ಮಂಗಳೂರು: ಮುನ್ನೂರು, ಬೆಳ್ಮ, ಅಂಬ್ಲಮೊಗರು ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಕಳೆದ ಹಲವು ಸಮಯಗಳಿಂದ ವ್ಯಾಪಕ ಭೂಸ್ವಾಧೀನ ನಡೆಯುತ್ತಿದ್ದು,ಆ ಪ್ರದೇಶಗಳಲ್ಲಿ ಉಂಟಾಗಿರುವ ತೊಂದರೆ, ಆತಂಕಗಳ ಕುರಿತು ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಅರ್ಪಿಸಲಾಯಿತು.
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
- ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು: ಸಿದ್ದರಾಮಯ್ಯ
ಉಳ್ಳಾಲ ತಾಲೂಕಿನ ಮುನ್ನೂರು, ಬೆಳ್ಮ, ಅಂಬ್ಲಮೊಗರು ಗ್ರಾಮಗಳು ಕೃಷಿ ಪ್ರಧಾನ ಗ್ರಾಮಗಳಾಗಿರುವುದು ಮಾತ್ರವಲ್ಲ,ಕೃಷಿ ಬಿಕ್ಕಟ್ಟಿನ ಈ ಸಂದರ್ಭದಲ್ಲಿಯೂ ವ್ಯಾಪಕ ಕೃಷಿ ಚಟುವಟಿಕೆಗಳು ಇಂದಿಗೂ ನಡೆಯುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಈ ಗ್ರಾಮದ ಕೃಷಿ ಭೂಮಿಗಳನ್ನು ಖಾಸಗಿ ವ್ಯಕ್ತಿಗಳು ಅನುಮಾನಾಸ್ಪದ ರೂಪದಲ್ಲಿ ಖರೀದಿಸತೊಡಗಿದ್ದಾರೆ. ಏಜಂಟರು, ಸ್ಥಳೀಯ ಮಧ್ಯವರ್ತಿಗಳು, ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಎಂದು ಹೇಳಲ್ಪಟ್ಟವರು ಇದರಲ್ಲಿ ಪ್ರಮುಖರು. ಹೀಗೆ ಸುಮಾರು ಇನ್ನೂರು ಎಕರೆಯಷ್ಟು ಕೃಷಿ ಭೂಮಿ ಈಗಾಗಲೇ ಮಾರಾಟವಾಗಿದೆ ಎಂದು ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಿತು.
ಬಲಾಢ್ಯ ಲಾಬಿಯೊಂದು ಈ ರೀತಿ ಏಜಂಟರನ್ನು ಮುಂದಿಟ್ಟು ಭೂಮಿಯನ್ನು ಖರೀದಿಸುತ್ತಿದೆ ಎಂಬ ಗುಸು ಗುಸು ಮಾತುಗಳು ಕೇಳಲ್ಪಡುತ್ತಿವೆ. ಹೀಗೆ ಒಂದೇ ಭಾಗದಲ್ಲಿ ಭೂಮಿಯನ್ನು ಖರೀದಿಸುತ್ತಿರುವ ಉದ್ದೇಶ ನಿಗೂಢವಾಗಿದೆ. ಈ ಮೂರು ಗ್ರಾಮಗಳಲ್ಲಿ ಒಂದಕ್ಕೊಂದು ಅಂಟಿಕೊಂಡಿರುವ ಜಮೀನನ್ನು ಖರೀದಿಸುವಾಗ ಅಮಾಯಕ ರೈತರನ್ನು ವಿವಿಧ ರೀತಿಯಲ್ಲಿ ಮೋಸಗೊಳಿಸಲಾಗುತ್ತಿದೆ. ಇತ್ತೀಚೆಗೆ ಅಭಿವೃದ್ದಿಯ ನಾಗಾಲೋಟದಲ್ಲಿರುವ ದೇರಳಕಟ್ಟೆಗೆ ತಾಗಿಕೊಂಡಿರುವ ಈ ಗ್ರಾಮಗಳ ಕೃಷಿ ಭೂಮಿಗೆ ಯಾವುದೇ ಬೆಲೆಯಿಲ್ಲ, ಕೃಷಿಯಲ್ಲದ ಅನ್ಯ ಉದ್ದೇಶಗಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ನಂಬಿಸಿ ಅತ್ಯಂತ ಅಗ್ಗದ ದರದಲ್ಲಿ ಏಜಂಟರು ಭೂಮಿಯನ್ನು ಮಾರಾಟ ಮಾಡಿಸಿದ್ದಾರೆ ಎಂದು ಸಮತಿ ಆರೋಪಿಸಿದೆ.
ಕೆಲವೆಡೆ ರಸ್ತೆ ಸಂಪರ್ಕ ಇಲ್ಲ, ಅದರಿಂದ ನಿಮ್ಮ ಭೂಮಿ ಕೊನೆಗೆ ಯಾರಿಗೂ ಬೇಡದಂತಾಗುತ್ತದೆ ಎಂದು ಆತಂಕ ಹುಟ್ಟಿಸಿ ಮಾರಾಟ ಮಾಡಿಸಿರುತ್ತಾರೆ. ಇನ್ನು ದಾಖಲೆಗಳು ಸರಿ ಇಲ್ಲದ, ಕುಟುಂಬಗಳಲ್ಲಿ ತಕರಾರು ಇದ್ದ ಜಮೀನುಗಳನ್ನು ವಿವಿಧ ರೀತಿಯ ತಂತ್ರ, ಆಮಿಷಗಳ ಮೂಲಕ ತಮ್ಮ ಪಾಲು ಮಾಡಿಕೊಂಡಿರುತ್ತಾರೆ. ಕೆಲವೆಡೆ ದಶಕಗಳ ಹಿಂದೆ ಕೈ ಬರಹದ ಮೂಲಕ ಖರೀದಿ ಮಾಡಿದ ಗ್ರಾಮಸ್ಥರ ಭೂಮಿಯನ್ನು ಅವರ ಗಮನಕ್ಕೆ ತಾರದೆ ಮೂಲ ಮಾಲಕರಿಂದ ಖರೀದಿ ಮಾಡಿ ವಂಚಿಸಿದ್ದಾರೆ ಎಂಬ ಆರೋಪವೂ ಇದೆ ಎಂದಿದೆ.
ಮಾರಾಟ ಮಾಡುವುದಿಲ್ಲ ಎಂದು ಹಠ ಹಿಡಿದವರನ್ನು ಬೆದರಿಸಿ, ರಸ್ತೆ ಸಂಪರ್ಕ ಕಡಿತದ ಭೀತಿ ಹುಟ್ಟಿಸಿ ಖರೀದಿ ಮಾಡುವ ಘಟನೆಗಳೂ ನಡೆದಿದೆ. ಈಗಾಗಲೇ ಮಾರಾಟಗೊಂಡಿರುವ ಜಮೀನಿನ ನಡುವೆ ಬಾಕಿ ಉಳಿದಿರುವ ಜಮೀನಿನ ಮಾಲಕರ ಸ್ಥಿತಿ ಅತಂತ್ರವಾಗಿದೆ ಎಂದು ಹೇಳಿದೆ.
ಇಷ್ಟಲ್ಲದೆ, ಇನ್ನೂರು ಎಕರೆಗೂ ವಿಶಾಲವಾಗಿರುವ ರೈತರಿಂದ ವಿವಿಧ ತಂತ್ರಗಳ ಮೂಲಕ ಬಲಾಢ್ಯ ಲಾಭಿಗಳು ಖರೀದಿ ಮಾಡಿರುವ ಜಮೀನುಗಳ ಒಳಗಿರುವ ಸರಕಾರಿ ಜಮೀನು, ರಸ್ತೆ, ನೀರು ಹರಿಯುವ ಕಾಲುವೆಗಳನ್ನು ಅತಿಕ್ರಮಿಸಲಾಗುತ್ತಿದೆ. ಕಾಲುವೆಗಳನ್ನು ಮುಚ್ಚಲಾಗುತ್ತಿದೆ. ಗುಡ್ಡಗಳನ್ನು ಸಮತಟ್ಟುಗೊಳಿಸಲಾಗುತ್ತಿದೆ.ನೂರಾರು ಟಿಪ್ಪರ್ ಗಳಲ್ಲಿ ಮಣ್ಣನ್ನು ಸಾಗಿಸಲಾಗುತ್ತಿದೆ. ಇದೆಲ್ಲವನ್ನು ನಿಯಮ ಬಾಹಿರವಾಗಿ ರಾಜಾರೋಷವಾಗಿ ನಡೆಸಲಾಗುತ್ತಿದೆ. ಈ ಕುರಿತು ಸ್ಥಳೀಯ ಪಂಚಾಯತ್ ಗಳಿಗೆ ಯಾವುದೇ ಮಾಹಿತಿ ಇಲ್ಲ, ಅಥವಾ ಮಾಹಿತಿ ಇಲ್ಲದಂತೆ ವರ್ತಿಸಲಾಗುತ್ತಿದೆ. ಇದೆಲ್ಲದರಿಂದ ಈ ಮೂರೂ ಗ್ರಾಮಗಳಲ್ಲಿ ಅಸಹನೀಯ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೋರಾಟ ಸಮಿತಿಯು ಗಂಭೀರವಾಗಿ ಆರೋಪಿಸಿದೆ.
ಈ ಕುರಿತು ಚರ್ಚಿಸಿದ ಹೋರಾಟ ಸಮಿತಿಯು, ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು ಹಾಗೂ ಸರಿಯಾದ ಕ್ರಮಗಳನ್ನು ಕೈಗೊಂಡು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದೆ.
ಒಂದೇ ಪ್ರದೇಶದಲ್ಲಿ ನೂರಾರು ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಖರೀದಿಸುತ್ತಿರುವ ಉದ್ದೇಶ ಬಹಿರಂಗಗೊಳ್ಳಬೇಕು, ಭವಿಷ್ಯದಲ್ಲಿ ಈ ಜಮೀನಿನಲ್ಲಿ ಯಾವ ಉದ್ಯಮ ತಲೆ ಎತ್ತಲಿದೆ ಎಂಬ ಮಾಹಿತಿ ಸಾರ್ವಜನಿಕ ಗೊಳ್ಳಬೇಕು. ಉದ್ಯಮದ ಉದ್ದೇಶವಾದರೆ ಸರಕಾರದ ಸಂಬಂಧ ಪಟ್ಟ ಇಲಾಖೆಗಳ ಮೂಲಕ ಭೂಸ್ವಾಧೀನ ನಡೆಸುವುದರ ಬದಲಿಗೆ ಏಜಂಟರು, ಭೂಮಾಫಿಯಾ, ರಿಯಲ್ ಎಸ್ಟೇಟ್ ಲಾಭಿಗಳ ಮೂಲಕ ಭೂ ಸ್ವಾಧೀನ ನಡೆಸಲು ಅವಕಾಶ ಆದದ್ದು ಹೇಗೆ ಎಂದು ತಿಳಿಸಬೇಕು ಎಂದು ಒತ್ತಾಯಿಸಿದೆ.
ಕೃಷಿ ಭೂಮಿ ಮಾರಾಟ ಕಾಯ್ದೆ ತಿದ್ದುಪಡಿಯ ದುರುಪಯೋಗ ನಡೆದಿರುವುದು ಇಲ್ಲಿ ಎದ್ದು ಕಾಣುತ್ತಿದ್ದು, ಈ ಕುರಿತು ಸರಿಯಾದ ತನಿಖೆ ನಡೆಸಬೇಕು. ಖರೀದಿ ಮಾಡಲಾದ ಭೂಮಿಯ ನಡುವೆ ಇರುವ ರಸ್ತೆ, ನೀರು ಹರಿಯುವ ಕಾಲುವೆ, ಸರಕಾರಿ ಭೂಮಿಯ ಅತಿಕ್ರಮಣ ನಡೆದಿದ್ದು ಸರಿಯಾದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಜಮೀನು ಖರೀದಿಸುವಾಗ ಬೆದರಿಸುವ, ದಾಖಲೆಗಳು ಸರಿ ಇಲ್ಲದ ಅಮಾಯಕ ರೈತರನ್ನು ಶೋಷಣೆ ನಡೆದಿರುವ ದೂರುಗಳಿದ್ದು ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.ಈಗ ಮಾರಾಟಗೊಂಡಿರುವ ಜಮೀನಿನ ನಡುವೆ ಹಾಗೂ ಅಂಚಿನಲ್ಲಿ ಬಾಕಿ ಉಳಿದಿರುವ ರೈತರ ಜಮೀನಿಗೆ ರಸ್ತೆ ಸಂಪರ್ಕಗಳನ್ನು ಖಾತರಿಪಡಿಸಬೇಕು, ಯಾವುದೇ ಕಾರಣಕ್ಕೂ ರಸ್ತೆ ಸಂಪರ್ಕದ ಕಡಿತಕ್ಕೆ ಅವಕಾಶ ನೀಡಬಾರದು ಎಂದಿದೆ.
ಗದ್ದೆಗಳನ್ನು, ಬೆಟ್ಟಗಳನ್ನು ಸಮತಟ್ಟುಗೊಳಿಸುವ ಹೆಸರಿನಲ್ಲಿ ಅಪಾರ ಪ್ರಮಾಣದ ಮಣ್ಣು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದು, ಪರಿಸರದಲ್ಲಿ ಅಸಹನೀಯ ವಾತಾವರಣ ನಿರ್ಮಾಣಗೊಂಡಿದೆ. ಈ ಕೆಲಸವನ್ನು ತಕ್ಷಣವೇ ತಡೆಯಬೇಕು, ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಕಳೆದ ಹಲವಾರು ವರ್ಷಗಳಿಂದ ಗುಪ್ತವಾಗಿ ಭೂಮಿ ಖರೀದಿ ಕಾರ್ಯದಲ್ಲಿ ಹಲವು ಅನುಮಾನಾಸ್ಪದ ಏಜಂಟರು, ರಿಯಲ್ ಎಸ್ಟೇಟ್ ಲಾಭಿಗಳು ತೊಡಗಿಸಿಕೊಂಡಿದ್ದು, ಈ ವ್ಯಕ್ತಿಗಳ ಹಾಗೂ ಲಾಬಿಗಳ ಭೂಮಿ ಖರೀದಿ, ಹಣಕಾಸು ವ್ಯವಹಾರಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂಬ ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ವಿವರಿಸಲಾಗಿದೆ.
ನಿಯೋಗದಲ್ಲಿ ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ಗೌರವ ಸಂಚಾಲಕ ಕೃಷ್ಣಪ್ಪ ಸಾಲ್ಯಾನ್, ಸಂಚಾಲಕ ಜಯಂತ ನಾಯಕ್, ಗೌರವ ಸಲಹೆಗಾರ ಕೆ.ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಇತರ ಮುಖಂಡರಾದ ಜಯಂತ ಅಂಬ್ಲಮೊಗರು, ಇಬ್ರಾಹಿಂ ಮದಕ, ಸುಂದರ ಅಂಬ್ಲಮೊಗರು ಮುಂತಾದವರು ಉಪಸ್ಥಿತರಿದ್ದರು.




