟಿರುವ ಕೊಬ್ಬರಿ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ಕೊಬ್ಬರಿಗೆ ಕೇಂದ್ರಸರ್ಕಾರ ನಿಗದಿ ಪಡಿಸಿರುವ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರ ಪ್ರತೀ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 1,250 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಗೆ ತಿಳಿಸಿದರು.

ಕೊಬ್ಬರಿ ಬೆಲೆ ಕುಸಿತ ಕುರಿತಂತೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಇಂದಿನಿಂದ ಜಾರಿಯಾಗುವಂತೆ ಪ್ರತಿ ಕ್ವಿಂಟಾಲ್  ಕೊಬ್ಬರಿ ಖರೀದಿಗೆ 1,250 ರೂ. ಪ್ರೋತ್ಸಾಹ ಧನ ನೀಡಲಾಗುವುದು. ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮಾರಾಟ ಮಾಡಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು ಪ್ರತೀ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 11,750 ರೂ. ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದರ ಜೊತೆಗೆ ರಾಜ್ಯಸರ್ಕಾರ 1,250 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದರು.

2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 6.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 26.06 ಲಕ್ಷ ಮೆಟ್ರಿಕ್ ಟನ್ ತೆಂಗು ಹಾಗೂ ಕೊಬ್ಬರಿ ಉತ್ಪಾದನೆಯಾಗಿದೆ. ಬೆಂಬಲ ಬೆಲೆ ನೀತಿಯಡಿ ಕೊಬ್ಬರಿ ಖರೀದಿಗೆ 37,632 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆಯವರೆಗೆ 31,641 ರೈತರು ಪ್ರಯೋಜನ ಪಡೆದಿದ್ದಾರೆ. ಜುಲೈ 26ರವರೆಗೂ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ ಎಂದರು.

ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 7,700 ರಿಂದ 8,020 ರೂ.ವರೆಗೆ ಮಾರಾಟವಾಗುತ್ತಿದೆ. ರಾಜ್ಯ ಸರ್ಕಾರವು ಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಖರೀದಿ ಅವಧಿ ವಿಸ್ತರಣೆಗೆ ಕೇಂದ್ರಸರ್ಕಾರವನ್ನು ಕೋರಿದೆ ಎಂದು ಹೇಳಿದರು.

ಕೇಂದ್ರಸರ್ಕಾರ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಅವ ವಿಸ್ತರಣೆಗೆ ಅನುಮತಿ ನೀಡಿದ ಬಳಿಕ ನೋಂದಾಯಿಸುವವರಿಗೂ ಪ್ರೋತ್ಸಾಹ ಧನ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

Leave a Reply