ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಜನರ ಗಮನ ಸೆಳೆದು ಜನ ಮೆಚ್ಚುಗೆ ಪಾತ್ರವಾಗಿವೆ. ಹೀಗಾಗಿ ಬಿಜೆಪಿಯವರು ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಅವುಗಳನ್ನು ಮೋದಿ ಕಾ ಗ್ಯಾರಂಟಿ ಎಂದು ಬಿಂಬಿಸಲಾಗುತ್ತಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳನ್ನು ವಿಶ್ವಸಂಸ್ಥೆಯ ಪ್ರತಿನಿಧಿಗಳು ಪ್ರಶಂಸಿಸಿದ್ದಾರೆ. ಜಾಗತಿಕವಾಗಿ ಯೂನಿವರ್ಸಲ್ ಬೇಸಿಕ್ ಇನ್ಕಂ ಆಧಾರದ ಮೇಲೆ ಜನರ ಖರೀದಿ ಸಾಮರ್ಥ್ಯವನ್ನು ಅಂದಾಜಿಸಲಾಗುತ್ತದೆ. ಕರ್ನಾಟಕದಲ್ಲಿ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ ಎಂಬುದು ಈ ವರದಿಯಿಂದ ತಿಳಿದು ಬಂದಿದೆ. ಆದರೆ ಒಟ್ಟಾರೆ ದೇಶದಲ್ಲಿ ಖರೀದಿ ಸಾಮರ್ಥ್ಯ ಕುಸಿತಗೊಂಡಿದೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ದುರ್ಬಲ ವರ್ಗಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಪ್ರಯತ್ನ ಮಾಡಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ಪಡೆಯುವ ಮಹಿಳೆಯರು ಅದರಿಂದ ಹೋಟೆಲ್, ಬಟ್ಟೆ ಅಂಗಡಿ ಸೇರಿದಂತೆ ಅನೇಕ ವ್ಯಾಪಾರ ಚಟುವಟಿಕೆಗಳನ್ನು ಆರಂಭಿಸಿ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದ್ದಾರೆ ಎಂದರು.
ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದಾಗ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದರು. ಬಿಜೆಪಿಯ ಎಲ್ಲಾ ನಾಯಕರೂ ಯೋಜನೆಗಳನ್ನು ವಿರೋಧ ಮಾಡಿದರು. ನಾವು ಅಧಿಕಾರಕ್ಕೆ ಬಂದು ಪಂಚಖಾತ್ರಿಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ ಬಳಿಕ ಬಿಜೆಪಿ ಬೇರೆಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಲು ಶುರು ಮಾಡಿದೆ ಎಂದರು.
ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ದೆಹಲಿ ಸೇರಿದಂತೆ ವಿಧಾನಸಭೆ ಚುನಾವಣೆಗಳು ನಡೆದ ಕಡೆಯಲ್ಲೆಲ್ಲಾ ಗ್ಯಾರಂಟಿಗಳ ಭರವಸೆ ನೀಡಿ ಪ್ರಚಾರ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೋದಿ ಕಿ ಗ್ಯಾರಂಟಿ ಎಂದು ಜಾಹೀರಾತು ನೀಡಿದರು. ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುವುದಾಗಿದ್ದರೆ ಟೀಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಸರ್ಕಾರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡಿನಿಸ್ಟೇಟರ್ ಸಂಸ್ಥೆ ಗ್ಯಾರಂಟಿ ಯೋಜನೆಗಳನ್ನು ಪ್ರಶಂಸಿಸಿ ಕೆಲವು ಸಲಹೆಗಳನ್ನು ನೀಡಿದೆ. ಅದರ ಮುಖ್ಯಸ್ಥ ಜಿತೇಂದ್ರ ಸಿಂಗ್, ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಇಷ್ಟೆಲ್ಲಾ ಇದ್ದರೂ ವಿರೋಧಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಜಕೀಯಪ್ರೇರಿತರಾಗಿ ಹೇಳಿಕೆ ನೀಡುವುದನ್ನು ಬಿಟ್ಟು ಈಗಲಾದರೂ ಸಕಾರಾತ್ಮಕ ಟೀಕೆ ಮಾಡುವುದನ್ನು ಕಲಿತುಕೊಳ್ಳಿ. ವಿರೋಧಪಕ್ಷಗಳು ಟೀಕೆ ಮಾಡುವುದನ್ನು ನಾನು ಬೇಡ ಎನ್ನುವುದಿಲ್ಲ. ಜನರಿಗೆ ತೊಂದರೆಯಾಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತರಲಿ ಎಂದರು.
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದ್ರಿ. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಚುನಾವಣೆ ಮುಗಿದಿದೆಯಲ್ಲಾ ಈಗ ಗ್ಯಾರೆಂಟಿಗಳು ನಿಂತು ಹೋಗಿವೆಯಾ ಎಂದು ಪ್ರಶ್ನಿಸಿದರು.
ನಾವು ಸಮಾಜದ ಶೇ 90ರಷ್ಟು ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ ಶೇ10ರಷ್ಟು ಜನರಿಗೆ ಶಕ್ತಿ ತುಂಬುತ್ತಿದ್ದೀರಿ. 94ರಲ್ಲಿ 34% ಇದ್ದ ಶ್ರೀಮಂತರ ಸಂಖ್ಯೆ ಈಗ 57% ಗೆ ಹೆಚ್ಚಾಗಿದೆ. 50% ಜನರಿಗೆ ಇರುವ ಆರ್ಥಿಕ ಶಕ್ತಿ 15% ಗೆ ಕುಸಿದಿದೆ. ಇದು ಆತಂಕಕಾರಿ ಸಂಗತಿ ಅಲ್ಲವೇ? ಶ್ರೀಮಂತರು ಶ್ರೀಮಂತರಾದರೆ, ಬಡವರು ಬಡವರಾಗುತ್ತಿದ್ದಾರೆ. ಈ ಅಸಮಾನತೆಯನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 11 ವರ್ಷಗಳಾದರೂ ಸರ್ಕಾರ ವಿಧವಾ ವೇತನ, ಅಂತ್ಯೋದಯ ಯೋಜನೆ, ವೃದ್ಧಾಪ್ಯ ವೇತನವನ್ನು ಒಂದು ರೂಪಾಯಿ ಹೆಚ್ಚಿಸಿಲ್ಲ. ವಸತಿ ಯೋಜನೆಗಳಿಗೆ ಹೆಚ್ಚಳ ಮಾಡಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕ್ಯಾಪಿಟಲ್ ಹೂಡಿಕೆಗಳಿಗೆ 2,70,695 ಕೋಟಿ ರೂ. ಕಾಮಗಾರಿಗಳನ್ನು ಅನುದಾನ ಒದಗಿಸದೇ ತೆಗೆದುಕೊಂಡಿರಿ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ 1,66,426 ಕೋಟಿ ರೂ. ನೀಡಲಾಗಿದೆ. 36 ಸಾವಿರ ಕೋಟಿ ರೂ. ಬಾಕಿ ಬಿಲ್ಗಳು ಬಿಜೆಪಿಯ ಬಳುವಳಿ. ನಿಮ್ಮಿಂದ ನಾವು ಕಷ್ಟ ಪಡುವ ಸಂದರ್ಭ ಒದಗಿದೆ ಎಂದರು.
ಕೇಂದ್ರ ಸರ್ಕಾರ 72 ಸಾವಿರ ಕೊಟ್ಟರೆ ರಾಜ್ಯ ಸರ್ಕಾರ 42 ಸಾವಿರ ಕೊಡುತ್ತದೆ. ಕರ್ನಾಟಕ 2025 – 26ನೇ ಸಾಲಿಗೆ 5 ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಡುತ್ತಿದ್ದೇವೆ. ನಮಗೆ ಅಂದಾಜು 51 ಸಾವಿರ ಕೋಟಿ ವಾಪಸ್ ಬರಬೇಕಾಗುತ್ತದೆ. ಹಾಗೆಂದು ಕೇಳಿದರೆ ಕೇಂದ್ರ ಸರ್ಕಾರದ್ದು ಮಾತನಾಡಬಾರದೆಂದು ಅಶೋಕ್ ಪ್ರಶ್ನಿಸುತ್ತಾರೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಬಡವರಿಗೆ ಕೊಡುವ ಈ ಯೋಜನೆಗಳಿಗೆ ಒಂದು ರೂಪಾಯಿ ಹೆಚ್ಚಳವಾಗಿಲ್ಲ. ರಾಜ್ಯಕ್ಕೆ 15ನೇ ಹಣಕಾಸು ಯೋಜನೆಯಡಿ ಅನುದಾನದಲ್ಲಿ ಆಗಿರುವ ಅನ್ಯಾಯವನ್ನು ನಾವು ಪ್ರಶ್ನಿಸಬಾರದಂತೆ. ಅನ್ಯಾಯ ಸರಿ ಮಾಡಿ ಎಂದು ಕೇಳಬಾರದಾ? ಎಂದು ಪ್ರಶ್ನಿಸಿದರು.
ನೀವು ಕೇಂದ್ರದಿಂದಲೂ ಅನುದಾನ ತಂದಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷರು 11,495 ಕೋಟಿ ರೂ. ಶಿಫಾರಸ್ಸು ಮಾಡಿದರು. ನೀವು ಈ ಬಗ್ಗೆ ಕೇಳಲಿಲ್ಲ ಎಂದರು.




