ಜನ್ಮದಿನದಂದು ಹೊಸ ನಿರ್ಮಾಣ ಸಂಸ್ಥೆ ಘೋಷಿಸಿದ ಡಾಲಿ ಧನಂಜಯ

4 years ago

ಬೆಂಗಳೂರು: ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ ತಮ್ಮ ಜನ್ಮದಿನದಂದು ಚಂದನವನಕ್ಕೆ ಹೊಸದೊಂದು ನಿರ್ಮಾಣ ಸಂಸ್ಥೆಯನ್ನು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು, ಹೊಸ ಸಾಹಸಕ್ಕೆ ಮುನ್ನಡಿ ಇಟ್ಟಿದ್ದಾರೆ.

ಡಾಲಿ ಪಿಕ್ಚರ್ಸ್ ಹೆಸರಿನಲ್ಲಿ ಹೊಸ ನಿರ್ಮಾಣ ಸಂಸ್ಥೆಯ ಘೋಷಣೆಯಾಗಿದ್ದು, ಧನಂಜಯರವರು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಒಂದು ಹಿಡಿಯಷ್ಟು ಆಸೆ ಮತ್ತು ಬೆಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟವರು. ಒಂದೇ ಒಂದು ಪಾತ್ರ ದಕ್ಕಿಸಿಕೊಳ್ಳಲೂ ಬಹಳಷ್ಟು ಕಸರತ್ತು ಪಡಬೇಕಾದ ಕಾಲವಿತ್ತು. ಅನೇಕ ತಡೆಗೋಡೆಗಳ ಅಡಚಣೆಗಳನ್ನು ದಾಟಿ ಸಾಲದ ಅವರ ಪಯಣ ಕರುನಾಡಿಗೆ ತಿಳಿಯದ ಕಥೆಯೇನಲ್ಲ, ಅವರ ಅಷ್ಟೂ ಪ್ರಯತ್ನಗಳ ಸಾರ್ಥಕತೆ ದೊರಕಿದ್ದು ‘ಡಾಲಿ’ ಪಾತ್ರಕ್ಕೆ ಸಿಕ್ಕಿದ ಜನಮನ್ನಣೆ ಹಾಗೂ, ‘ನಟರಾಕ್ಷಸ’ ಎಂಬ ಬಿರುದಿನಲ್ಲಿ ಎಂದು ಡಾಲಿ ಪಿಕ್ಚರ್ಸ್ ಹೇಳಿದೆ.

ಹೀಗಾಗಿ ಹೊಸಬರ ಆರಂಭದ ಕಲ್ಲುಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದೆಂದು ಸ್ವತಃ ಆ ದಾರಿಯಲ್ಲಿ ನಡೆದು ಬಂದಿರುವ ‘ಡಾಲಿ’ ಧನಂಜಯವರ ಆಲೋಚನೆಯೇ ಈ ಘೋಷಣೆಗೆ ಹಿನ್ನೆಲೆ. ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಈ ಮೂಲಕ ಘೋಷಿಸುತ್ತಿದ್ದೇವೆ ಎಂದಿದೆ.

ನಮ್ಮನ್ನು ಇಷ್ಟು ವರ್ಷ ಕೈ ಹಿಡಿದು ನಡೆಸಿದ ಹಾಗೆ ಇನ್ನು ಮುಂದೆ ಕೂಡ ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೀತಿ ವಿಶ್ವಾಸ ಹಾರೈಕೆಗಳಿರಲಿ ಎಂದು ಬಯಸುತ್ತೇವೆ ಎಂದು ಹೇಳಿದೆ.

Leave a Reply