ಬೆಂಗಳೂರು: ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬರುವ ಡಿಸೆಂಬರ್ 9 ರಿಂದ 20 ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ. ಈ ಬಾರಿ ಆಡಳಿತ ಪಕ್ಷಕ್ಕೆ ಅಗ್ನಿಪರೀಕ್ಷೆಯಾಗುವ ಸಾಧ್ಯತೆ ಇದೆ.
- ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ನಾಯಕರಿಂದ ರಾಜಕೀಯ ಒತ್ತಡ: ಆರ್.ಅಶೋಕ
- ದುರುದ್ದೇಶಪೂರ್ವಕ Form-7 ಸಲ್ಲಿಕೆ ಕುರಿತು SIT ತನಿಖೆ ನಡೆಸಿ
- ಆಹಾರದ ಮೇಲೆ ರಾಜಕೀಯ
- ಕಾಲದ ಹೆಜ್ಜೆಯ ಸದ್ದು: ಕೋಲ್ಸ್ ಪಾರ್ಕ್ನ ಶತಮಾನದ ಕಥೆ
- ದ್ವೇಷರಹಿತ ರಾಜಕಾರಣದ ಪ್ರತೀಕ ಜೆ ಹೆಚ್ ಪಟೇಲ್
ಸರ್ಕಾರವನ್ನು ಎದುರಿಸಲು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ತನ್ನ ಬತ್ತಳಿಕೆಯಲ್ಲಿ ಹಲವು ಬಾಣಗಳನ್ನು ಸಿದ್ಧಪಡಿಸಿಕೊಂಡಿವೆ. ಇವುಗಳನ್ನು ಎದುರಿಸುವ ದೃಷ್ಟಿಯಿಂದ ಈಗಿಂದಲೇ ಕಾರ್ಯತಂತ್ರಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಜ್ಜಾಗತೊಡಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆ ವಿಧಾನ ಮಂಡಲದ ಅಧಿವೇಶನದ ಕಾರ್ಯತಂತ್ರ ಕುರಿತು ಹಿರಿಯ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಅಧಿವೇಶನದಲ್ಲಿ ವಿಪಕ್ಷಗಳು ಒಡ್ಡುವ ಎಲ್ಲ ಸವಾಲುಗಳನ್ನು ಸಂಘಟನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬ ಕುರಿತು ಚರ್ಚಿಸಲಾಗಿದೆ.
ಬಿಪಿಎಲ್ ಕಾರ್ಡ್ ರದ್ದು, ವಾಲ್ಮೀಕಿ ನಿಗಮ ಹಗರಣ, ಮುಡಾ ಪ್ರಕರಣ ಮತ್ತು ಕೋವಿಡ್ ಹಗರಣಗಳ ಬಗ್ಗೆ ವಿಪಕ್ಷಗಳು ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜುಗೊಂಡಿವೆ. ಇವರ ಕಾರ್ಯತಂತ್ರವನ್ನು ಎದುರಿಸುವ ದೃಷ್ಟಿಯಿಂದ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಸಚಿವರ ನೇತೃತ್ವದಲ್ಲಿ ಸಮಿತಿ ಇರಲಿದ್ದು, ಅದಕ್ಕೆ ಇಂತಿಷ್ಟು ಶಾಸಕರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ಇವರು ತಮಗೆ ಸಂಬಂಧಪಟ್ಟ ವಿಷಯ ಚರ್ಚೆಗೆ ಬಂದಾಗ ಒಟ್ಟಾಗಿ ಎಲ್ಲರೂ ನಿಂತು ಅದಕ್ಕೆ ಉತ್ತರ ನೀಡುವ ಮೂಲಕ ಸರ್ಕಾರ ಮತ್ತು ಶಾಸಕರು ಒಂದಾಗಿದ್ದಾರೆ, ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಶ ರವಾನಿಸಲು ನಿರ್ಧರಿಸಲಾಗಿದೆ.
ಬೆಳಗಾವಿ ಅಧಿವೇಶನದ ಸಮಯದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದೆ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆ ನಡೆಯಬೇಕು ಎಂಬ ಆಗ್ರಹ ಕೇಳಿ ಬರುತ್ತದೆ. ಆದರೆ ವಿಪಕ್ಷಗಳು ವಿಷಯಾಂತರ ಮಾಡುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಸಾಧ್ಯವಾಗುತ್ತಿಲ್ಲ. ಈ ಬಾರಿ ಇದಕ್ಕೆ ಅವಕಾಶವಿಲ್ಲದೆ ಕಾರ್ಯಕಲಾಪಗಳ ಪಟ್ಟಿ ಮತ್ತು ಪ್ರಶ್ನೋತ್ತರಗಳನ್ನು ಉತ್ತರ ಕರ್ನಾಟಕಕ್ಕೆ ಕೇಂದ್ರೀಕರಿಸಿ ನಿಗದಿಪಡಿಸುವಂತೆ ಉಭಯ ಸದನಗಳ ಅಧ್ಯಕ್ಷರನ್ನು ಕೋರಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.




