
ಬೆಳಗಾವಿ: ನಗರದಲ್ಲಿ ಹೆಚ್ಚುತ್ತಿರುವ ಚೂರಿ ಇರಿತ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರದರ್ಶನ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ರಚಿಸಲಾದ ಆ್ಯಂಟಿ ಸ್ಟಾಬಿಂಗ್ ಸ್ವಾಡ್ ವಿಶೇಷ ಕಾರ್ಯಾಚರಣೆ ನಡೆಸಿ, ತಲ್ವಾರ ಮತ್ತು ಚಾಕು ಇಟ್ಟುಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಮಾಳಮಾರುತಿ ಹಾಗೂ ಖಡೇಬಜಾರ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಆರೋಪಿಗಳಾದ ಅಮೋಲ್ ವಾಘ್ (30) ಹಾಗೂ ಶಶಿಕಾಂತ ಅರಕೇರಿ (27) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಅಮೋಲ್ ವಾಘ್‌ನಿಂದ ಒಂದು ತಲ್ವಾರ ಹಾಗೂ ಶಶಿಕಾಂತ ಅರಕೇರಿಯಿಂದ ಚಾಕುವನ್ನು ಜಪ್ತಿ ಮಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಲು ಆರೋಪಿಗಳು ಯತ್ನಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣದ ಹಿನ್ನೆಲೆ ನಗರದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಇದೇ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ತಪಾಸಣೆ ಮತ್ತು ನಿಗಾವಹಿಸಲು ಆ್ಯಂಟಿ ಸ್ಟಾಬಿಂಗ್ ಸ್ವಾಡ್ ರಚಿಸಲಾಗಿದೆ.
ನಗರದಲ್ಲಿ ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರ ನಿರ್ದೇಶನದಂತೆ ಈ ವಿಶೇಷ ಸ್ವಾಡ್ ಕಾರ್ಯನಿರ್ವಹಿಸುತ್ತಿದೆ.

