ಎನ್.ಎಸ್‌.ಶಂಕರ್ ನಿರ್ದೇಶನದ ಸಿನಿಮಾಗೆ ನೀವೂ ನಿರ್ಮಾಪಕರಾಗಿ

4 years ago

ಆತ್ಮೀಯರೇ,
ನಿಮ್ಮೊಂದಿಗೆ ಹಂಚಿಕೊಳ್ಳಬೇಕಾದ ಒಂದೆರಡು ಸಂಗತಿಗಳಿವೆ.
‘ಈಗ…’ ಎಂಬ ಸಮೂಹ ಬಂಡವಾಳದ ಕಥಾಗುಚ್ಛ- ಆ ಕನಸು ಮೂಡಿದ್ದು ಹೋದ ವರ್ಷವೇ ಆದರೂ, ನನಸಾಗತೊಡಗಿದ್ದು ಈ ವರ್ಷವೇ. ಗೆಳೆಯರ ಮುಂದೆ ಈ ಆಲೋಚನೆಯನ್ನು ಹಂಚಿಕೊಂಡು ಅವರೆಲ್ಲ ಪ್ರೋತ್ಸಾಹಕರ ಪ್ರತಿಕ್ರಿಯೆ ತೋರಿಸಿದರೂ, ಹಣ ಹೂಡಲು ಮುಂದೆ ಬಂದವರು ಹೆಚ್ಚು ಜನರಲ್ಲ. ಬಂದವರೂ ನಿಧಾನಕ್ಕೆ ಒಬ್ಬೊಬ್ಬರಾಗಿ….. ಹನಿಗೂಡಿದರೆ ಹಳ್ಳ!
ಅಂತೂ ಆ ಹನಿ ಹನಿ- ಹಳ್ಳವನ್ನೇ ನೆಚ್ಚಿಕೊಂಡು ಮೊದಲ ಕತೆ- ಪ್ರತಿಭಾ ನಂದಕುಮಾರರ ‘ಅರುಂಧತಿ’ಯನ್ನು ಚಿತ್ರಿಸುವ ಸಾಹಸಕ್ಕೆ ಕೈ ಹಾಕಿದ್ದು ಜೂನ್ 13ರಂದು. ಶೂಟಿಂಗ್ ಮುಗಿದಿದ್ದು ಜುಲೈ 9ಕ್ಕೆ. ಅಂದರೆ ಅಷ್ಟೂ ದಿನ ಚಿತ್ರೀಕರಣ ಮಾಡಿದೆವು ಅಂತ ಅಲ್ಲ, ಒಟ್ಟು ಶೂಟಿಂಗ್ ನಡೆದಿದ್ದು ಎಂಟು ದಿನ. ಸಂಕಲನವೆಲ್ಲ ಮುಗಿದ ಮೇಲೆ ಗೊತ್ತಾಗಿದ್ದು- ಆ ಎಂಟೇ ದಿನಗಳಲ್ಲಿ ನಾವು ಚಿತ್ರದ ಮೊದಲ ಅರ್ಧದಷ್ಟು ಪೂರೈಸಿದ್ದೇವೆ; ಮತ್ತು ಮಿಕ್ಕ ಎರಡು ಕತೆಗಳು ಉತ್ತರಾರ್ಧದಲ್ಲಿ ಕೂರಬೇಕಿವೆ….! (ಇಷ್ಟು ಅವಧಿ ಚಿತ್ರಿಸಲು ಸಾಮಾನ್ಯವಾಗಿ ಇಪ್ಪತ್ತು ದಿನಗಳಿಗೂ ಹೆಚ್ಚು ಸಮಯ ಹಿಡಿಯುತ್ತದೆ.)


ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ.
ಒಂದು ಕತೆಯ ಕೆಲಸ ಮುಗಿದಿದೆ. (ಶೂಟಿಂಗಿನ ಒಂದೆರಡು ಫೋಟೋಗಳೂ ಇಲ್ಲಿವೆ.) ಇನ್ನೆರಡು ಕತೆಗಳ ಕೆಲಸ ಈಗ ಆರಂಭವಾಗಬೇಕಿದೆ. ಯಾಕೆಂದರೆ ಇದೇ ವರ್ಷದ ಡಿಸೆಂಬರ್ ಒಳಗೆ – ಶೂಟಿಂಗ್- ಪೋಸ್ಟ್ ಪ್ರೊಡಕ್ಷನ್- ಎಲ್ಲ ಕೆಲಸ ಮುಗಿದು ಸೆನ್ಸಾರ್ ಆಗದೆ ಹೋದರೆ ಇಡೀ ಸಿನಿಮಾ ಯೋಜನೆ ಮುಂದಿನ ವರ್ಷದ ಲೆಕ್ಕಕ್ಕೆ ಸೇರಿಹೋಗುತ್ತೆ….! ಇದೀಗ ಪಿ. ಲಂಕೇಶರ ಮನೋಜ್ಞ ಕತೆ ‘ಮುಟ್ಟಿಸಿಕೊಂಡವನು’ ಚಿತ್ರೀಕರಣವನ್ನು ಈ ತಿಂಗಳ (ಸೆಪ್ಟೆಂಬರ್) ಕೊನೆಗೆ ಪ್ರಾರಂಭಿಸಲೇಬೇಕಿದೆ. ನಮಗೆ ಬೇಕಾದ ಕಲಾವಿದರು ಆಗ ಮಾತ್ರ ಲಭ್ಯವಿದ್ದಾರೆ. ಮುಂಚೆಯೂ ಇಲ್ಲ, ತಡವಾದರೂ ಇಲ್ಲ.


ಅದು ಮುಗಿಯುತ್ತಿದ್ದಂತೆಯೇ ಹೆಚ್ಚು ತಡ ಮಾಡದೆ ಅಕ್ಟೋಬರ್ ಕೊನೆಯಲ್ಲಿ ಪಿ. ಮಹಮ್ಮದರ ‘ಡಿಸೆಂಬರ್ 6’ ಕತೆಗೆ ಕೈ ಹಾಕಬೇಕಿದೆ. ಈ ಎರಡು ಕತೆಗಳ ಚಿತ್ರೀಕರಣಕ್ಕಾಗಿ ಈಗ ತುರ್ತಾಗಿ ಬಂಡವಾಳ ಬೇಕಾಗಿದೆ! ಈವರೆಗೆ ಸಂಗ್ರಹವಾದದ್ದೆಲ್ಲ ‘ಅರುಂಧತಿ’ ಕತೆಗೇ ಖರ್ಚಾಗಿಹೋಗಿದೆ. (ನಾವೇನೂ ದುಂದು ವೆಚ್ಚ ಮಾಡಿಲ್ಲವೆಂದೂ, ಪೈಸೆ ಪೈಸೆಯನ್ನೂ ಅತ್ಯಂತ ಜಾಗರೂಕತೆಯಿಂದ ಯೋಜನಾಬದ್ಧವಾಗಿ ವಿನಿಯೋಗಿಸಿದ್ದೇವೆ ಎಂದೂ ಪ್ರಾಮಾಣಿಕವಾಗಿ ಘೋಷಿಸಬಲ್ಲೆ.)
ಅದಕ್ಕೇ ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ.

ನಾನು ಮೊದಲಿಗೆ ಆಸಕ್ತರಿಗೆ ಹಂಚಲೆಂದು ಒಂದು ಬ್ರೋಷರ್ ಸಿದ್ಧಪಡಿಸಿದ್ದೆ. ಈಗ ಈವರೆಗಿನ ಬೆಳವಣಿಗೆಯನ್ನು ವಿವರಿಸಿ ಮತ್ತೊಂದು ಫೋಲ್ಡರ್ ಸಿದ್ಧಪಡಿಸಿದ್ದೇನೆ. ಆ ಎರಡೂ ಬ್ರೋಷರ್ ಗಳನ್ನು ಇಲ್ಲಿ ನಿಮ್ಮ ಅವಗಾಹನೆಗೆ ನೀಡಿದ್ದೇನೆ. ವಿವರಗಳೆಲ್ಲ ಆ ಫೋಲ್ಡರುಗಳಲ್ಲಿವೆ. ವಿಶ್ವ ಮಾರುಕಟ್ಟೆಯನ್ನು ಮುಟ್ಟುವ ಹಂಬಲದ ಈ ಅರ್ಥಪೂರ್ಣ ಸಾಹಸದಲ್ಲಿ ಭಾಗಿಯಾಗಬಯಸುವವರು- ಅಂದರೆ ಹೂಡಿಕೆ ಮಾಡುವ ಆಸಕ್ತಿ, ಸಾಮರ್ಥ್ಯಗಳಿದ್ದವರು ದಯವಿಟ್ಟು ನನಗೆ ಮೆಸೇಜ್ ಮಾಡಿ.
ಗಮನಿಸಿ: ಹೂಡಿಕೆ- ಕನಿಷ್ಠ ಒಂದು ಲಕ್ಷ ರೂಪಾಯಿ, ಗರಿಷ್ಠ ಐದು ಲಕ್ಷ ರೂಪಾಯಿ. ನಿಮ್ಮ ಬಳಗದಲ್ಲಿ ಆಸಕ್ತರು ಯಾರಾದರೂ ಇದ್ದಲ್ಲಿ, ಅವರಿಗೂ ತಿಳಿಸಿರಿ.
ಪ್ಲೀಸ್!

ಎನ್.ಎಸ್.ಶಂಕರ್, ಪತ್ರಕರ್ತ, ನಿರ್ದೇಶಕ, ಅನುವಾದಕ

Leave a Reply