ಬೀಡಿ ಮಾಲೀಕರ ವಿರುದ್ಧ ಕಾರ್ಮಿಕರ ಮುಷ್ಕರ

2 years ago

ಮಂಗಳೂರು: 2024 ಏಪ್ರಿಲ್ 1 ರಿಂದ ನೀಡಬೇಕಾದ ಏರಿಳಿತ ತುಟ್ಟಿಭತ್ಯೆಯನ್ನು ನೀಡದೆ ಬೀಡಿ ಕಾರ್ಮಿಕರನ್ನು ವಂಚಿಸುತ್ತಿರುವ ಬೀಡಿ ಮಾಲೀಕರ ದುರಹಂಕಾರದ ವಿರುದ್ದ ಬೀಡಿ ಕಾರ್ಮಿಕರು ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಜಿಲ್ಲೆಯ ಸಮಸ್ತ ಕಾರ್ಮಿಕ ವರ್ಗದ ಪರವಾಗಿ ಸಿಪಿಐಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಬೆಂಬಲ ವ್ಯಕ್ತಪಡಿಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅವಿಭಜಿತ ದ.ಕ.ಜಿಲ್ಲೆಯ ಅರ್ಥಿಕತೆಯ ಜೀವನಾಡಿಯಾದ ಬೀಡಿ ಉದ್ಯಮ ಸದ್ಯದ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದರೂ ಇಂದಿಗೂ ಲಕ್ಷಾಂತರ ಸಂಖ್ಯೆಯ ತಾಯಂದಿರು ಬೀಡಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆ ಮೂಲಕ ಜಿಲ್ಲೆಯ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದಾರೆ ಎಂದರು.

ಅಂತಹ ತಾಯಂದಿರಿಗೆ ಕಳೆದ ಕೆಲವು ವರ್ಷಗಳಿಂದ ತುಟ್ಟಿಭತ್ಯೆ ನೀಡಿಲ್ಲ. ಕನಿಷ್ಠ ಕೂಲಿಯನ್ನೂ ನೀಡಿಲ್ಲ. ಕೇಳಿದರೆ ವಿಷಯ ಕೋರ್ಟ್ ನಲ್ಲಿದೆ, ಅಲ್ಲಿ ಇತ್ಯರ್ಥವಾಗಲಿ ಎಂದು ಬೀಡಿ ಮಾಲೀಕರು ತೆಪ್ಪಗೆ ಕೂತಿದ್ದಾರೆ. ಹೋಗಲಿ….ಈ ವರ್ಷದ ಏರಿಳಿತ ತುಟ್ಟಿಭತ್ಯೆ ನೀಡಿರಿ ಎಂದು ಕೇಳಿದರೆ ಅದಕ್ಕೂ ಬೀಡಿ ಮಾಲಕರು ಸೊಪ್ಪು ಹಾಕುತ್ತಿಲ್ಲ ಎಂದರು.

ಇಂತಹ ಘೋರ ಅನ್ಯಾಯ ಬೀಡಿ ಮಾಲಕರು ಬೀಡಿ ಕಟ್ಟುವ ತಾಯಂದಿರಿಗೆ ಮಾಡುತ್ತಿದ್ದರೆ, ಅವಿಭಜಿತ ದ‌.ಕ.ಜಿಲ್ಲೆಯ ಶಾಸಕ, ಸಂಸದ ಸೇರಿದಂತೆ ಯಾವನೇ ಒಬ್ಬ ಜನಪ್ರತಿನಿಧಿಗಳು ಬಾಯಿ ಬಿಡುತ್ತಿಲ್ಲ. ಯಾಕೆಂದರೆ ಇವರೆಲ್ಲರೂ ಜಾತಿ ಧರ್ಮ ಪಕ್ಷ ಬೇಧವಿಲ್ಲದೆ ಬೀಡಿ ಮಾಲಕರ ಎಂಜಲು ಕಾಸಿಗೆ ಕೈಯೊಡ್ಡುವವರೇ ಆಗಿದ್ದಾರೆ ಎಂದು ಆರೋಪಿಸಿದರು.

ಇವರೆಲ್ಲರ ಚುನಾವಣಾ ಗೆಲುವಿನಲ್ಲಿ ಬೀಡಿ ಮಾಲಕರ ಕೈವಾಡ ಇದ್ದೇ ಇದೆ. ಕೇವಲ ಜಾತಿ ಧರ್ಮದ ರಾಜಕೀಯದಲ್ಲಿ ಮುಳುಗಿರುವ ಈ ಜಿಲ್ಲೆಯಲ್ಲಿ ಬದುಕಿನ ರಾಜಕೀಯ ಮುನ್ನೆಲೆಗೆ ಬರಬೇಕಾಗಿದೆ. ಹೋರಾಟದ ಪಥದಲ್ಲಿರುವ ಬೀಡಿ ಸುತ್ತುವ ಅಮ್ಮಂದಿರ ಹೋರಾಟದಲ್ಲಿ ನಾವೂ ಭಾಗವಹಿಸೋಣ….ಬೆಂಬಲಿಸೋಣ…..ಬೇಡಿಕೆ ಈಡೇರಿಕೆಗೆ ಆಗ್ರಹಿಸೋಣ ಎಂದು ಕರೆನೀಡಿದರು.

Leave a Reply