ರೀಮೇಕ್ ರಾಜ ದ್ವಾರಕೀಶ್ ತೆಲುಗು ಮತ್ತು ತಮಿಳುಗಳಿಂದ ಅನೇಕಾನೇಕ ಚಿತ್ರಗಳನ್ನು ಕನ್ನಡಕ್ಕೆ ನೀಡುವ ಮೂಲಕ ಆ ನೆಲದ ಕತೆಗಳನ್ನು ನಮಗೆ ಪರಿಚಯಿಸುತ್ತಿದ್ದರು ಎಂದೇ ನಾನು ಆಗ ಖುಷಿ ಪಡುತ್ತಿದ್ದೆ. ರೀಮೇಕ್ ರಾಜ ಅಂತ ಅವರನ್ನು ಅದೆಷ್ಟು ಆಡಿಕೊಂಡರೂ ಅವರು ತಲೆ ಕೆಡಿಸಿಕೊಂಡವರಲ್ಲ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ದ್ವಾರಕೀಶ್ ತೆಲುಗಿನ ಹಾಸ್ಯ ಪ್ರಧಾನ ಚಿತ್ರ ಪರಮಾನಂದಯ್ಯ ಶಿಷ್ಯಲು ಕಥಾ ಸಿನಿಮಾವನ್ನು ಕನ್ನಡಕ್ಕೆ ‘ಗುರುಶಿಷ್ಯರು’ ಆಗಿಸುತ್ತಿದ್ದ ಸಮಯ. ಜಯನಗರ ನಾಲ್ಕನೇ ಬ್ಲಾಕಿನಲ್ಲಿ ನನ್ನ ಚಿಕ್ಕಮ್ಮನ ಮನೆಯ ನೆರೆಯವರಾಗಿದ್ದ ನಟಿ ಮಂಜುಳಾ ಅವರ ಮನೆಯಲ್ಲಿ ಒಮ್ಮೆ ಅವರನ್ನು ನೋಡಿದ್ದೆ.
ಹೈಸ್ಕೂಲು ಓದುತ್ತಿದ್ದ ನನಗಿಂತಲೂ ಕುಳ್ಳಗಿದ್ದ ಅವರ ಪಕ್ಕದಲ್ಲಿ ನಿಂತುಕೊಂಡು ಅಳೆಯುವಂತೆ ಮಾಡುತ್ತಿದ್ದ ನನ್ನ ನೋಡಿ ದ್ವಾರಕೀಶ್ ನಿನಗಿಂತ ದೊಡ್ಡವರ ಹೈಟ್ ನೋಡ್ಕೊಂಡು ಗೇಲಿ ಮಾಡಿದರೆ ನೀನು ಬರುಬರುತ್ತಾ ಕುಳ್ಳಗಾಗಿಬಿಡ್ತೀಯಾ! ಎಂದು ಹೆದರಿಸಿದ್ದರು. ಆದರೆ ಆ ಹೊತ್ತಿಗೆ ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳ ಬಗ್ಗೆ ಅರಿವಿದ್ದ ನನಗೇನೂ ಭಯವಾಗಿರಲಿಲ್ಲ.
ಮತ್ತೊಮ್ಮೆ ಎಷ್ಟೋ ವರ್ಷಗಳ ನಂತರ ವಾದಿರಾಜ್ ಅವರೊಂದಿಗೆ ದ್ವಾರಕೀಶ್ ಅವರ ನರಸಿಂಹರಾಜ ಕಾಲೋನಿಯಲ್ಲಿದ್ದ ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಆಗ ಅವರಿಗೆ ನನ್ನ ನೆನಪು ಚೂರೂ ಬರಲಿಲ್ಲ. ನಾನು ಮಂಜುಳಾ ಮನೆಯಲ್ಲಿ ನೋಡಿದ್ದನ್ನು ನೆನಪಿಸಿದೆ. ಆ ಹೊತ್ತಿಗೆ ಮಂಜುಳಾ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದರು. ಕೂಡಲೇ ಅವರು, “ಅವಳನ್ನು ನೆನಪಿಸಲೇ ಬೇಡಿ. ಅಷ್ಟು ಗುಂಡುಗುಂಡಾಗಿದ್ದ ಗುಂಡಮ್ಮನ ಸುಟ್ಟ ಮುಖ ಕಣ್ಮುಂದೆ ಬಂದು ಹೊಟ್ಟೆಯಲ್ಲಿ ಬೆಂಕಿ ಬಿದ್ದಂಗಾಗತ್ತೆ” ಎಂದು ದುಃಖಿಸಿದ್ದರು.
ನಟರಾಗಿ, ನಿರ್ಮಾಪಕರಾಗಿ ಅವರು ಪಟ್ಟ ಪಾಡುಗಳು ಒಂದೆರಡಲ್ಲ. ಅವರೊಂದು ತರ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಮತ್ತೆ ಹೇಗಾದರೂ ಎದ್ದು ಬರುವ ಛಲವಿದ್ದವರು. ಈಗ ಏಳುವುದೂ ಇಲ್ಲ. ಬರುವುದೂ ಇಲ್ಲ. ಕನ್ನಡ ಚಲನಚಿತ್ರ ರಂಗದ ಹಿರಿಯ ಮೈಲಿಗಲ್ಲಿಗೊಂದು ವಿದಾಯದ ನಮನ.
- ಯೋಗೇಶ್ ಮಾಸ್ಟರ್, ಹಿರಿಯ ರಂಗಕರ್ಮಿಗಳು




