ವಿಶ್ವ ದಾಖಲೆ ಸಾಧಕ ನಿರಂಜನ್ ಶೆಟ್ಟಿ ತಲ್ಲೂರ್ ನಿರ್ಮಾಣದ ಇನಾಮ್ದಾರ್ ಚಿತ್ರ ಬಿಡಗುಡೆಗೆ ಕ್ಷಣಗಣನೆ

4 years ago

ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಎರಡನೇ ಚಿತ್ರ ಬಿಡುಗಡೆಗೆ ಸಿದ್ಧತೆ

ಹಳಬರು, ಹೊಸಬರ ಸಮ್ಮಿಶ್ರಣವಾಗಿದೆ ವರ್ಣಭೇದದ ಕತೆ

ವಿಶಿಷ್ಟ ಕಥಾಹಂದರವೇ ಸಿನಿಮಾದ ಜೀವಾಳ

 

ಅದ್ದೂರಿ ಪತ್ರಿಕಾಗೋಷ್ಠಿ ಮೂಲಕ ಪೋಸ್ಟರ್ ರಿಲೀಸ್ ಮಾಡಿ ಚಿತ್ರೀಕರಣಕ್ಕೆ ತೊಡಗಿದ್ದ ಇನಾಮ್ದಾರ್ ಚಿತ್ರ ತಂಡ ಕುಂಬಳಕಾಯಿ ಹೊಡೆದು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಬರಲು ಸಿದ್ಧತೆ ನಡೆಸಿದೆ‌. ಕರಾವಳಿಯ ಕನಸು ಕಂಗಳ ನಟ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಬಹಳಷ್ಟು ಇಷ್ಟಪಟ್ಟು ಸಿದ್ಧಪಡಿಸಿದ ಕಥೆಯನ್ನು ತೆರೆಯ ಮೇಲೆ ತರುವ ನಿಟ್ಟಿನಲ್ಲಿ 5 ತಿಂಗಳ ಕಾಲ ಬಯಲು ಸೀಮೆಯಿಂದ ಪಶ್ಚಿಮ ಘಟ್ಟದ ತಪ್ಪಲಿನವರೆಗೆ ಚಿತ್ರತಂಡವನ್ನು ಕೊಂಡೊಯ್ದು ಸಾಕಷ್ಟು ಶ್ರಮವಹಿಸಿ ಚಿತ್ರವನ್ನು ಪೂರೈಸಲಾಗಿದೆ.

ನಿರ್ದೇಶಕರ ಆಸೆಗೆ ಮತ್ತು ಶ್ರಮಕ್ಕೆ ಪೂರಕವಾಗಿ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರ್ ಸಾಥ್ ನೀಡುವುದರ ಜೊತೆಗೆ 24/7 ನಿರ್ದೇಶಕರ ಬೆನ್ನೆಲುಬಾಗಿ ನಿಂತಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ಮೂಲತಃ ಯೋಗ ಪಟುವಾಗಿರುವ ನಿರಂಜನ್ ಶೆಟ್ಟಿ ತಲ್ಲೂರು ಈಗಾಗಲೆ ತಮ್ಮ ಅದ್ಬುತ ಯೋಗ ಭಂಗಿಗಳ‌ ಮೂಲಕ ವಿಶ್ವ ದಾಖಲೆ ಮಾಡಿದ್ದು, ಹೊಸ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ, ಹೊಸತನಕ್ಕೆ ಹಾರೈಸುವ ಅದ್ಭುತ ವ್ಯಕ್ತಿ ಎನ್ನುವುದು ಚಿತ್ರ ತಂಡದ ಅಭಿಪ್ರಾಯವಾಗಿದೆ.

ಬಯಲುಸೀಮೆಯ ಒಂದು ಜನಾಂಗ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಇನ್ನೊಂದು ಜನಾಂಗದ ನಡುವೆ ನಡೆಯುವ ವರ್ಣಭೇದದ ಕಥಾಹಂದರವನ್ನು ಚಿತ್ರ ಹೊಂದಿದೆ. ಚಿತ್ರದುದ್ದಕ್ಕೂ ಪಶ್ಚಿಮ ಘಟ್ಟದ ತಪ್ಪಲಿನ ಸೌಂದರ್ಯ ಕಾಣಬಹುದಾಗಿದ್ದು, ಬಯಲು ಸೀಮೆಯ ಸೊಬಗು ಚಿತ್ರರಸಿಕರಿಗೆ ಮೆಚ್ಚಿಗೆಯಾಗುವ ನಿರೀಕ್ಷೆ ಇದೆ.

ಸದ್ಯ ಇನಾಮ್ದಾರ್ ಚಿತ್ರ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಇನ್ನು ಕೆಲವು ತಿಂಗಳುಗಳಲ್ಲಿ ಕರಾವಳಿ ಪ್ರತಿಭೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಎರಡನೇ ಚಿತ್ರ ತೆರೆಯ ಮೇಲೆ ಮೂಡಿಬರಲಿದೆ.

ಇನ್ನು ಇನಾಮ್ದಾರ್ ಕಥೆಗೆ ಪೂರಕವಾದ ಫ್ರೇಮ್ ಮೂಲಕ ಕಣ್ಣಿಗೆ ಕಟ್ಟಿಕೊಡುವ ರೀತಿಯ ಚಿತ್ರಣ ಸೆರೆ ಹಿಡಿದಿರುವ ಕ್ಯಾಮೆರಾಮ್ಯಾನ್ ಮುರುಧರ ಚಿತ್ರದ ಇನ್ನೊಂದು ಪಿಲ್ಲರ್ ಎಂದರೆ ತಪ್ಪಾಗಲಾರದು. ಬಯಲುಸೀಮೆಯ ಗಟ್ಟಿ ನೆಲೆದಿಂದ ಹಿಡಿದು ಪಶ್ಚಿಮ ಘಟ್ಟದ ತಪ್ಪಲಿನ‌ ಕಾಡಿನಲ್ಲಿಯೂ ವಯಸ್ಸಿಗೆ ಮೀರಿದ ಉತ್ಸಾಹ ತೋರುತ್ತಾ, ಚಿತ್ರತಂಡವನ್ನು ಹುರಿದುಂಬಿಸಿ ಚಿತ್ರೀಕರಣ ಮಾಡಿದ ಶ್ರೇಯ ಮುರುಳಿ ಅವರಿಗೆ ಸಲ್ಲುತ್ತದೆ.

 

ಬೆಳಗಾವಿಯ ಗಟ್ಟಿಮಣ್ಣಿನ ಖಡಕ್ ಸ್ಟಾರ್ ರಂಜನ್ ಛತ್ರಪತಿ ಇನಾಮ್ದಾರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ಕಥೆಗೆ ಬೇಕಾದಂತೆ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿದ್ದಾರೆ.‌ ಕುಡ್ಲದ ಬೆಡಗಿ ನಗುಮುಖದ ಸುಂದರಿ ಶಿರಶ್ರೀ ಅಂಚನ್ ಇನಾಮ್ದಾರ್ ಜೊತೆಗೆ ಹೆಜ್ಜೆ ಹಾಕಿದ್ದಾರೆ, ಈಗಾಗಲೇ ಕನ್ನಡ, ತುಳು, ತಮಿಳು ಸಿನೆಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದು, ಸದ್ಯ ಇನಾಮ್ದಾರ್ ಸಿನೆಮಾದ ನಾಯಕಿಯಾಗಿ ಕುಡ್ಲದ ಕಂಪು ಹರಿಸಿದ್ದಾರೆ.

ಚಿತ್ರದ ಮುಖ್ಯ‌ಭೂಮಿಕೆಯಲ್ಲಿ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು ಎಸ್ತಾರ್ ನೆರೋನಾ, ಎಂಕೆಮಠ ಅವರಂತ ಹಿರಿಯ ನಟರಿದ್ದು, ರಘುಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ನಾಗರಾಜ್ ರಾವ್, ಹಾಲಂಬಿ ಅವರಂತ ಕರಾವಳಿಯ ಪ್ರತಿಭೆಗಳ ಸಮಾಗಮ ಚಿತ್ರದಲ್ಲಿದೆ.

ಚಿತ್ರಕ್ಕೆ ಲಕ್ಕಿ ನಾಗೇಶ್ ಹೇರಾಂಜಾಲು ,ಆರ್.ಕೆ.ಮಂಗಳೂರು ಸಹಕಾರ ನೀಡಿದ್ದು, ಸಹ ನಿರ್ದೇಶನದಲ್ಲಿ ರಾಜ್ ಕೃಷ್ಣ ಮತ್ತು ಮಿಥುನ್ ತೀರ್ಥಹಳ್ಳಿ ಶ್ರೀಧರ್ ಶ್ರೀ, ನವೀನ್ ಸಾಥ್ ನೀಡಿದ್ದಾರೆ. ಚಿತ್ರತಂಡದಲ್ಲಿ ವಿನಯ್ ಉಳ್ಳೂರು, ಸನತ್ ಉಪ್ಪುಂದ, ಅನೀಶ್ ಡಿಸೋಜಾ,  ಮತ್ತಿತರರು ಸಹಕಾರ ನೀಡಿದ್ದಾರೆ.

Leave a Reply