ಮಹಿಳೆಗೆ ಮುಖ್ಯಮಂತ್ರಿಯಾಗುವ ಯೋಗವಿದೆ: ಕೋಡಿಮಠದ ಶ್ರೀ ಭವಿಷ್ಯ

3 years ago

#women #cm #kodimathasri

ಬೆಳಗಾವಿ: ರಾಜ್ಯದಲ್ಲಿ ಮುಂದೊಂಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾತಾಡಿದ ಅವರು, ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಜನರಿಗೆ ಸಲಹೆ ನೀಡಿದರು.

ರಾಜ್ಯ ರಾಜಕಾರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದ ಬಗ್ಗೆ ಏನೂ ಹೇಳಲ್ಲ. ಆದರೆ ಸರ್ಕಾರಕ್ಕೆ‌ ತೊಂದರೆಯಿಲ್ಲ. ಪಕ್ಷಾಂತರ ಬಗ್ಗೆಯೂ‌ ಚುನಾವಣೆ ಪೂರ್ವವೇ ಹೇಳಿದ್ದೆ. ರಾಜಕೀಯ ಅಲ್ಲೋಲ, ಕಲ್ಲೋಲ ಆಗಲಿದೆ ಎಂದು ಹೇಳಿದ್ದೆ. ಈಗ ಅಸ್ಥಿರತೆ ಉಂಟಾಗುತ್ತಿದೆ ಎಂದು ಹೇಳಿದರು.

ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಪ್ರಶ್ನೆಗೆ, ಇವರದ್ದು ಮುಗಿಲಿ, ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ, ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದರು.

ಚಂದ್ರಯಾನ-3 ಯಶಸ್ವಿಯಾಗಲಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ. ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ ಎಂದರು.

ಶ್ರಾವಣ ಮಾಸದ ಮಧ್ಯದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪಗಳು, ಸುನಾಮಿಗಳಿಂದ ಹೆಚ್ಚಿನ ಜನರಿಗೆ ಸಾವುನೋವು ಸಂಭವಿಸಲಿದೆ. ವಿಷಗಾಳಿ ಬೀಸುವ ಸಂಭವವೂ ಇದೆ. ವಿಷಗಾಳಿ ಎಲ್ಲೆಡೆ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶವಾಗಲಿವೆ. ಭಾರತದಲ್ಲಿ ಕೂಡ ಜಲಪ್ರಳಯ ಆಗುವ ಲಕ್ಷಣಗಳಿವೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಸಮೃದ್ಧಿಯಾಗುವ ಲಕ್ಷಣಗಳಿವೆ. ಯಾವುದೇ ತೊಂದರೆ ಇಲ್ಲ. ಭೂಕಂಪದಿಂದ ದೊಡ್ಡ ನಗರಗಳಿಗೆ ಅಪಾಯವಿದೆ. ಇದ್ದಕ್ಕಿದ್ದಂತೆ ಜನ ಬಲಿಯಾಗುವ ಆತಂಕವಿದೆ. ಜಾಗತಿಕ ಮಟ್ಟದಲ್ಲಿ ವಿಷಾನಿಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಜ್ಯಗಳು ತಲ್ಲಣಗೊಳ್ಳುವ ಪ್ರಸಂಗವೂ ಇದೆ. ಅದರ ಬಗ್ಗೆ ಜನ ಎಚ್ಚರಕೆ ವಹಿಸಬೇಕು ಎಂದರು.

ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ. ಅದು ಪ್ರಕೃತಿ ನಿಯಮ. ಪ್ರಾಕೃತಿಕ ದೋಷದಿಂದಲೇ ಸಾವುನೋವು ಹೆಚ್ಚುತ್ತಿವೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗುತ್ತಿದೆ. ಕೆಮಿಕಲ್ ಮಿಶ್ರಿತ ಆಹಾರ ಸೇವನೆ ಹೆಚ್ಚುತ್ತಿದೆ. ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಮೊದಲು ಬೆಳೆ ಬೆಳೆಯಲಾಗುತ್ತಿತ್ತು. ಈಗ ರಾಸಾಯನಿಕ ಸಿಂಪಡಣೆ ಹೆಚ್ಚುತ್ತಿದೆ. ಹಣ್ಣಿಗೂ ರಾಸಾಯನಿಕ ಹಾಕಲಾಗುತ್ತಿದೆ. ವಿಷವನ್ನೆ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ಉಣ್ಣುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಗಿಡಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ. ಮೊದಲು ಅಂತರ್ಜಲ‌ ಹೆಚ್ಚಿತ್ತು, ಈಗ ಆಳವಾಗಿ ಕೊಳವೆಬಾವಿ ಕೊರೆಸಬೇಕು. ಆದ್ದರಿಂದ ಪ್ರಳಯ ಜಾಸ್ತಿ ಆಗುತ್ತಿವೆ ಎಂದರು.

ಮನುಷ್ಯ ಅತಿವೇಗದಲ್ಲಿ ಹಣ ಮಾಡಲು ಹೊರಟಿದ್ದಾನೆ. ಹೀಗಾಗಿ ಆಪತ್ತು ಹೆಚ್ಚಿವೆ. ಇವೆಲ್ಲದರ ನಿಯಂತ್ರಣಕ್ಕೆ ಭಗವಂತನಿದ್ದಾನೆ, ಆದರೆ ಮನುಷ್ಯ ಈತನನ್ನು ಮರೆತಿದ್ದಾನೆ. ದೈವ, ನಂಬಿಕೆ ಮೇಲೆ ಜೀವನ ಮಾಡಬೇಕು. ಇವುಗಳನ್ನು ಕಳೆದುಕೊಂಡ ಪರಿಣಾಮದಿಂದಲೇ ಅನಾಹುತ ಆಗುತ್ತಿವೆ ಎಂದು ಹೇಳಿದರು.

Leave a Reply