ಮಾದಿಗ ಮತ್ತು ಅವರ ನಾಯಕತ್ವ ಪ್ರತಿ ಚುನಾವಣೆಯಲ್ಲೂ ಬೆತ್ತಲೆ ಆಗುವುದಕ್ಕೆ ಕಾರಣಗಳೇನು?

2 years ago

ಮಾದಿಗ ರಾಜಕಾರಣಿಗಳೆಲ್ಲರೂ ಒಂದು ತಾತ್ವಿಕವಾಗಿ ಬೆಳೆದು ಸಮುದಾಯದ ಜನರನ್ನು ಸಂಭಾಳಿಸುವ ಉತ್ತರದಾಯಿತ್ವ ಹೊಂದಿಲ್ಲ. ಕೋಲಾರ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳ ಆಕಾಂಕ್ಷಿಗಳಲ್ಲಿ ಗೊಂದಲ ಗೋಜಲು ಏಕಾಏಕಿ ಬಂದು ರಾಜ್ಯದಲ್ಲಿ ತಳಮಳವನ್ನು ಸೃಷ್ಟಿಸಿದೆ.

ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಹೆಚ್.ಮುನಿಯಪ್ಪ ವಿರುದ್ಧ ಭುಗಿಲೆದ್ದ ಆಕ್ರೋಶ ಜನಾಂಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ನೈಜವಾಗಿ ಹೇಳುವುದಾದರೆ ಮುನಿಯಪ್ಪ ಮತ್ತು ಅವರ ಸಾಮಾಜಿಕ ಒಡನಾಟಗಳನ್ನು ಅವಲೋಕಿಸಿದಾಗ ಅವರೊಳಗೆ ಅವರ ಕೊಡುಗೆಯನ್ನು ಕೊಂಡಾಡುವ ಜನರಿಲ್ಲ. ಹೋಗ್ಲಿ ರಾಜ್ಯದಲ್ಲಿ ಹತ್ತಾರು ನಾಯಕರನ್ನು ಬೆಳೆಸಿಲ್ಲ ಎಂಬ ಆರೋಪವೂ ಇದೆ. ಮುನಿಯಪ್ಪ ದೆಹಲಿಯಲ್ಲಿ ನಾಯಕರ ಪ್ರೀತಿ ವಿಶ್ವಾಸ ಹೊಂದಿದ್ದರೆ ಸಾಲದು ಸ್ಥಳೀಯ ನಾಯಕರ ಮತ್ತು ಕಾರ್ಯಕರ್ತರು ಅಪ್ಪಿಕೊಳ್ಳುವ ಮನಸ್ಸು ಇಲ್ಲದ ಕಾರಣ ಗೊಂದಲ ಉದ್ಭವಿಸಿದೆ.

ಕೋಲಾರ ಕಾಂಗ್ರೆಸ್ ನಾಯಕರು ಸಹ ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಮುನಿಯಪ್ಪ ಅವರ ಕುಟುಂಬದ ಸದಸ್ಯರು ಬೇಡ ಎಂದು ಹೇಳುವ ನೆರಳಲ್ಲಿ ಒಂದಷ್ಟು ತಯಾರಿ ಮಾಡಲಿಲ್ಲ. ಬಾಯಾರಿಕೆ ಬಂದಾಗ ಬಾವಿ ತೊಡುವ ಪ್ರಯತ್ನ ಮಾಡಿದ್ದಾರೆ. ಬಹುಶಃ ಈ ನಡಾವಳಿಗಳು ಕಾಂಗ್ರೆಸ್ ಪಕ್ಷದ ನೇತಾರ ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡಿ ಮಾದಿಗರ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಅನೇಕರು ಅವರೊಡನೆ ಚರ್ಚೆ ಮಾಡಿದಾಗ ಮಾದಿಗ ನಾಯಕತ್ವದ ಕೊರತೆಯಿಂದ ಪಕ್ಷ ಬಳಲುತ್ತಿರುವ ಸಂಗತಿ ಹೇಳಿದ್ದಾರೆ.

ಅದೆ ಭಾಜಪ ಯಾವುದೇ ಕಾರಣಕ್ಕೂ ಅಭ್ಯರ್ಥಿ ಆಯ್ಕೆ ಮಾಡುವಾಗ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕೋಲಾರ ಬಲಗೈ ಸಮುದಾಯದವರಿಗೆ ಎಂದು ಕೊನೆಯ ಕ್ಷಣದಲ್ಲಿ ಬೇಡಿಕೆಗಳನ್ನು ಮುಂದಿಟ್ಟು ಪೇಚಾಟ ಆರಂಭಿಸಿದ್ದಾರೆ. ಇದನ್ನು ಬಹಳ ದಿನಗಳ ಹಿಂದೆ ಕ್ಷೇತ್ರ ಹಂಚಿಕೆ ಮಾಡಿದ್ದರೆ ಮಾದಿಗ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಆಗುತ್ತಿರಲಿಲ್ಲ.

ಪ್ರತಿ ಚುನಾವಣೆಯಲ್ಲಿ ಮಾದಿಗ ಸಮುದಾಯ ಇತರೆ ಪರಿಶಿಷ್ಟ ಜಾತಿಗಳ ನಡುವೆ ರಾಜಕೀಯ ಬಂಡುಕೋರ ಸಮುದಾಯ ಎಂಬಂತೆ ಬಿಂಬಿಸಲಾಗುತ್ತಿದೆ. ಈ ಬೆಳವಣಿಗೆ ಆ ಸಮುದಾಯದ ಶ್ರೇಯೋಭಿವೃದ್ಧಿಗೆ ಮಾರಕ. ಇನ್ನೂ ಮುಂದಾದರೂ ಕಾಂಗ್ರೆಸ್ ಮತ್ತು ಬಿಜೆಪಿ ಪರಿಶಿಷ್ಟ ಸಮುದಾಯದ ನಾಯಕರು ಒಂದು ದೃಷ್ಟಿಕೋನ ತಾಳಬೇಕು.

ಹಾಗೆಯೇ ಮುನಿಯಪ್ಪ ವಿರುದ್ಧ ಎದ್ದಿರುವ ಆರೋಪಗಳಿಂದ ಮುಕ್ತವಾಗಬೇಕು. ಸಮುದಾಯ ಒಂದು ಹೆಬ್ಬಂಡೆ ಅಲ್ಲ. ಅಲ್ಲಿ ಮನುಷ್ಯ ಸಂಬಂಧಗಳ ಜೋಡಣಾ ಕಸೂತಿ ಕೆಲಸ ಆಗಬೇಕಾಗಿದೆ. ಮಾದಿಗ ರಾಜಕಾರಣಿಗಳು ಮೊದಲು ಸಮುದಾಯದ ಕಣ್ಣಾಗಿ ಒಂದಷ್ಟು ಬದಲಾವಣೆಗಳನ್ನು ತರಬೇಕು. ಸುಖಾಸುಮ್ಮನೆ ಸಮುದಾಯವನ್ನು ಎಳೆಯುವುದು ಬೆತ್ತಲೆ ಆಗುವುದಕ್ಕೆ ಅವಕಾಶವನ್ನು ನೀಡಬಾರದು. ಸದಾ ಈ ಸಮುದಾಯ ಅಪಮಾನ ಮಾಡುವ ರಾಜಕಾರಣ ಅವರನ್ನು ಅನ್ಯರೂ ಬೆಂಬಲಿಸುವ ಗೋಜಿಗೆ ಹೋಗುವುದಿಲ್ಲ.

  • ದಾಸನೂರು ಕೂಸಣ್ಣ, ಸಮುದಾಯದ ಚಿಂತಕರು

Leave a Reply