ಅಂಬಾನಿ, ಆದಾನಿಗೆ ಲಕ್ಷ ಲಕ್ಷ ಕೋಟಿಗಳಷ್ಟು ರಿಯಾಯಿತಿ ಇತ್ಯಾದಿ ನೀಡುವುದನ್ನು ಯಾವತ್ತೂ ತಪ್ಪು ಎನ್ನುವುದಿಲ್ಲ

3 years ago

‘ಬಿಟ್ಟಿ ಬಾಗ್ಯಗಳನ್ನು ಕೊಟ್ಟರೆ ಜನರು ಸೋಮಾರಿಗಳಾಗುತ್ತಾರೆ’ ಇದು ಅನುಕೂಲಸಿಂದುಗಳು ಯಾವಾಗಲೂ ಮಾಡಿಕೊಂಡು ಬಂದ ಟೀಕೆ, ವಾದ. ಹೀಗೆ ಮಾತಾಡುವವರು ಸರ್ಕಾರಗಳು ಶ್ರೀಮಂತರಿಗೆ, ಕಾರ್ಪೊರೇಟ್ ಕುಳಗಳಿಗೆ, ಇನ್ಪೊಸಿಸ್, ವಿಪ್ರೊ, ವೀರೇಂದ್ರ ಹೆಗ್ಗಡೆ, ಅಂಬಾನಿ, ಆದಾನಿ ಇವರಿಗೆಲ್ಲಾ ಲಕ್ಷ ಲಕ್ಷ ಕೋಟಿಗಳಷ್ಟು ರಿಯಾಯಿತಿ, ತೆರಿಗೆ ವಿನಾಯಿತಿ, ಬಿಟ್ಟಿ ಜಮೀನು ಲೀಸ್ ಇತ್ಯಾದಿ ನೀಡುವುದನ್ನು ಯಾವತ್ತೂ ತಪ್ಪು ಎನ್ನುವುದಿಲ್ಲ. ಆದರೆ ಬಿಪಿಎಲ್ ಕಾರ್ಡುದಾರರಿಗೆ ಏನಾದರೂ ಉಚಿತವಾಗಿ ಕೊಟ್ಟರೆ, ಕೂಲಿ ಕಾರ್ಮಿಕರಿಗೆ ಯೋಜನೆ ನೀಡಿದರೆ, ರೈತರಿಗೆ ಸಾಲ ಮನ್ನಾ ಮಾಡಿದರೆ ಅದನ್ನು ‘ಬಿಟ್ಟಿ ಬಾಗ್ಯ’ ಎಂದು ಜರಿಯಲು ತೊಡಗುತ್ತಾರೆ.

ಹೀಗೆ ವಾದ ಮಾಡುವವರು ಅನಕ್ಷರಸ್ತರಾಗಿರುವುದಿಲ್ಲ. ಅಕ್ಷರಸ್ತರೂ ತಮ್ಮನ್ನು ತಾವು ಬುದ್ದಿವಂತರೂ ಎಂದುಕೊಂಡವರೇ ಆಗಿರುತ್ತಾರೆ. ಹಿಂದೆ ಯುಪಿಎ ಸರ್ಕಾರದ ಅವದಿಯಲ್ಲಿ ನರೇಗಾ ಉದ್ಯೋಗ ಕಾತ್ರಿ ಯೋಜನೆ ಜಾರಿಯಾದಾಗ ಪ್ರತಾಪ ಸಿಮ್ಮ ಅದು ಜನರನ್ನು ಸೋಮಾರಿಗಳಾಗಿಸಿದೆ ಎಂದು ಜರಿದು ಅಂಕಣ ಬರೆದಿದ್ದ. ಅನ್ನಬಾಗ್ಯ ಜಾರಿಯಾದಾಗ ಆಕಾಶ ಬೂಮಿ ಒಂದು ಮಾಡುವಂತೆ ಬೊಬ್ಬಿರದವರಿದ್ದರು.

ಒಂದು ಮೂಲಬೂತ ತತ್ವದ ಬಗ್ಗೆ ಈ ಅಕ್ಷರಸ್ತರಿಗೆ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಯಾವುದೇ ಒಂದು ಆರ್ತಿಕತೆ ಸುಸೂತ್ರವಾಗಿ ನಡೆಯಬೇಕೆಂದರೆ ಆ ಸಮಾಜದಲ್ಲಿ ಜನರಲ್ಲಿ ಕೊಳ್ಳುವ ಶಕ್ತಿ ಇರಬೇಕಾಗುತ್ತದೆ. ಸಮಾಜದಲ್ಲಿ ಜನರ ಕೊಳ್ಳುವ ಶಕ್ತಿ ಆಗಾಗ ಕುಂದುತ್ತಲೇ ಇರುತ್ತದೆ. ಇದಕ್ಕೆ ನಾನಾ ಕಾರಣಗಳಿರುತ್ತವೆ. ಆರ್ತಿಕ ಕುಸಿತಗಳು, ಹಣದುಬ್ಬರ, ನಿರುದ್ಯೋಗ ಹೆಚ್ಚಳ, ಕೊವಿಡ್ ಬಿಕ್ಕಟ್ಟು ಹೀಗೆ ಯಾವುದಾದರೂ ಆಗಬಹುದು, ಎಲ್ಲಾ ಸೇರಿಯೂ ಆಗಬಹುದು. ಇಂತಹ ಸಂದರ್ಬದಲ್ಲೆಲ್ಲಾ ಜನರ ಕೊಳ್ಳುವ ಶಕ್ರಿ ತೀವ್ರವಾಗಿ ಕುಸಿಯುತ್ತದೆ. ಜನರು ಸರಕುಗಳನ್ನು ಕೊಳ್ಳದೇ ಹೋದರೆ ಸರಕುಗಳಿಗೆ ಬೇಡಿಕೆ ಕುಸಿಯುತ್ತದೆ. ಬೇಡಿಕೆ ಕುಸಿದರೆ ಉತ್ಪಾದನೆ ಕುಸಿಯುತ್ತದೆ. ಉತ್ಪಾದನೆ ಕುಸಿದರೆ ಆರ್ತಿಕ ಹಿಂಜರಿತವಾಗುತ್ತದೆ.

ಇದನ್ನು ತಡೆಗಟ್ಟಲು ಯಾವುದೇ ಜವಾಬ್ದಾರಿ ಸರ್ಕಾರ ಯಾವುದೇ ರೀತಿಯಲ್ಲಿ ಜನರ ಕೈಲಿ ಹಣವಿರುವಂತೆ ಮಾಡಲೇಬೇಕಾಗುತ್ತದೆ‌. ಆಹಾರ ಬದ್ರತೆ, ಉದ್ಯೋಗ ಬದ್ರತೆ ಕಾತ್ರಿಪಡಿಸಬೇಕಾಗುತ್ತದೆ.
ಅರ್ತಶಾಸ್ತದದಲ್ಲಿ Keynesian ತಿಯರಿ ಅಂತ ಒಂದಿದೆ. ಇದು ಬಹಳ ಮುಕ್ಯವಾದ ಒಂದು ಅರ್ತಸಿದ್ದಾಂತ. ಇದು ಹೇಳುವುದು ಅದನ್ನೇ. ಸ್ತಿರ ಆರ್ತಿಕತೆಗೆ ಉದ್ಯೋಗ ಸೃಶ್ಟಿಸುವುದು, ಜನರ ಕೊಳ್ಳುವ ಶಕ್ತಿ ಹೆಚ್ಚಿಸುವುದು ಪ್ರಬುತ್ವದ ಹೊಣೆ. ಕೆಲಸ ಇಲ್ಲದಿದ್ದರೆ ಗುಂಡಿ ತೆಗೆಸಿ, ಮತ್ತೆ ಗುಂಡಿ ಮುಚ್ಚಿಸಿ ಎಂದು ಅದು ಹೇಳುತ್ತದೆ. ಈ ತತ್ವದ ಹಿನ್ನೆಲೆಯಲ್ಲಿ ಉದ್ಯೋಗ ಕಾತ್ರಿ ಯೋಜನೆ ದೇಶದ ಆರ್ತಿಕತೆಯನ್ನು ಸ್ತಿರಗೊಳಿಸಲು ನೆರವಾಯ್ತು. ಹಾಗೆಯೇ ಮಾರುಕಟ್ಟೆ ಸ್ತಗಿತವಾದ ಸನ್ನಿವೇಶದಲ್ಲಿ ಜನರ ಕೈಗೆ ನೇರ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಇದೆಲ್ಲಾ ಸಮಾಜವಾದಿ ಸಮಾಜ ಕಟ್ಟುವ ಪ್ರಕ್ರಿಯೆ ಅಲ್ಲ. ಈಗಿರುವ ಬಂಡವಾಳಶಾಹಿ ಅರ್ತವ್ಯವಸ್ತೆಯನ್ನೇ ಕುಸಿದು ಹೋಗದಂತೆ ಮಾಡಲು ಬೇಕಾದ ಕ್ರಮ.
ಎಲ್ಲಕ್ಕಿಂತ ಮುಕ್ಯವಾಗಿ ಒಂದು ದೇಶದ ಜನರು ನರಳುವ ಸ್ತಿತಿ ಇರಬಾರದು.

ಇದೂ ಅರ್ತವಾಗದ ಮಡ್ಡುಗಳು ಮೇಲೆ ಹೇಳಿದ ಅಕ್ಷರಸ್ತರು!

  • ಹರ್ಶಕುಮಾರ್ ಕುಗ್ವೆ, ಪತ್ರಕರ್ತರು
    ( ಈ ಬರೆಹದಲ್ಲಿ ಮಹಾಪ್ರಾಣ ಅಕ್ಷರಗಳನ್ನು ಬಳಸಿಲ್ಲ)

Leave a Reply