ಕೆಟ್ಟ ಪದ ಹೇಳಿಲ್ಲವೆಂದ ಮೇಲೆ ಪ್ರಮಾಣ ಮಾಡಲು ಭಯವೇಕೆ?

1 year ago

ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿಟಿ ರವಿ ಅವರು ರಾಜ್ಯದ ಸಚಿವೆಯಾಗಿರುವ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ವಿಧಾನ ಪರಿಷತ್ತಿನಲ್ಲಿ ಅತ್ಯಂತ ಕೆಟ್ಟ ಪದವನ್ನು ಬಳಸಿ ನಿಂದಿಸಿರುವಂತಹ ಆರೋಪವನ್ನು ಹೊತ್ತಿರುತ್ತಾರೆ.

ಇವರು ನಾನು ಈ ಪದವನ್ನು ಬಳಸಿಯೇ ಇಲ್ಲ ಎಂದು ಮಾಧ್ಯಮದ ಮುಂದೆ ಪದೇಪದೇ ಹೇಳುತ್ತಿದ್ದಾರೆ, ಇದೇ ಸಂದರ್ಭದಲ್ಲಿ ಸಚಿವರು ತಾವು ಅಂತಹ ಪದವನ್ನು ಹೇಳಿಲ್ಲ ಎನ್ನುವುದಾದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮುಂದೆ ನಿಮ್ಮ ಕುಟುಂಬ ಸಮೇತರಾಗಿ ಬಂದು ಪ್ರಮಾಣವನ್ನು ಮಾಡಿ ನಾನು ಸಹ ನೀವು ಕೆಟ್ಟ ಪದವನ್ನು ಆಡಿದ್ದೀರಿ ಎಂದು ಪ್ರಮಾಣ ಮಾಡುತ್ತೇನೆ ಉಳಿದದ್ದನ್ನು ದೇವರಿಗೆ ಬಿಡೋಣ ಎಂದು ಸವಾಲು ಹಾಕಿದ್ದಾರೆ.

ಹಿಂದೂ ಧರ್ಮವನ್ನು ಗುತ್ತಿಗೆ ಪಡೆದ ರೀತಿಯಲ್ಲಿ ವರ್ತಿಸುವ ಮತ್ತು ತಮ್ಮಂತಹ ದೇವರು ಭಕ್ತರು ಮತ್ತೊಬ್ಬರು ಇಲ್ಲ ಎನ್ನುವ ರೀತಿಯಲ್ಲಿ ನಡೆದುಕೊಳ್ಳುವ ಸಿಟಿ ರವಿ ಅವರು ,ಇಂತಹ ಕೆಟ್ಟ ಪದವನ್ನು ತಾವು ಬಳಸಿಲ್ಲ ಎನ್ನುವುದು ಸತ್ಯವಾದರೆ ದೇವರ ಮುಂದೆ ಪ್ರಮಾಣ ಮಾಡಲು ನಿಮಗೆ ಭಯ ಯಾಕೆ?

ನೀವು ವಿಧಾನ ಪರಿಷತ್ತಿನಲ್ಲಿ ಇಂತಹ ಕೆಟ್ಟ ಪದವನ್ನು ಬಳಸಿಲ್ಲ ಎಂದು ನಿಮ್ಮ ಜೊತೆಯಲ್ಲಿ ಕುಳಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು, ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ,ಜೊತೆಗೆ ಮಹಿಳಾ ವಿಧಾನ ಪರಿಷತ್ತಿನ ಸದಸ್ಯರು ಪದೇ,ಪದೇ ಹೇಳುತ್ತಿದ್ದಾರೆ, ನಿಮ್ಮ ಮಾತು ಸತ್ಯ ಎನ್ನುವುದಾದರೆ ಅವರು ಸಹ ನಿಮ್ಮ ಜೊತೆಯಲ್ಲಿ ಒಂದು ಸಿಟಿ ರವಿ ರವರು ಇಂತಹ ಮಾತು ಹೇಳಿಲ್ಲ ,ಎಂದು ಭಗವಂತನ ಮುಂದೆ ಪ್ರಮಾಣವನ್ನು ಮಾಡಿ, ನಿಮ್ಮ ಸತ್ಯವಂತಿಕೆಯನ್ನ ಸಾಕ್ಷೀಕರಿಸಿ.

ಸಿಟಿ ರವಿರವರು ಅದ್ಭುತವಾದಂತಹ ಸಾಧನೆಯನ್ನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಚಿಕ್ಕಮಂಗಳೂರಿನಲ್ಲಿ ಹೂವಿನ ಮಳೆಯನ್ನು ಸುರಿಸಿ ಅಭಿನಂದನೆಯನ್ನು ಸಲ್ಲಿಸಿರುವುದು ಅವರ ಸಾಧನೆಗೆ ಏನೇನೂ ಸಾಲದು! ಆದುದರಿಂದ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಬಿಜೆಪಿಯಲ್ಲಿರುವ ರಾಜ್ಯದ ಮತ್ತು ದೇಶದ ಇದೇ ಮನಸ್ಥಿತಿಯ, ಇಂತಹದೇ ಸಂಸ್ಕೃತಿಯ ಆರಾಧಕರನ್ನು, ಮುಖ್ಯ ಅತಿಥಿಗಳನ್ನಾಗಿ ಕರೆಸಿ ಅವರಿಂದ ಭಾಷಣವನ್ನು ಮಾಡಿಸಿ, ದೊಡ್ಡ ಮಟ್ಟದಲ್ಲಿ ಸನ್ಮಾನವನ್ನು ಮಾಡಿ ಇವರಿಗೆ ಮಹಾನ್ ಸಾಂಸ್ಕೃತಿಕ, ಸಜ್ಜನಿಕೆಯ, ಸುಸಂಸ್ಕೃತ, ಸಂಭಾವಿತ ನಾಯಕ, ಎಂದು ಬಿರುದನ್ನು ಕೊಟ್ಟು ಸನ್ಮಾನಿಸಿ ಮತ್ತಷ್ಟು ಸಂಭ್ರಮಿಸಿ!

ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳುವುದರ ಮೂಲಕ ದೊಡ್ಡವರಾಗಬಹುದು, ಇಲ್ಲದಿದ್ದರೆ ಸುಳ್ಳು ಹೇಳಿಕೊಂಡು ಆತ್ಮಸಾಕ್ಷಿಯನ್ನ ವಂಚಿಸಿ ಕೊಂಡು ಹೆಚ್ಚು ದಿನಗಳ ಕಾಲ ಸಾರ್ವಜನಿಕ ಜೀವನದಲ್ಲಿ ನಾಯಕರಾಗಿ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ, ಬಾಯಿ ಸಂಸ್ಕೃತಿಯನ್ನ ತೋರಿಸುತ್ತದೆ, ಮಾತುಗಳು ಸಂಸ್ಕಾರವನ್ನು ತಿಳಿಸುತ್ತದೆ, ಎನ್ನುವಂತಹ ಹಿರಿಯರ ಅನುಭವದ ನುಡಿಗಳು ನಾಯಕರುಗಳ ನಡವಳಿಕೆಯಿಂದ ಸಾಬೀತಾಗುತ್ತಿದೆ.

ವಿಧಾನಪರಿಷತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಯಾವುದೇ ಕಾರಣಕ್ಕೂ ಪೊಲೀಸರು ಪ್ರವೇಶ ಮಾಡುವಂತಿಲ್ಲ ಎನ್ನುವ ಕಾನೂನು ಸಹ ಸರಿಯಲ್ಲ.

ಸದಸ್ಯರಿಗೆ ಆರೋಗ್ಯದ ಸಮಸ್ಯೆಗಳು ಸಂಭವಿಸಿದ ಸಂದರ್ಭದಲ್ಲಿ ವೈದ್ಯರು ಬಂದು ಸದನದ ಒಳಗಡೆ ಚಿಕಿತ್ಸೆಯನ್ನ ಕೊಡಬಹುದು, ಆಗ ಅದಕ್ಕೆ ಯಾರು ಅನುಮತಿಯನ್ನು ಕೊಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಇಲ್ಲಿ ಕೆಲವು ಘಟನೆಗಳು ಸಂಭವಿಸಿದಾಗ ಬೇರೆ, ಬೇರೆ, ವ್ಯಕ್ತಿಗಳು ಸದನದಲ್ಲಿ ಪ್ರವೇಶವನ್ನು ಮಾಡುತ್ತಾರೆ, ಆದರೆ ಸದಸ್ಯರ ನಡವಳಿಕೆ ಮಿತಿ,ಮೀರಿ ದಾಗ ಮತ್ತು ಅವರುಗಳ ನಡುವೆ ಕೈ, ಕೈ, ಮಿಲಾಯಿಸಿದಾಗ ಮಾರ್ಷಲ್ ಗಳು ಎಷ್ಟೇ ಪ್ರಯತ್ನ ಪಟ್ಟರು ನಿಯಂತ್ರಣಕ್ಕೆ ಬರದಿದ್ದರೆ, ಇಂತಹ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡಲು ಅನಿವಾರ್ಯವಾಗುತ್ತದೆ.

ಕಾನೂನಿನ ಪಾಲನೆಯ  ವಿಚಾರದಲ್ಲಿ ಇಲ್ಲಿ ಎಲ್ಲರೂ ಸಮಾನರು. ಸದನದಲ್ಲಿ ಸಿಟಿ ರವಿ ರವರು ಆಡಿರುವ ಮಾತುಗಳ ವಿಚಾರದಲ್ಲಿ ತನಿಕಖೆಯನ್ನ ಮಾಡಬೇಕಾದ ಸಂದರ್ಭದಲ್ಲಿ ಮಾಹಿತಿಯನ್ನ ಸಂಗ್ರಹಿಸುವ ಹಿನ್ನೆಲೆಯಲ್ಲಿ, ತನಿಖಾ ಅಧಿಕಾರಿಗಳು ಸದನದಲ್ಲಿ ಬಂದು ತನಿಖೆಯನ್ನ ಮಾಡಲು ಅನುಮತಿ ಕೊಡದಿದ್ದರೆ, ಘಟನೆ ನಡೆದ ಸ್ಥಳದಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಹೇಗೆ ಸಾಧ್ಯವಾಗುತ್ತದೆ. ವಿಶೇಷವಾದ ಪ್ರಕರಣಗಳಲ್ಲಿ ಮತ್ತು ಗಂಭೀರವಾದ ಪ್ರಕರಣದಲ್ಲಿ ಸಭಾ ಪ್ರಮುಖರು ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಮತ್ತಷ್ಟು ಗಂಭೀರವಾಗಿ ಚಿಂತಿಸಬೇಕಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply