ಸ್ನೇಹಿತರ ಚಾಲೆಂಜ್ ಸ್ವೀಕರಿಸಿ ಪೊಲೀಸ್ ಅತಿಥಿಯಾದ ಯುವಕ

2 years ago

ಬೆಂಗಳೂರು: ಸ್ನೇಹಿತರ ಸವಾಲು ಸ್ವೀಕರಿಸಿ‌ ಹೊಟೇಲ್‌ನಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದ ಯುವಕನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಗ್ಯಾಸ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಹಂಪಿನಗರದ ಚಂದನ್ ಬಂಧಿತ ಆರೋಪಿಯಾಗಿದ್ದು, ಈತ ಸ್ನೇಹಿತರೊಬ್ಬರು ಸವಾಲು ಹಾಕಿದ್ದರಿಂದ ಮಹಿಳೆಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕಳೆದ ಡಿಸೆಂಬರ್ 30ರಂದು ಸಂಜೆ 7:30ರ ಸುಮಾರಿಗೆ ಚಂದನ್ ಮತ್ತು ಆತನ ಇಬ್ಬರು ಸ್ನೇಹಿತರು ಆರ್‌ಪಿಸಿ ಲೇಔಟ್‌ನಲ್ಲಿರುವ ಹೋಟೆಲ್‌ಗೆ ಬಂದು ಊಟ ಮುಗಿಸಿ ಸ್ವಲ್ಪ ಸಮಯ ಕಳೆಯುತ್ತಿದ್ದರು.

ಆವೇಳೆಯಲ್ಲಿ ಕ್ಯಾಶ್ ಕೌಂಟರ್ ಬಳಿ ಮಹಿಳಾ ಗ್ರಾಹಕರೊಬ್ಬರು ಇದ್ದರು. ಆರೋಪಿ ಚಂದನ್ ಮಹಿಳೆಯ ಬಳಿ ಬಂದು ಹಿಂಬದಿಯಿಂದ ಆಕೆಯನ್ನು ಮುಟ್ಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಂದನ್ ಆಕೆಯ ಹಿಂಬದಿ ಮುಟ್ಟಿದ ನಂತರ ಆತನ ಇಬ್ಬರು ಸ್ನೇಹಿತರು ಶಿಳ್ಳೆ ಹೊಡೆದಿದ್ದರು. ಈ ಕೃತ್ಯಕ್ಕೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ಆರಂಭಿಸಿದಾಗ ಹೋಟೆಲ್‌ನಲ್ಲಿದ್ದ ನಾಗರಿಕರು ನೆರೆದಿದ್ದರು.

ಜನ ಸೇರಿದ್ದರಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆಯ ದೃಶ್ಯ ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಮಾಲೀಕರೊಂದಿಗೆ ಸಮಾಲೋಚಿಸಿದ ನಂತರ ಘಟನೆಯ ಪ್ರತ್ಯಕ್ಷದರ್ಶಿ ಮಹಿಳಾ ಕ್ಯಾಷಿಯರ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಆಧಾರದಡಿಯಲ್ಲಿ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ದೌರ್ಜನ್ಯ ನಡೆಸುವ ಸಂಚಿಗೆ ಸಂಬಂಧಿಸಿದ್ದು) ಮತ್ತು 509 (ಲೈಂಗಿಕ ಕಿರುಕುಳ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಚಂದನ್, ತನ್ನ ಸ್ನೇಹಿತರೊಬ್ಬರು ಮಹಿಳೆಯನ್ನು ಮುಟ್ಟುವಂತೆ ಸವಾಲು ಹಾಕಿದ್ದ. ಅದನ್ನು ಒಪ್ಪಿಕೊಂಡು ಅಪರಾಧ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

Leave a Reply