ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಪ್ತ ಸಹಾಯಕ ಎಂದು ಹೇಳಿಕೊಂಡು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮ್ಯಾನೇಜರ್ಗೆ ವಂಚಿಸಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮಂತ್ರಿ ಅಷ್ಟೇ ಅಲ್ಲ, ತಿರುಪತಿಯಲ್ಲಿ ವಿಶೇಷ ಪ್ರಭಾವ ಹೊಂದಿದ್ದಾರೆ. ಹೀಗಾಗಿ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೆ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದೇವರ ವಿಶೇಷ ದರ್ಶನ ಮಾಡಿಸಿಕೊಡುತ್ತೇನೆ ಎಂದು ಹೇಳಿ ಎಂ.ಎಸ್.ಧೋನಿ ಮ್ಯಾನೇಜರ್ ಸ್ವಾಮಿನಾಥನ್ ಗೆ 6.50 ಲಕ್ಷ ರೂ ವಂಚಿಸಲಾಗಿದೆ.
ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ, ಐಎಎಸ್ ಅಧಿಕಾರಿ. ತಿರುಪತಿಯಲ್ಲಿ 12 ಜನರಿಗೆ ದೇವರ ವಿಶೇಷ ದರ್ಶನ ಮಾಡಿಸುತ್ತೇವೆ, ರೂಮ್ ವ್ಯವಸ್ಥೆ ಇರುತ್ತದೆ. ಪ್ರೋಟೋಕಾಲ್ ಮೂಲಕ ಯಾರನ್ನಾದರೂ ಕಳಿಸುವ ಅಧಿಕಾರ ತನಗಿದೆ ಎಂದು ಹೇಳಿ ವಂಚನೆ ಮಾಡಿದ್ದಾನೆ.
ಸ್ನೇಹಿತರ ಕುಟುಂಬವನ್ನು ಕಳಿಸುವ ನಿಟ್ಟಿನಲ್ಲಿ 3 ಲಕ್ಷ ರೂ.ಗಳನ್ನು ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಅವರು ಪೋನ್ ಪೇ ಮಾಡಿದ್ದರು. ಸಾಯಿ ಟ್ರಸ್ಟ್ ಹೆಸರಿಗೆ ಮೂರು ಲಕ್ಷ ಹಣ ಪಡೆದಿರುವ ಆರೋಪವಿದೆ. ಹಣ ಪಡೆದ ನಂತರ ತಿರುಪತಿಯಲ್ಲಿ ದರ್ಶನವೂ ಇಲ್ಲ. ಪೂಜೆಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಹಣ ಹಿಂತಿರುಗಿಸುವಂತೆ ಮಾಡಿದ ಮನವಿಗೂ ಪ್ರತಿಕ್ರಿಯೆ ಇಲ್ಲ. ಈ ಹಿನ್ನೆಲೆಯಲ್ಲಿ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಅವರು ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.




