ಬಿಜೆಪಿಯಿಂದ ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಖಾಸಗೀಕರಣದ ಹುನ್ನಾರ: ಎಸ್.ಆರ್.ಪಾಟೀಲ

5 years ago

ಬೆಂಗಳೂರು: ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುತ್ತಿದ್ದು, ಇದೀಗ ಕರ್ನಾಟಕದ @BJP4Karnataka ಸರ್ಕರವೂ ಕೂಡ ಇದೇ ಹಾದಿ ತುಳಿಯುತ್ತಿದೆ.  ಬಿಎಂಟಿಸಿ ಸಂಸ್ಥೆಯ ಖಾಸಗೀಕರಣಕ್ಕೆ @BSYBJP @LaxmanSavadi ಮುಂದಾಗಿರುವುದನ್ನು ನಾನು ಖಂಡಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮೂಲಕ ದನಿ ಎತ್ತಿರುವ ಅವರು, ಬಿಎಂಟಿಸಿಗೆ ಗುತ್ತಿಗೆ ಆಧಾರದಲ್ಲಿ ಖಾಸಗಿ ಬಸ್​ಗಳ ಖರೀದಿಗೆ ಟೆಂಡರ್ ಕರೆಯಲಾಗಿದ್ದು, 1,500 ಡೀಸೆಲ್ ಬಸ್​ಗಳನ್ನು ಕಾರ್ಯಾಚರಣೆಗಿಳಿಸಲು ಸರ್ಕಾರ ಮುಂದಾಗಿದೆ. ಲೀಸ್ ಮಾದರಿಯಲ್ಲಿ ಖಾಸಗೀಕರಣಕ್ಕೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ನೌಕರರ ಭವಿಷ್ಯ ಅತಂತ್ರವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಬಸ್​ಗಳ ಪ್ರವೇಶದಿಂದಾಗಿ ಬಿಎಂಟಿಸಿಗೆ ಮತ್ತಷ್ಟು ನಷ್ಟವಾಗಲಿದೆ. ಜತೆಗೆ ಭವಿಷ್ಯದಲ್ಲಿ ಇಡೀ ಸರ್ಕಾರಿ ಸಾರಿಗೆ ವ್ಯವಸ್ಥೆ ಖಾಸಗಿ ಪಾಲಾಗುವ ಆತಂಕ ಇದೆ. ನೌಕರರಿಗೆ ಸರಿಯಾಗಿ ಸಂಬಳ ಕೊಡಲಾಗದ ಸರ್ಕಾರ ಮುಂದಿನ ದಿನಗಳಲ್ಲಿ ಬಿಎಂಟಿಸಿ ಸಂಸ್ಥೆಯನ್ನೇ ಖಾಸಗಿಯವರಿಗೆ ಕೊಟ್ಟರೂ ಆಶ್ಚರ್ಯವಿಲ್ಲ ಎಂದಿದ್ದಾರೆ.

ಕೆಲ ತಿಂಗಳ ಹಿಂದೆ ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ನೌಕರರು ಸಂಬಳ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟು ಹೋರಾಟ ನಡೆಸಿದ್ದರು. ಅವರ ಬೇಡಿಕೆ ಈಡೇರಿಸೋ ಭರವಸೆ ನೀಡಿದ್ದ ಸರ್ಕಾರ ಈಗ ಬಿಎಂಟಿಸಿ ಖಾಸಗೀಕರಣಕ್ಕೆ ಮುಂದಾಗಿದೆ. ಇದೇ ಸ್ಥಿತಿಯನ್ನು ಕೆ ಎಸ್ ಆರ್ ಟಿ ಸಿ ಗೆ ತಂದರೂ ಆಶ್ಚರ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ನಷ್ಟದ ನೆಪವೊಡ್ಡಿ ಎಲ್ಲ ಸರ್ಕಾರಿ ಸಂಸ್ಥೆಗಳನ್ನೂ ಖಾಸಗಿಯವರಿಗೆ ಕೊಡುವುದು @BJP4India ಅಜೆಂಡಾ. ಕಾಂಗ್ರೆಸ್ ಇಷ್ಟು ವರ್ಷ ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಖಾಸಗಿಯವರಿಗೆ ಕೊಡಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳು ನಷ್ಟಕ್ಕೊಳಗಾದರೆ ಅವುಗಳನ್ನು ಸರಿ ಮಾಡುವ ಹೊಣೆ ಸರ್ಕಾರದ್ದು. ಅದರ ಬದಲು ಖಾಸಗಿ ಲಾಬಿಗೆ ಮಣಿದು ಖಾಸಗೀಕರಣ ಮಾಡುವುದಲ್ಲ ಎಂದು ಅವರು ಕಿಡಿಕಾರಿದ್ದಾರೆ.

Leave a Reply