ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ವಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಮಹಿಳೆಯರ ಹೊಡೆದಾಟ ರಂಪಾಟ ಹಳೆಯ ಸುದ್ದಿ. ಜೊತೆಗೆ ಪ್ರಯಾಣದ ವೇಳೆ ಮಹಿಳೆಯರು ಕೆಲವೆಡೆ ಗುರುತಿನ ಚೀಟಿ ತೋರಿಸುವ, ಟಿಕೆಟ್ ಪಡೆಯವ ವಿಚಾರದಲ್ಲಿ ಕಂಡಕ್ಟರ್ ಜೊತೆ ಜಟಾಪಟಿ, ಸೀಟು ಹಿಡಿಯುವ ವಿಚಾರದಲ್ಲಿ ಪ್ರಯಾಣಿಕರ ನಡುವೆ ಗಲಾಟೆ ಮಾಮೂಲಿನ ಸಂಗತಿಯಾಗಿದೆ. ಆದರೆ, ಇದೀಗ ಮತ್ತೊಂದು ಕಾರಣಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಚಪ್ಪಲಿಯಲ್ಲಿ ಬಡಿದಾಡಿಕೊಂಡು ಸುದ್ದಿಯಾಗಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಪೀಣ್ಯ ಮಾರ್ಗವಾಗಿ ಹೊರಟ್ಟಿದ್ದ ಬಸ್ ಪ್ರಯಾಣಿಕರಿಂದ ತುಂಬಿತ್ತು. ಬಿಸಿಲಿನ ಝಳದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸವಳಿದಿದ್ದರು. ಉಸಿರಾಡಲು ಕಷ್ಟವಾದ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಂದ ತುಂಬಿತ್ತು.
ಬಸ್ಸು ರಾಜಾಜಿನಗರ ಸಮೀಪಿಸುವಾಗ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡಿದ್ದಾರೆ. ಈ ವೇಳೆ ಚಪ್ಪಲಿ, ಶೂ ನಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಮಹಿಳೆಯರ ಹೊಡೆದಾಟವನ್ನು ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ. ಇವರಿಬ್ಬರ ಗಲಾಟೆಯನ್ನು ಬಿಡಿಸಲು ಇತರೆ ಪ್ರಯಾಣಿಕರು ಮುಂದಾದರೂ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಕಂಡಕ್ಟರ್ ಮಧ್ಯ ಪ್ರವೇಶದ ಬಳಿಕ ಗಲಾಟೆ ತಣ್ಣಗೆ ಆಗಿತ್ತು. ಮಹಿಳೆಯರಿಬ್ಬರ ಗಲಾಟೆಗೆ ಸಹ ಪ್ರಯಾಣಿಕರು ಛೀಮಾರಿ ಹಾಕಿದ ಘಟನೆ ನಡೆದಿದೆ.




