ಮೈಶುಗರ್ ಖಾಸಗೀಕರಣ ಮಾಡಬೇಡಿ, ಪುನರುಜ್ಜೀವನಗೊಳಿಸಿ: ಸಿದ್ದರಾಮಯ್ಯ

5 years ago

ಬೆಂಗಳೂರು: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಕೈಬಿಟ್ಟು, ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಅದನ್ನು ಲಾಭದಾಯಕವಾಗಿಸುವತ್ತ ಗಮನ ಹರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತಾಡಿದ ಅವರು, ಮೈಶುಗರ್ ಕಾರ್ಖಾನೆಗೂ, ಮಂಡ್ಯದ ಜನರಿಗೂ ಭಾವನಾತ್ಮಕ ಸಂಬಂಧವಿದೆ. ಹಾಗಾಗಿ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂಬುದು ಇಡೀ ಮಂಡ್ಯ ಜಿಲ್ಲೆಯ ಜನರ ಒಕ್ಕೊರಲ ಒತ್ತಾಯ. ನನ್ನ ಬಳಿಯೂ ಮಂಡ್ಯದ ಹಲವು ರೈತ ಮುಖಂಡರು ಬಂದು ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದರು ಎಂದರು.

ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆಯವರು ಇನ್ನೊಂದೆಡೆ ಚಳವಳಿ ನಡೆಸುತ್ತಿದ್ದಾರೆ. 1933ರಲ್ಲಿ ಮೈಸೂರು ಅರಸರ ಕಾಲದಲ್ಲಿ ಆರಂಭವಾದ ಕಾರ್ಖಾನೆ ಇದು, ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಕೂಡ ಹೌದು. ಹಿಂದೆ ಲಾಭದಲ್ಲಿದ್ದ ಕಾರ್ಖಾನೆ ಈಗ ನಷ್ಟದಲ್ಲಿರಲೂಬಹುದು. ಕಾರ್ಖಾನೆಯನ್ನು ಮುಂದುವರೆಸಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದಾಗ ರೂ.145 ಕೋಟಿ ಅನುದಾನ ನೀಡಿದ್ದೆ. ಒಟ್ಟು 235 ಎಕರೆ ಕಾರ್ಖಾನೆಗೆ ಸಂಬಂಧಿಸಿದ ಜಮೀನಿದೆ. ಈ ಜಮೀನನ್ನು ಅಭಿವೃದ್ಧಿಪಡಿಸಿ, ಅದರಿಂದ ಉತ್ಪತ್ತಿ ಬರುವಂತೆ ಮಾಡಿದರೆ ಸಕ್ಕರೆ ಕಾರ್ಖಾನೆ ನಡೆಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ರವೀಂದ್ರ ಕಲಾಕ್ಷೇತ್ರದ ಎದುರಿರುವ ಕಾರ್ಖಾನೆಗೆ ಸಂಬಂಧಿಸಿದ ಒಂದು ಎಕರೆ ಜಮೀನನ್ನು ಅಭಿವೃದ್ಧಿಪಡಿಸಿ ಅದರಿಂದಲೂ ಆದಾಯ ಗಳಿಸಬಹುದಾಗಿದೆ. ಇದೆಲ್ಲವನ್ನೂ ಸರ್ಕಾರ ಇಚ್ಛಾಶಕ್ತಿಯಿಂದ ಮಾಡಿದರೆ ಕಾರ್ಖಾನೆಯನ್ನು ಲಾಭದಾಯಕವಾಗಿಸಬಹುದು ಎಂಬುದು ನನ್ನ ಅಭಿಪ್ರಾಯ ಎಂದರು.

ಕೊ ಜನರೇಷನ್ ಮತ್ತು ಡಿಸ್ಟಲರಿ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಲು ಅವಕಾಶವಿದೆ. ಈ ಕಾರ್ಖಾನೆ ಹಿಂದೆ 9.5 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರಿಯುತ್ತಿತ್ತು. ಈಗ ಅದೇ ಯಂತ್ರಗಳ ಮೂಲಕ ಕಬ್ಬು ಅರೆಯಲು ಕಷ್ಟವಾಗಿರುವುದರಿಂದ ಆಧುನಿಕ ಯಂತ್ರಗಳನ್ನು ಅಳವಡಿಸಿ, ಕಾರ್ಖಾನೆಯ ಪುನರುಜ್ಜೀವನ ಮಾಡಬೇಕು ಎಂದರು.

ಮಂಡ್ಯದ ಜನರೊಂದಿಗೆ ಭಾವನಾತ್ಮಕ ಸಂಬಂಧ ಇರುವ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೋದರೆ ಅಲ್ಲಿನ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು ಎಂದು ಸಲಹೆ ನೀಡಿದರು.

Leave a Reply