ಜಪಾನ್ ಪ್ರವಾಸ ಕೈಗೊಳ್ಳುವಾಗೆಲ್ಲ ಮೋದಿ ನೋಟು ನಿಷೇಧಿಸುವುದು ಏಕೆ?: ಮಲ್ಲಿಕಾರ್ಜುನ ಖರ್ಗೆ

3 years ago

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜಪಾನ್‍ಗೆ ಪ್ರವಾಸ ಕೈಗೊಳ್ಳುವಾಗಲೆಲ್ಲ ದೇಶದಲ್ಲಿ ನೋಟು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸುತ್ತಾರೆ. ಈ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಅವರು, ಈ ಮೊದಲು ಜಪಾನ್ ಪ್ರವಾಸ ಕೈಗೊಳ್ಳುವ ಮೊದಲು 1000 ಮತ್ತು 500ರೂ. ನೋಟುಗಳನ್ನು ನಿಷೇಧ ಮಾಡುವ ಅಧಿಸೂಚನೆ ಹೊರಡಿಸಿದ್ದರು. ಈಗ ಮತ್ತೊಮ್ಮೆ ಜಪಾನ್ ಪ್ರವಾಸ ಕೈಗೊಳ್ಳುತ್ತಿದ್ದು, 2000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದಾರೆ. ನೋಟು ನಿಷೇಧದಿಂದ ದೇಶಕ್ಕೆ ಲಾಭವಾಗುವುದಿಲ್ಲ. ಇದು ಅವರಿಗೆ ತಿಳಿಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ವಿದೇಶ ಪ್ರವಾಸಕ್ಕೆ ಮುನ್ನ ನೋಟು ನಿಷೇಧಿಸುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ದ್ವೇಷಮಯ ವಾತಾವರಣವಿತ್ತು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಇನ್ನು ಮುಂದೆ ಕಾಂಗ್ರೆಸ್‍ನಲ್ಲಿ ವಾತಾವರಣ ಬದಲಾಗಿದೆ. ಎಲ್ಲರೂ ಪ್ರೀತಿಯಿಂದ ವಾಸಿಸಲಿದ್ದಾರೆ. ನಮ್ಮದು ಪ್ರೀತಿಯ ಸರ್ಕಾರ. ನುಡಿದಂತೆ ನಡೆಯುವ ಸರ್ಕಾರ. ನಾವು ಚುನಾವಣೆಗೂ ಮೊದಲು ನೀಡಿದ್ದ ಐದು ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟದಲ್ಲೇ ಜಾರಿಗೊಳಿಸುತ್ತೇವೆ ಎಂದರು.

ಪ್ರೀತಿಯ ಗೆಲುವು: ರಾಹುಲ್ ಗಾಂಧಿ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿ ಹಣ, ಅಧಿಕಾರ, ಪೊಲೀಸ್ ಬಲ ಎಲ್ಲವನ್ನೂ ಬಳಕೆ ಮಾಡಿತು. ಆದರೆ, ಜನ ಎಲ್ಲವನ್ನೂ ತಿರಸ್ಕರಿಸಿದ್ದಾರೆ. ಭ್ರಷ್ಟ ಸರ್ಕಾರವನ್ನು ಸೋಲಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಜನ ಕಂಡಿದ್ದಂತಹ ಭ್ರಷ್ಟಾಚಾರದ ಸರ್ಕಾರ ಇನ್ನು ಇರುವುದಿಲ್ಲ. ನಾವು ಭ್ರಷ್ಟ ಮುಕ್ತ ಸರ್ಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ದ್ವೇಷ ರಾಜಕಾರಣದ ಮಾರುಕಟ್ಟೆಯನ್ನು ಕನ್ನಡಿಗರು ಮುಚ್ಚಿಸಿ ಪ್ರೀತಿಯ ಅಂಗಡಿಯನ್ನು ತೆರೆದಿದ್ದಾರೆ.
ಚುನಾವಣೆ ವೇಳೆ ನಾವು ನೀಡಿದ್ದ ಐದು ಗ್ಯಾರಂಟಿಗಳನ್ನು ಇಂದು ನಡೆಯುವ ಮೊದಲ ಸಚಿವ ಸಂಪುಟ ಸಭೆಯಲ್ಲಿ ಜಾರಿಗೆ ತರಲಾಗುವುದು. ಭರವಸೆಗಳು ಇನ್ನು ಮುಂದೆ ಕಾಯ್ದೆಗಳಾಗಲಿವೆ. ಕಾಂಗ್ರೆಸ್‍ಅನ್ನು ಸ್ಪಷ್ಟವಾಗಿ ಬೆಂಬಲಿಸಿದ್ದಕ್ಕಾಗಿ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಸಣ್ಣ ವ್ಯಾಪಾರಿಗಳು, ಯುವಕರು, ಮಹಿಳೆಯರು, ಕೃಷಿಕರು, ಕಾರ್ಮಿಕರ ಶ್ರೇಯೋಭಿವೃದ್ಧಿಯನ್ನು ಆದ್ಯತೆಯನ್ನಾಗಿಟ್ಟುಕೊಂಡು ಆಡಳಿತ ನಡೆಸಲಿದೆ ಎಂದು ಹೇಳಿದರು.

Leave a Reply