ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ರಾಜ್ಯದಲ್ಲಿರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ಪ್ರಸರಣ ನಿಗಮ ನೌಕರರ ಸಂಘದ 60ನೇ ವಜ್ರ ಮಹೋತ್ಸವ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಇಂಧನ ಸಚಿವನಾದ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಎಸ್ಕಾಂಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲೂ ಖಾಸಗಿಯವರಿಗೆ ನೀಡಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಈ ಒತ್ತಡ ಹೆಚ್ಚಾದಾಗ ನಾನು ಅವರಿಗೆ ನಮ್ಮ ನೌಕಕರು, ಇಂಜಿನಿಯರ್ ಗಳು, ವ್ಯವಸ್ಥಾಪಕ ಮಂಡಳಿಯವರು ಬಹಳ ಶಕ್ತಿಶಾಲಿಯಾಗಿದ್ದು ಎಸ್ಕಾಂಗಳನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದೆ. ಈಗ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರು ಇರುವವರೆಗೂ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಅವಕಾಶ ನೀಡುವುದಿಲ್ಲ ಎಂದರು.
ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ವಿತರಣೆಯಲ್ಲಿ ಶೇ. 19-20% ನಷ್ಟ ಆಗುತ್ತಿತ್ತು.ಈಗ ನಾವು ಅದನ್ನು 10%ಗೆ ಇಳಿಸಿದ್ದೇವೆ. ಇದು ದೇಶಕ್ಕೆ ಮಾದರಿ. ಬೇರೆ ರಾಜ್ಯಗಳಲ್ಲಿ ಇಂದಿಗೂ 17-18% ನಷ್ಟವಾಗುತ್ತಿದೆ. ನಿಮ್ಮೆಲ್ಲರ ಶ್ರಮದಿಂದ ಇಂದು ಈ ಇಂಧನ ಇಲಾಖೆ ಶಕ್ತಿಶಾಲಿಯಾಗಿ ಬೇಳೆಯುತ್ತಿದೆ ಎಂದರು.
ದೀಪ ಜಗತ್ತನ್ನೇ ಬೆಳಗುತ್ತದೆ. ಈ ದೀಪಕ್ಕೆ ಬೆಳಕು ಪೂರೈಸುತ್ತಿರುವವರು ನೀವು. ದೀಪದ ಬೆಳಕು ಎಲ್ಲರಿಗೂ ಕಾಣುತ್ತದೆ. ಆದರೆ ಅದರ ಹಿಂದೆ ಇರುವ ಎಣ್ಣೆ ಹಾಗೂ ಬತ್ತಿ ಯಾರಿಗೂ ಕಾಣುವುದಿಲ್ಲ. ಅದೇ ರೀತಿ ಇಂಧನ ಇಲಾಖೆ ನೌಕರರ ಶ್ರಮದಿಂದ ಇಡೀ ಸಮಾಜಕ್ಕೆ ಬೆಳಕು ನೀಡಲಾಗುತ್ತಿದೆ ಎಂದರು.
ಪ್ರೀತಿ ವಿಶ್ವಾಸ ಎಂಬುದು ಮರದಲ್ಲೂ ಸಿಗುವುದಿಲ್ಲ, ಮಾರುಕಟ್ಟೆಯಲ್ಲೂ ಸಿಗುವುದಿಲ್ಲ. ಕೇವಲ ಜನರ ಹೃದಯದಲ್ಲಿ ಮಾತ್ರ ಸಿಗುತ್ತದೆ. ನಾವು ನಿಮಗಾಗಿ ಮಾಡಿದ ಸೇವೆ, ತೀರ್ಮಾನವನ್ನು ನೀವು ಸ್ಮರಿಸಿ, ನಮ್ಮ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಸರ್ಕಾರದ ಪರವಾಗಿ ನಮಿಸುತ್ತೇನೆ. ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರದಲ್ಲಿ ನಾನು ನಾಲ್ಕೂವರೆ ವರ್ಷ ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೆ. ನಾನು ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ, ಇದರ ಜವಾಬ್ದಾರಿ ಹೊತ್ತವರೆಲ್ಲರೂ ವಿಫಲರಾಗಿದ್ದಾರೆ, ನೀವು ಯಾಕೆ ಇದರ ಜವಾಬ್ದಾರಿ ವಹಿಸಿಕೊಂಡಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ ಎಂದು ಹೇಳಿದೆ. ಕಷ್ಟದ ಜವಾಬ್ದಾರಿ ವಹಿಸಿಕೊಂಡು ಅದನ್ನು ಸರಿಪಡಿಸುವುದೇ ನಾಯಕನ ಗುಣ ಎಂದರು.
ನಾನು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ರಾಜ್ಯದಲ್ಲಿ 11 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಇಲಾಖೆ ಜವಾಬ್ದಾರಿ ಬಿಡುವಾಗ ರಾಜ್ಯದಲ್ಲಿ 23 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಇಲಾಖೆಯಲ್ಲಿ ಒಂದು ರೂಪಾಯಿ ಲಂಚ ಪಡೆಯದೇ, ಪಾರದರ್ಶಕವಾಗಿ 24 ಸಾವಿರ ನೌಕರರನ್ನು ನೇಮಕಾತಿ ಮಾಡಿದೆ. ಈ ಹಿಂದೆ ಇದ್ದ ವಿದ್ಯುತ್ ಶಕ್ತಿ ಮಂತ್ರಿಗಳು ನೇಮಕಾತಿಗೆ ವಸೂಲಿ ಮಾಡುತ್ತಿದ್ದರು. ನಾನು ಅದನ್ನು ತಪ್ಪಿಸಿ, ನಿಮ್ಮ ಮನೆ ಬಾಗಿಲಿಗೆ ನೌಕರಿಯನ್ನು ಕೊಟ್ಟ ತೃಪ್ತಿ ನನಗಿದೆ ಎಂದರು.
ಪವನ ಶಕ್ತಿ, ಸೌರಶಕ್ತಿ, ಬೆಂಗಳೂರು ನಗರದಲ್ಲಿ ಅನಿಲ ಉತ್ಪಾದನೆ ವಿಚಾರವಾಗಿ ನಾವು ಅನೇಕ ತೀರ್ಮಾನ ಮಾಡಿದ್ದೆವು. ಅದರ ಪರಿಣಾಮವಾಗಿ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಂಡವಾಳ ಹೂಡಿಕೆದಾರರು ಆಸಕ್ತಿ ತೋರಿದರು. ಪಂಪ್ ಸ್ಟೋರೇಜ್ ಪವರ್ ಅನ್ನು ಹೊಸದಾಗಿ ಆರಂಭಿಸುತ್ತಿದ್ದು, ಸವದತ್ತಿ ಹಾಗೂ ವರಾಹಿಯಲ್ಲಿ ನಿರ್ಮಿಸಲು ಮುಂದಾಗಿದ್ದೇವೆ ಎಂದರು.
ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡಲು ಪ್ರತಿ ತಾಲೂಕಿನಲ್ಲಿ 20-50 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲು ತೀರ್ಮಾನ ಮಾಡಿದ್ದೇವೆ. ಇನ್ನು ಪಾವಗಡ ಸೌರಶಕ್ತಿ ಉತ್ಪಾದನಾ ಕೇಂದ್ರ ಸ್ಥಾಪಿಸುವಾಗ ಅಲ್ಲಿನ ಕೃಷಿ ಭೂಮಿ ಬೆಲೆ ಕೇವಲ 50 ಸಾವಿರ ಇತ್ತು. ಆದರೂ ರೈತರಿಂದ ಭೂಮಿ ಖರೀದಿ ಮಾಡದೇ ಪ್ರತಿ ವರ್ಷ ಅವರಿಗೆ ಪ್ರತಿ ಎಕರೆಗೆ 18 ಸಾವಿರ ಬಾಡಿಗೆ ನೀಡಿ ಈ ಯೋಜನೆಯನ್ನು ಜಾರಿ ಮಾಡಿದ್ದೇವೆ. ಈಗ ಅವರಿಗೆ ವರ್ಷಕ್ಕೆ 26-27 ಸಾವಿರ ಬಾಡಿಗೆ ಬರುತ್ತಿದೆ. ಈಗಲೂ ಅಲ್ಲಿನ ರೈತರು ಈ ಜಾಗದ ಮಾಲೀಕರೇ ಆಗಿದ್ದಾರೆ ಎಂದರು.
ನಮ್ಮ ಈ ಯೋಜನೆ ವಿಶ್ವಕ್ಕೆ ಮಾದರಿಯಾಗಿತ್ತು. ಕೇಂದ್ರ ಸರ್ಕಾರ ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿದೆ. ನಮ್ಮ ರಾಜ್ಯದಲ್ಲಿ 35 ಲಕ್ಷ ಐಪಿ ಸೆಟ್, 2 ಲಕ್ಷ ಗ್ರಾಹಕರಿದ್ದಾರೆ. ಅವರ ಬದುಕು ನಿಮ್ಮ ವಿಶ್ವಾಸವಿದೆ. ಈ ಎಲ್ಲಾ ಗ್ರಾಹಕರ ಸಂಪರ್ಕ ನಿಮ್ಮ ಜತೆಗೆ ಇದೆ. ನೀವು ಮನಸ್ಸು ಮಾಡಿದರೆ, ಡಿ.ಕೆ. ಶಿವಕುಮಾರ್ ಅವರನ್ನು ಮೇಲಕ್ಕೆ ಏರಿಸಬಹುದು, ಕೆಳಕ್ಕೆ ಇಳಿಸಲೂಬಹುದು. ಈ ವಿಚಾರದಲ್ಲಿ ನನಗೆ ನಿಮ್ಮ ಮೇಲೆ ವಿಶ್ವಾಸವಿದೆ. ನಿಮಗೂ ಉಪಕಾರ ಸ್ಮರಣೆ ಇರಬೇಕು. ಇಲ್ಲಿ ನೀವು ನನಗೆ ಜೈಕಾರ ಹಾಕಿದರೆ ಸಾಲದು, ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಕೂರಿಸಬೇಕು. ಆ ಜವಾಬ್ದಾರಿ ನಿಮ್ಮದು ಎಂದರು.
ನಿಮ್ಮ ಬೇಡಿಕೆಗಳು ನಮ್ಮ ಗಮನದಲ್ಲಿವೆ. ಒಪಿಎಸ್ ಕೂಡ ನಮ್ಮ ಪ್ರಣಾಳಿಕೆಯಲ್ಲಿದೆ. ಆ ಬಗ್ಗೆ ಚಿಂತೆ ಮಾಡಬೇಡಿ. ಈ ಹಿಂದೆ ಬಡ್ತಿ ವಿಚಾರ ಬಂದಾಗ ನಾನು ಒಂದೇ ದಿನ ತೀರ್ಮಾನ ಮಾಡಿದ್ದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ನಿಮ್ಮ ಬದುಕಿಗಾಗಿ ಕೆಲಸ ಮಾಡುತ್ತದೆ. ಐಪಿಎಸ್ ಅಧಿಕಾರಿಗೆ ಎಷ್ಟು ವೇತನ ಬರುತ್ತದೋ ಅಷ್ಟೇ ವೇತನ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಮುಖ್ಯ ಇಂಜಿನಿಯರ್ ಗಳಿಗೂ ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಜತೆಗಿರಲಿ ಎಂದರು.




