ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜಾತ್ಯತೀತ ಶಕ್ತಿಗಳ ಶಕ್ತಿಗಳ ಒಗ್ಗಟ್ಟು ಪ್ರದರ್ಶನದ ವೇದಿಕೆಯಾಗಿ ಪರಿಣಮಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಂದೇಶವೊಂದನ್ನು ರವಾನಿಸಿತು. ಪ್ರಮಾಣವಚನ ಸಮಾರಂಭದಲ್ಲಿ ವಿವಿಧ ಪಕ್ಷಗಳ ಪ್ರಮುಖ ರಾಷ್ಟ್ರೀಯ ನಾಯಕರುಗಳ ಆತ್ಮೀಯ ಸಂಭಾಷಣೆ, ಪರಸ್ಪರ ಉಭಯ ಕುಶಲೋಪರಿಗಳು ಗಮನ ಸೆಳೆದವು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಮಾನ ಮನಸ್ಕಪಕ್ಷಗಳು ಒಂದಾಗಬೇಕೆನ್ನುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಇಂದಿನ ಪ್ರಮಾಣವಚನ ಸಮಾರಂಭ ಗೋಚರಿಸಿತು.

ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಅಂಗಪಕ್ಷಗಳ ಎಲ್ಲ ನಾಯಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ತಾವು ಇನ್ನು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿದರು. ಈ ಸಮಾರಂಭಕ್ಕೆ ಆಗಮಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಲಾಗಿತ್ತಾದರೂ ಅನಿವಾರ್ಯ ಕಾರಣಗಳಿಂದ ಅವರು ಈ ಸಮಾರಂಭದಲ್ಲಿ ಭಾಗಿಯಾಗಲಿಲ್ಲ.

ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎನ್‍ಸಿಪಿಯ ಶರದ್ ಪವಾರ್, ಎಡಪಕ್ಷಗಳ ಮುಖಂಡರಾದ ಸೀತಾರಾಮ್ ಯೆಚೂರಿ, ಡಿ.ರಾಜ, ಜಮ್ಮು-ಕಾಶ್ಮೀರದ ಮುಖಂಡರಾದ ಫಾರೂಕ್ ಅಬ್ದುಲ್ಲಾ, ಮೆಹಬೂಬ ಮಫ್ತಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ರಣದೀಪ್‍ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್, ನಟ ಕಮಲ್‍ಹಾಸನ್ ಸೇರಿದಂತೆ ಅನೇಕ ನಾಯಕರು ಗಮನ ಸೆಳೆದರು.




