ಬೆಂಗಳೂರು: ನಿಗದಿತ ಆದಾಯ ಮೂಲ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 40ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.
ಸರ್ಕಾರಿ ನೌಕರರು ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಕುರಿತ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 10 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಸಂಬಂಧಿಗಳಿಗೂ ಬೆಳ್ಳಂಬೆಳಗ್ಗೆ ಅಚ್ಚರಿ ನೀಡಿದರು.
ಕೊಪ್ಪಳ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಜೆಸ್ಕಾಂನಲ್ಲಿ ಎಂಜಿನಿಯರ್ ಆಗಿರುವ ಸುರೇಶ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಲೋಕಾ ದಾಳಿ ನಡೆದಿದೆ.
ಮೈಸೂರಿನಲ್ಲಿ ಮುಡಾ ಎಇಇ ಯಜ್ಞೇಂದ್ರ ಅವರ, ಜೆಪಿ ನಗರದ ಮನೆ, ವಿಜಯ ನಗರದ ಫ್ಲಾಟ್ ಹಾಗೂ ಕೆ.ಆರ್.ನಗರದ ಅಣ್ಣನ ಮನೆಯಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗಿದೆ.
ಮಂಡ್ಯದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಹರ್ಷ ಅವರ ಕಚೇರಿ, ಮಂಡ್ಯದಲ್ಲಿರುವ ಮನೆ ಹಾಗೂ ಕಲ್ಲಹಳ್ಳಿಯಲ್ಲಿರುವ ಮಾವನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮನೆಯಿದ್ದು, ಅಲ್ಲೂ ಪರಿಶೀಲನೆ ನಡೆಸಲಾಗಿದೆ. ನಾಗಮಂಗಲದಲ್ಲಿರುವ ಫಾರ್ಮ್ಹೌಪಸ್ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಹಾಸನದಲ್ಲಿ ಆಹಾರ ನೀರಿಕ್ಷಕ ಜಗನ್ನಾಥ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಇವರ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಹಾಗೂ ಕಚೇರಿ ಮೇಲೂ ದಾಳಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಕಾರಿಯಾಗಿರುವ ನೇತ್ರಾವತಿ ಅವರ ಮನೆ, ಕಚೇರಿ ಮೇಲೆ ದಾಳಿ ನಡೆದಿದ್ದು, 5 ಲಕ್ಷ ನಗದು ಹಣ, ವಿವಿಧೆಡೆ ಚರ-ಚಿರ ಆಸ್ತಿ, 900 ಗ್ರಾಂ. ಚಿನ್ನಾಭರಣ, ಒಂದು ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.
ತುಮಕೂರಿನಲ್ಲೂ ಕೆಆರ್ಐ ಡಿಎಲ್ನದಲ್ಲಿ ಸಹಾಯಕ ಎಂಜಿನಿಯರ್ ಹನುಮಂತರಾಯಪ್ಪ ಅವರ ಶಿರಾ ಗೇಟ್ ಬಳಿಯ 80 ಅಡಿ ರಸ್ತೆಯಲ್ಲಿರುವ ಮನೆ ಮೇಲೆ ಒಟ್ಟು 14 ಜನರ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ನಡೆಯಿತು.
ಮಂಗಳೂರಿನಲ್ಲಿ ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಶಾಂತಕುಮಾರ್ ಅವರ ಅತ್ತಾವರದಲ್ಲಿರುವ ಕಚೇರಿ, ಮನೆ ಮೇಲೆ ಲೋಕಾ ದಾಳಿ ನಡೆದಿದ್ದು, ನಗದು, ಚಿನ್ನಾಭರಣ ಪತ್ತೆಯಾಗಿವೆ. ಬೆಂಗಳೂರಿನಲ್ಲೂ ಇರುವ ಅವರ ಮನೆ ಇರುವುದು ಗೊತ್ತಾಗಿದೆ. ಹಲವೆಡೆ ನಿವೇಶನ ಹಾಗೂ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿರುವುದು ಕಂಡುಬಂದಿದೆ. ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.




