ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಯೋಗ ಪರಿಚಯಿಸುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ಗಳನ್ನು ಆರಂಭಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಆರೋಗ್ಯ ಇಲಾಖೆಯಿಂದ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿರುವ ಯೋಗವನ್ನು ನಾವು ಹೆಚ್ಚಿನ ಜನರಿಗೆ ಪರಿಚಯಿಸಬೇಕಾಗಿದೆ ಎಂದರು.
ಯೋಗವನ್ನು ಪರಿಚಯಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಎಲ್ಲ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಗ ಪರಿಚಯಿಸುವ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯಾಗಿ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮೈಸೂರು ಜಿಲ್ಲೆಯ ಪ್ರತಿ ಮನೆಗಳಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ ಎಂದರು.
ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಒಂದು ಜಿಲ್ಲೆಯನ್ನು ಸಂಪೂರ್ಣವಾಗಿ ಯೋಗ ಜಿಲ್ಲೆಯನ್ನಾಗಿ ರೂಪಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದಲ್ಲಿ ಪರಂಪರಾಗತವಾಗಿ ಬಂದ ಅಷ್ಟಾಂಗ ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಆಯುಷ್ ಇಲಾಖೆಯಿಂದ ರಾಜ್ಯದ ವಿವಿಧೆಡೆ ಯೋಗ ಪಾರ್ಕ್, ಯೋಗ ಧನುಷ್, ಹಸಿರು ಯೋಗ, ಯೋಗ ಮಹಾಕುಂಭ, ಯೋಗ ಸಂಯೋಗ, ಯೋಗ ಅನ್ ಪ್ಲಗ್ಸ್ ನಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಸಿರು ಯೋಗ ಕಾರ್ಯಕ್ರಮದ ಅಡಿಯಲ್ಲಿ 1 ಲಕ್ಷ ಗಿಡಗಳನ್ನ ನೆಡಲಾಗುತ್ತಿದೆ. ಯೋಗ ಧನುಷ್ ಕಾರ್ಯಕ್ರಮದ ಮೂಲಕ 5 ಲಕ್ಷ ಜನರಿಗೆ ಯೋಗ ಪ್ರೋಟೋಕಾಲ್ ಹೇಳಿಕೊಡಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 5 ಸಾವಿರ ಶಾಲೆಗಳಲ್ಲಿ ಯೋಗ ಪ್ರೋಟೋಕಾಲ್ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮಾತನಾಡಿ, ಯೋಗಾಭ್ಯಾಸ ನಮ್ಮನ್ನು ಅಹಿಂಸೆ, ಕರುಣೆ ಮತ್ತು ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ. ಇವು ಭೂಮಿಯ ಸುಸ್ಥಿರ ಅಭಿವೃದ್ಧಿ ಮತ್ತು ರಕ್ಷಣೆಗೆ ಅತ್ಯಗತ್ಯ. ಆದ್ದರಿಂದ, ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಯೋಗವನ್ನು ಅಳವಡಿಸಿಕೊಳ್ಳುವುದು ಇಂದಿನ ಅತಿ ದೊಡ್ಡ ಅಗತ್ಯವಾಗಿದೆ ಎಂದರು.
ಯೋಗ ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಆತ್ಮ ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಪರಿಪೂರ್ಣತೆಯ ನಡುವಿನ ಸಮತೋಲನದ ಮಾಧ್ಯಮವಾಗಿದೆ. ಯೋಗವು ನಮ್ಮನ್ನು ಸಂಯಮ, ಸಮತೋಲನ ಮತ್ತು ಪ್ರಕೃತಿಯ ಕಡೆಗೆ ಸಂವೇದನಾಶೀಲರನ್ನಾಗಿ ಮಾಡುತ್ತದೆ. ಇದು ಸಾವಿರಾರು ವರ್ಷಗಳಿಂದ ಮಾನವ ಆರೋಗ್ಯ ಮತ್ತು ಅದರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಭಾರತದ ಸಾಂಸ್ಕೃತಿಕ ಸಂಪ್ರದಾಯದ ಸಂಕೇತವಾಗಿದೆ ಎಂದರು.




